ತೂಗು ಸೇತುವೆಗಳ ಮೂಲಕ ಜನರೊಂದಿಗೆ ಭಾವನಾತ್ಮಕ ಸಂಪರ್ಕ: ಗಿರೀಶ್ ಭಾರದ್ವಾಜ್

Update: 2024-12-18 17:08 GMT

ಮಂಗಳೂರು: ನಾನಾ ಸವಾಲುಗಳ ನಡುವೆಯೂ ಜನರ ಪ್ರೀತಿ, ವಾತ್ಸಲ್ಯದಿಂದಾಗಿ 140ಕ್ಕೂ ಅಧಿಕ ತೂಗು ಸೇತುವೆ ಗಳನ್ನು ನಿರ್ಮಿಸಲು ಸಾಧ್ಯವಾಗಿದೆ. ನಾನು ನಿರ್ಮಿಸಿದ ತೂಗು ಸೇತುವೆಗಳ ಜತೆ ಜನರು ಈಗಲೂ ಭಾವನಾತ್ಮಕ ಸಂಪರ್ಕ ಹೊಂದಿದ್ದಾರೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ , ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ ಎಂದೇ ಖ್ಯಾತರಾಗಿರುವ ಗಿರೀಶ್ ಭಾರದ್ವಾಜ್ ಹೇಳಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಬುಧವಾರ ನಗರದ ಪತ್ರಿಕಾ ಭವನದಲ್ಲಿ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮ ದಲ್ಲಿ ‘ಪ್ರೆಸ್ ಕ್ಲಬ್ ಗೌರವ ’ ಸ್ವೀಕರಿಸಿ ಮಾತನಾಡಿದರು.

ವೃತ್ತಿ ಬದುಕಿನ ತಮ್ಮ 40 ವರ್ಷಗಳ ಸಾಧನೆಗಳನ್ನು ತೆರೆದಿಟ್ಟ ಅವರು ಹುಟ್ಟೂರು ಸುಳ್ಯದ ಅರಂಬೂರು ಗ್ರಾಮದಲ್ಲಿ ಮೊದಲ ತೂಗು ಸೇತುವೆ ನಿರ್ಮಿಸಿದೆ. ಎರಡು ವರ್ಷಗಳ ಹಿಂದ ಅಲ್ಲಿಗೆ ಕಾಂಕ್ರಿಟ್ ಸೇತುವೆ ನಿರ್ಮಿಸಲು ಮುಂದಾದಾಗ ತೂಗುಸೇತುವೆ ತೆಗೆದುಹಾಕಲು ಗ್ರಾಮಸ್ಥರು ಅಧಿಕಾರಿಗಳಿಗೆ ಅವಕಾಶ ನೀಡಲಿಲ್ಲ. ಪ್ರವಾಸಿಗರು ಮತ್ತು ಇಂಜಿನಿಯ ರಿಂಗ್ ವಿದ್ಯಾರ್ಥಿಗಳು ಈ ತೂಗು ಸೇತುವೆ ನೋಡಲು ಬರುತ್ತಿದ್ದಾರೆ .ಈಗ ತಂತ್ರಜ್ಞಾನ ಮುಂದುವರಿದಂತೆ ತೂಗು ಸೇತುವೆಗಳು ಕನಿಷ್ಠ 100 ವರ್ಷ ಬಾಳ್ವಿಕೆ ಬರುವಂತೆ ನಿರ್ಮಿಸಲಾಗುತ್ತಿದೆ ಎಂದರು.

*ಓದಿದ್ದು ಮೆಕಾನಿಂಗ್ ಇಂಜಿನಿಯರಿಂಗ್: ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರೂ ಸಿವಿಲ್ ಇಂಜಿನಿಯರ್ ಆದೆ. ಕರ್ನಾಟಕ ಹಾಗೂ ಇತರ ರಾಜ್ಯಗಳಲ್ಲೂ ತೂಗು ಸೇತುವೆಗಳನ್ನು ನಿರ್ಮಿಸಿದ್ದೇನೆ. ಅತ್ಯಂತ ಕುಗ್ರಾಮದಲ್ಲಿ ನಿರ್ಮಿಸಿದ ತೂಗು ಸೇತುವೆಗಳು ಆ ಹಳ್ಳಿಗರಿಗೆ ಹೊರ ಪ್ರಪಂಚದ ಸಂಪರ್ಕ ಒದಗಿಸುವ ಜತೆಗೆ ಹಿಂದುಳಿದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕಾರಣವಾಗಿದೆ. ಇದು ಸಂತಸ ತಂದುಕೊಟ್ಟ ವಿಚಾರ ಎಂದು ಅವರು ಹೇಳಿದರು.

*ನಕ್ಸಲರು ಅಡ್ಡಿಪಡಿಸಲಿಲ್ಲ: ಒಡಿಶಾದಲ್ಲಿ ಕೆಲಸ ಮಾಡುತ್ತಿದ್ದಾಗ ನಕ್ಸಲರ ಮುಖಾಮುಖಿಯೂ ಆಗಿತ್ತು. ಅವರು ನಮಗೆ ತೊಂದರೆ ಕೊಡಲಿಲ್ಲ. ಅಲ್ಲಿನ ಬಡ ಜನರಿಗೆ ಸಹಾಯ ಮಾಡಬೇಕಾದ ಕಾರಣ ನಾವು ಹಿಂದೆ ಸರಿಯಲಿಲ್ಲ. ಒಂದು ಪ್ರದೇಶದಲ್ಲಂತೂ ಸೇತುವೆ ನಿರ್ಮಿಸುವುದು ಅತ್ಯಂತ ಸವಾಲಾಗಿತ್ತು. ಆ ಹಳ್ಳಿಗರು ದೇವರ ಮೇಲೆ ಭಾರ ಹಾಕಿ ಹೊಳೆ ದಾಟುವ ದುಃಸ್ಥಿತಿಯು ಮನ ಮುಟ್ಟಿತು. ಎಲ್ಲ ಸವಾಲುಗಳನ್ನು ಮೀರಿ ತೂಗು ಸೇತುವೆ ನಿರ್ಮಿಸಿದೆ. ಇದಾದ ಬಳಿಕ ಗ್ರಾಮಸ್ಥರು ತೋರಿದ ಪ್ರೀತಿ ವಿಶ್ವಾಸ ದೊಡ್ಡದು ಎಂದರು.

*ಆನಂದ ಭಾಷ್ಪವೇ ದೊಡ್ಡ ಪ್ರಶಸ್ತಿ: ನಾನು ಮಾಡಿರುವ ಇಂಜಿನಿಯರಿಂಗ್ ಸಾಧನೆಯಿಂದ ನನಗೆ ಹಲವು ಪ್ರಶಸ್ತಿಗಳು ಒಲಿದು ಬಂದಿರಬಹುದು. ಆದರೆ ಸೇತುವೆ ನಿರ್ಮಾಣವಾದಾಗ ಊರಿನ ಜನರು ಕೃತಜ್ಞತೆಯಿಂದ ಭಾವುಕರಾಗಿ ಆನಂದಭಾಷ್ಪ ಸುರಿಸಿರುವುದೇ ತಮಗೆ ಸಿಕ್ಕಿದ ದೊಡ್ಡ ಪ್ರಶಸ್ತಿ ಎಂದು ಭಾರದ್ವಾಜ್ ಸ್ಮರಿಸಿಕೊಂಡರು.

ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಕಾರ್ಯಕ್ರಮ ಉದ್ಘಾಟಿಸಿದರು.

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. ಭಾಸ್ಕರ ರೈ ಕಟ್ಟ ವಂದಿಸಿದರು. ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು.

142 ತೂಗು ಸೇತುವೆ 

ಕರ್ನಾಟಕ, ಕೇರಳ ಮತ್ತು ಒಡಿಶಾದಲ್ಲಿ 1989ರಿಂದ ಈ ತನಕ ಒಟ್ಟು 142 ಸೇತುವೆಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ 127 ಗ್ರಾಮೀಣ ಜನರಿಗೆ ಸಂಪರ್ಕ ಸೇತುವೆಯಾಗಿದೆ. ಉಳಿದ 15ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ತೂಗು ಸೇತುವೆಗಳು.ಪ್ರಾಕೃತಿಕ ವಿಕೋಪದಿಂದಾಗಿ 8 ಸೇತುವೆಗಳಿಗೆ ಹಾನಿಯಾಗಿತ್ತು.

* ಆರಂಭದಲ್ಲಿ ಸೇತುವೆಗಳಿಗೆ 10 ವರ್ಷ ಬಾಳ್ವಿಕೆಯ ಖಾತರಿ ನೀಡಲಾಗುತ್ತಿತ್ತು. ಹೊಸ ಹೊಸ ತಂತ್ರಜ್ಞಾನದ ಮೂಲಕ 100 ವರ್ಷಗಳ ಬಾಳ್ವಿಕೆಯ ಖಾತರಿಯ ಸೇತುವೆಯನ್ನು ನಿರ್ಮಿಸಲು ಸಾಧ್ಯವಿದೆ.

*ನಾನು ಪ್ರಶಸ್ತಿಗೆ ಅರ್ಜಿ ಹಾಕಿದವನಲ್ಲ. ಸಾಧನೆಯನ್ನು ಗುರುತಿಸಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿದೆ ಎಂದು ಹೇಳಿದರು.




 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News