ಯುವ ಸಮುದಾಯ ಸಾಮಾಜಿಕ ಜಾಲತಾಣದಲ್ಲಿ ಮುಳುಗದೆ ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ: ಪಂಜಿಗುಡ್ಡೆ ಈಶ್ವರ ಭಟ್

Update: 2025-01-15 14:43 GMT

ಪುತ್ತೂರು: ಯುವ ಸಮುದಾಯ ಸಾಮಾಜಿಕ ಜಾಲರಾಣಗಳಲ್ಲಿ ಮುಳುಗಿಹೋಗದೆ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದೇಶದ ಒಳಿತಿಗಾಗಿ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರು ಸ್ಫೂರ್ತಿಯಾಗ ಬೇಕು ಎಂದು ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಆಶಯ ವ್ಯಕ್ತಪಡಿಸಿದರು.

ಅವರು ಪುತ್ತೂರು ನಗರದ ಆಸ್ಮಿ ಕಂಫರ್ಟ್ ಸಭಾಭವನದಲ್ಲಿ ಬುಧವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಯುವಜನ ಒಕ್ಕೂಟ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಸಹಯೋಗದಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ತಾಲೂಕು ಯುವ ಪ್ರಶಸ್ತಿ ಪ್ರದಾನ -2025 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಧಾರ್ಮಿಕ, ಸಾಮಾಜಿಕ ಕೆಲಸಗಳಲ್ಲಿ ಯುವಕರೇ ಹೆಚ್ಚು ತೊಡಗಿಸಿಕೊಳ್ಳಬೇಕು. ಹಿರಿಯರು ಅವರಿಗೆ ಪ್ರೋತ್ಸಾಹ ಮಾಡ ಬೇಕು. ಕೆಲವು ಸ್ವಾರ್ಥಿಗಳು ಖುರ್ಚಿ ಉಳಿಸಲು ಯುವ ಸಮುದಾಯವನ್ನು ಬಲಿಪಶು ಮಾಡುತ್ತಾರೆ. ಅಂತವರಿಂದ ದೂರವಿದ್ದು, ತಂದೆ-ತಾಯಿಯ ಕನಸನ್ನು ನನಸು ಮಾಡುವ ಕರ್ತವ್ಯವನ್ನು ಅರಿತಿರಬೇಕು ಎಂದು ಹೇಳಿದರು. ಸಮಾಜದ ತಪ್ಪುಗಳಿಗೆ ಟೀಕೆಯನ್ನೇ ಮಾಡದೆ ಸಲಹೆ ನೀಡುವ ಪ್ರವೃತ್ತಿ ನಮ್ಮಲ್ಲಿ ಬೆಳೆಯಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನಗರ ಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಮಾತನಾಡಿ, ರಾಷ್ಟ್ರ ಹಾಗೂ ಧರ್ಮದ ಉಳಿವಿಗಾಗಿ ಕೆಲಸ ಮಾಡುವ ರೀತಿಯನ್ನು ಹೇಳಿಕೊಟ್ಟ ಸ್ವಾಮಿ ವಿವೇಕಾನಂದ ಎಂದಿಗೂ ಯುವ ಸಮುದಾಯಕ್ಕೆ ಆದರ್ಶಪ್ರಾಯರು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನಿವೃತ್ತ ಪ್ರಾಂಶುಪಾಲ ಪೆÇ್ರ. ಬಿ.ವಿ.ಸೂರ್ಯನಾರಾಯಣ ಮಾತನಾಡಿ, ಅವರಿಗೋಸ್ಕರ ಬದುಕಿದರೆ ಉಸಿರು ನಿಲ್ಲುವಾಗ ಹೆಸರೂ ಆಳಿಯುತ್ತದೆ. ಆದರೆ ಸಮಾಜಕ್ಕಾಗಿ ಬದುಕಿದರೆ ಹೆಸರು ಅಜರಾಮರವಾಗಿರುತ್ತದೆ. ವಿವೇಕಾನಂದರ ಸಾಧನೆ ಮಾಡಿದ ಸಂತ ಬೇರೊಬ್ಬರು ಮತ್ತೆ ಬಂದಿಲ್ಲ. ಭಾರತದ ಆಧ್ಯಾತ್ಮಿ ಕತೆ ಅಡುಗೆ ಮನೆಯಲ್ಲಿ ಬಂಧಿಯಾಗಿದೆ ಎಂದು ಹೇಳಿದ ವಿವೇಕಾನಂದರು ಮಹಿಳಾ ಸಬಳೀಕರಣದ ಅಗತ್ಯವನ್ನು ಒತ್ತಿ ಹೇಳಿದ್ದರು. ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುವ, ವಿಮರ್ಶೆ, ಚಿಂತನೆ ನಡೆಸಿ ಮುನ್ನಡೆಯುವ ಅಗತ್ಯವನ್ನು ಸ್ವಾಮಿ ವಿವೇಕಾನಂದರು ತಿಳಿಸಿದ್ದರು ಎಂದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ವಹಿಸಿದ್ದರು. ನಗರ ಸಭೆ ಉಪಾಧ್ಯಕ್ಷ ಬಾಲಚಂದ್ರ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್, ರೋಟರಿ ಕ್ಲಬ್ ಸಮಹಾಯಕ ಗವರ್ನರ್ ಸೂರ್ಯನಾಥ ಆಳ್ವ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಪಿ. ಎಂ. ಅಶ್ರಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪುತ್ತೂರು ಮೇಲ್ವಿಚಾರಕ ಶ್ರೀಕಾಂತ್ ಬಿರಾವು ಸ್ವಾಗತಿಸಿ, ಪ್ರಾಸ್ತಾವನೆಗೈದರು. ಕಾರ್ಯದರ್ಶಿ ವಸಂತ್ ಶಂಕರ್ ವಂದಿಸಿದರು. ರೋಟರಿಯ ಡಾ. ರಾಮಚಂದ್ರ ಕಾರ್ಯಕ್ರಮ ನಿರ್ವಹಿಸಿದರು.

ಯುವ ಪ್ರಶಸ್ತಿ ಪ್ರದಾನ

ವೈಯಕ್ತಿಕ ವಿಭಾಗದಲ್ಲಿ ಬಾಲಕೃಷ್ಣ ಪೊರ್ದಾಳ್, ಕಲಾವಿದ ಕೃಷ್ಣಪ್ಪ, ನವೀನ್ ರೈ ಬನ್ನೂರು, ಪ್ರಣವ ಭಟ್, ಭವ್ಯಾ ಪುತ್ತೂರು ಹಾಗೂ ಸಂಘಟನೆಯ ವಿಭಾಗದಲ್ಲಿ ಆನಡ್ಕ ವಿಷ್ಣು ಯುವಕ ಮಂಡಲ, ಸಿಟಿಗುಡ್ಡೆ ಶ್ರೀಕೃಷ್ಣ ಯುವಕ ಮಂಡಲ, ಬಲ್ನಾಡು ವಿನಾಯಕ ಸ್ಪೋಟ್ರ್ಸ್ ಕ್ಲಬ್, ಓಜಾಲ ವಾಸುಕಿ ಸ್ಪೋಟ್ರ್ಸ್ ಕ್ಲಬ್, ಅಡ್ಯಾಲು ಮೊಸರು ಕುಡಿಕೆ ಸಮಿತಿ, ಸರ್ವೆ ಗೌರಿ ಮಹಿಳಾ ಮಂಡಲ, ಬನ್ನೂರು ಸ್ಪೂರ್ತಿ ಬಾಲಸಭಾ, ಶಿವನಗರ ಶಿವಮಣಿ ಬಾಲ ಸಮಿತಿ ಹಾಗೂ ಅತ್ಯುತ್ತಮ ಎನ್.ಎಸ್. ಎಸ್. ಘಟಕವಾಗಿ ಸಂತ ಫಿಲೋಮಿನಾ ಪದವಿ ಕಾಲೇಜು ಘಟಕಕ್ಕೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News