ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿ ಬಗ್ಗೆ ಶ್ವೇತ ಪತ್ರ ಹೊರಡಿಸಲು ಮುಖ್ಯಮಂತ್ರಿ ಚಂದ್ರು ಒತ್ತಾಯ

Update: 2024-12-18 16:38 GMT

ಮಂಗಳೂರು: ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹಣದ ದುರ್ಬಳಕೆ ಆಗಿದೆ. ಹಗಲು ದರೋಡೆ ಆಗಿರು ವಂತಿದೆ. ಆದುದರಿಂದ ಸ್ಮಾರ್ಟ್ ಯೋಜನೆಯಲ್ಲಿ ಆಗಿರುವ ಕಾಮಗಾರಿ ಬಗ್ಗೆ ಶ್ವೇತ ಪತ್ರ ಹೊರಡಿಸುವಂತೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.

ಮಂಗಳೂರು ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಯೋಜನೆಗೆ ಎಷ್ಟು ಹಣ ಬಿಡುಗಡೆಯಾಗಿದೆ? ಖರ್ಚಾಗಿರುವುದು ಎಷ್ಟು ಎಂಬ ವಿಚಾರದ ಬಗ್ಗೆ ಮಾಹಿತಿಯನ್ನು ಸರಕಾರ ಜನರ ಮುಂದಿಡಬೇಕು ಎಂದರು.

ಮಂಗಳೂರು ಮಹಾನಗರ ಪಾಲಿಕೆಯ ಅವಧಿ ಫೆಬ್ರವರಿಯಲ್ಲಿ ಮುಗಿಯುತ್ತದೆ. ಯಾವುದೇ ಕಾರಣಕ್ಕೂ ಚುನಾವಣೆಯನ್ನು ಮುಂದೂಡದೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ಬೆಂಗಳೂರು, ಮೈಸೂರು, ಬೆಳಗಾವಿ ಪಾಲಿಕೆಯ ಅವಧಿ ಮುಗಿದಿದ್ದರೂ, ಚುನಾವಣೆ ಮಾಡಿಲ್ಲ. ಆದರೆ ಮಂಗಳೂರು ಮನಪಾ ದಲ್ಲಿ ಆ ರೀತಿ ಮಾಡಬೇಡಿ. ಅವಧಿ ಮುಗಿದ ತಕ್ಷಣ ಚುನಾವಣೆ ಮಾಡಿ. ಕೋರ್ಟ್‌ನಿಂದ ಛೀಮಾರಿ ಹಾಕುವ ತನಕ ಕಾಯಬೇಡಿ. ವಿಧಾನಸಭೆ, ಲೋಕಸಭೆಗೆ ಚುನಾವಣೆ ಮಾಡುತ್ತೀರಿ. ಸ್ಥಳೀಯಾಡಳಿತ ಸಂಸ್ಥೆಗಳಿಗೆ ಯಾಕೆ ನಿಮಗೆ ಚುನಾವಣೆ ನಡೆಸಲು ಸಾಧ್ಯವಾಗುವುದಿಲ್ಲ. ಅಧಿಕಾರಿಗಳಿಗೆ ಸರ್ವಾಧಿಕಾರಕ್ಕೆ ಯಾಕೆ ಅವಕಾಶ ನೀಡುತ್ತಿರುವಿರಿ ಎಂದು ಪ್ರಶ್ನಿಸಿದರು.

ಆಮ್ ಆದ್ಮಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ಹೇಳಿದ ಚಂದ್ರು ಅವರು ಮಂಗಳೂರಿನಿಂದಲೇ ಮತದಾರರಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು ಆರಂಭಿಸಲಾಗುವುದು. ಮುಂಬರುವ ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯನ್ನು ಎದುರಿಸಲು ಪಕ್ಷದಿಂದ ತಯಾರಿ ನಡೆಸಲಾಗುವುದು ಎಂದು ಹೇಳಿದರು.

ತುಳು ಭಾಷೆಗೆ ಸಂವಿಧಾನತ್ಮಕ ಗೌರವ ಬರಬೇಕಾದರೆ ಶೆಡ್ಯೂಲ್‌ಗೆ ಸೇರಬೇಕು. ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಈ ಭಾಗದ ಜನರ ಬೇಡಿಕೆಗೆ ಆಮ್ ಆದ್ಮಿ ಪಕ್ಷದ ಸಂಪೂರ್ಣ ಬೆಂಬಲ ಇದೆ ಎಂದರು.

ಪ್ರಾಣಿಗಳನ್ನು ರಕ್ಷಣೆ ನೀಡಬೇಕಾದ ಶಾಸಕರು ಆನೆಗಳು ಜನರಿಗೆ ತೊಂದರೆ ಕೊಡುತ್ತಿದೆ. ಗುಂಡು ಹಾರಿಸಿ ಕೊಲ್ಲಲು ಅನುಮತಿ ಕೇಳುತ್ತಿದ್ದಾರೆ. ಸಂರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ಈ ವಿಚಾರದಲ್ಲಿ ಶಾಸಕರು ಕ್ಷಮೆಯಾಚಿಸುವಂತೆ ಆಗ್ರಹಿಸಿದರು.

ಭಾರತದಲ್ಲಿ ‘ ಒಂದು ದೇಶ, ಒಂದು ಚುನಾವಣೆ, ಒಂದು ಭಾಷೆ’ ಮಸೂದೆ ಯಶಸ್ವಿಯಾಗದು ಎಂದು ಮುಖ್ಯ ಮಂತ್ರಿ ಚಂದ್ರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ದ.ಕ. ಜಿಲ್ಲಾಧ್ಯಕ್ಷ ಡಾ. ವಿಶು ಕುಮಾರ್, ಪಕ್ಷದ ಧುರೀಣರಾದ ಬಿ. ನವೀನ್ ಚಂದ್ರ ಪೂಜಾರಿ, ಬಸವರಾಜ ಮುದಿಗೌಡರ, ವಿವೇಕಾನಂದ ಸಾಲಿನ್ಸ್, ಕಬೀರ್ ಕಾಟಿಪಳ್ಳ, ಸೀಮಾ ಮಡಿವಾಳ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News