ಡಾ. ಸಾಯಿಗೀತಾ ಹೆಗ್ಡೆ, ಬಾಬು ಕೊರಗ, ಡಾ. ಮೀನಾಕ್ಷಿ ಆರ್ಮುಗಂರಿಗೆ ತಮಿಳುನಾಡು ರಾಜ್ಯಪಾಲರಿಂದ ಗೌರವ

Update: 2024-12-18 16:37 GMT

ಕೊಣಾಜೆ: ತಮಿಳು ಕವಿ ಸುಬ್ರಹ್ಮಣ್ಯ ಭಾರತೀಯಾರ್‌ ಅವರ ಜನುಮದಿನವನ್ನು ಕೇಂದ್ರ ಸರಕಾರವು ಭಾರತೀಯ ಭಾಷಾ ದಿವಸವೆಂದು ಆಚರಿಸುತ್ತಿದ್ದು , ಈ ಪ್ರಯುಕ್ತ ತಮಿಳುನಾಡು ರಾಜಭವನದ ಭಾರತೀಯಾರ್‌ ಮಂಡಪಂನಲ್ಲಿ ಆಯೋಜಿಸಲಾಗಿದ್ದ ಭಾರತೀಯ ಭಾಷಾದಿನಾಚರಣೆಯ ಕಾರ್ಯಕ್ರಮದಲ್ಲಿ ತಮಿಳಿನ ತಿರುಕ್ಕುರಳ್‌ ಗ್ರಂಥವನ್ನು ತುಳು ಹಾಗೂ ಕೊರಗ ಭಾಷೆಗಳಿಗೆ ಅನುವಾದಿಸಿದ ಡಾ. ಸಾಯಿಗೀತಾ ಹೆಗ್ಡೆ, ಬಾಬು ಕೊರಗ ಹಾಗೂ ಡಾ. ಮೀನಾಕ್ಷಿ ಆರ್ಮುಗಂ ಅವರಿಗೆ ತಮಿಳುನಾಡಿನ ರಾಜ್ಯಪಾಲರಾದ ಆರ್. ಎನ್.‌ ರವಿ ಅವರು ಗೌರವಿಸಿ ಸನ್ಮಾನಿಸಿದರು.

ತಮಿಳಿನ ಸಂಗಂ ಕಾಲದ ತಿರುವಳ್ಳುವರ್‌ ವಿರಚಿತ ತಿರುಕ್ಕುರಳ್‌ ಎಂಬ ನೀತಿ ಕಾವ್ಯದ ತುಳು ಹಾಗೂ ಕೊರಗ ಭಾಷಾ ಅನುವಾದ ಯೋಜನೆಗಳಿಗೆ ಚೆನೈಯ ಸೆಂಟ್ರಲ್‌ ಇನ್ಷ್‌ಟಿಟ್ಯೂಟ್‌ ಆಫ್‌ ತಮಿಳು ಸಂಸ್ಥೆಯು ನಿಟ್ಟೆ ವಿಶ್ವವಿದ್ಯಾನಿಲಯದ ತುಳು ಅಧ್ಯಯನ ಕೇಂದ್ರಕ್ಕೆ ಅನುದಾನ ನೀಡಿತ್ತು.

ಅನುದಾನ ನೀಡಿದ ಸಂಸ್ಥೆಯೇ ಅದನ್ನು ಮುದ್ರಿಸಿ ಪ್ರಕಟಿಸಿತ್ತು. ಈ ಅನುವಾದಿತ ಗ್ರಂಥಗಳನ್ನು 2023ರ ಭಾರತೀಯ ಭಾಷಾ ದಿನದ ಪ್ರಯುಕ್ತ ವಾರಣಾಸಿಯಲ್ಲಿ ನಡೆದ ʼಕಾಶೀ ತಮಿಳು ಸಂಗಮಂʼನಲ್ಲಿ ಭಾರತ ಸರಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಿದ್ದರು. ಇದೀಗ ಇವರ ಅಮೂಲ್ಯ ಸೇವೆಯನ್ಬು ಪರಿಗಣಸಿ ಭಾರತೀಯ ಭಾಷಾದಿನಾಚರಣೆಯ ಕಾರ್ಯಕ್ರಮದಲ್ಲಿ ಅವರನ್ನು ಗೌರವಿಸಲಾಯಿತು.

ನಿಟ್ಟೆ ವಿಶ್ವವಿದ್ಯಾನಿಲಯದ ಡಾ.ಕೆ.ಆರ್.‌ ಶೆಟ್ಟಿ ತುಳು ಅಧ್ಯಯನ ಕೇಂದ್ರದ ಮುಖಾಂತರ ಈಗಾಗಲೇ 2000 ವರ್ಷಗಳ ಹಿಂದೆ ಬರೆಯಲ್ಪಟ್ಟ ತಮಿಳಿನ ವ್ಯಾಕರಣ ಪುಸ್ತಕ ತೊಳ್ಗಾಪ್ಪಿಯಂ ಅನುವಾದ ಕಾರ್ಯ ಸಂಪನ್ನಗೊಂಡು, ಸಲ್ಲಿಕೆಯಾಗಿದ್ದು ಅದರ ಪುಟವಿನ್ಯಾಸ ಕಾರ್ಯ ಪ್ರಗತಿಯಲ್ಲಿದೆ. ಇನ್ನೂ ಹನ್ನೆರಡು ಗ್ರಂಥಗಳ ಅನುವಾದ ಕಾರ್ಯ ಮುನ್ನಡೆಯುತ್ತಿದೆ. ತುಳು, ಕೊರಗ, ಕೊಡವ, ಕೊಂಕಣಿ, ಕನ್ನಡ ಭಾಷೆಗಳ ಅಧ್ಯಯನ-ಅನುವಾದಗಳು ಡಾ.ಕೆ.ಆರ್.‌ ಶೆಟ್ಟಿ ತುಳು ಅಧ್ಯಯನ ಕೇಂದ್ರದಲ್ಲಿ ನಡೆಯುತ್ತಿವೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News