ಅಧಿಕಾರಿಗಳು ಬೆದರಿಕೆಗೆ ಜಗ್ಗದೆ ಕಾನೂನು ಪ್ರಕಾರ ಕೆಲಸ ಮಾಡಿ: ರಮಾನಾಥ ರೈ

Update: 2023-08-22 09:49 GMT

ಮಂಗಳೂರು, ಆ. 22: ದ.ಕ. ಜಿಲ್ಲೆಯಲ್ಲಿ ಚುನಾಯಿತ ಜನಪ್ರತಿನಿಧಿಗಳಾದ ಶಾಸಕರು ಹಾಗೂ ಸಂಸದರು ಅಧಿಕಾರಿಗಳ ಮೇಲೆ ಬೆದರಿಕೆ ತಂತ್ರವನ್ನು ಅನುಸರಿಸುತ್ತಿದ್ದಾರೆ. ಇದಕ್ಕೆ ಜಗ್ಗದೆ ಕಾನೂನು ಪ್ರಕಾರ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ಜಿಲ್ಲೆಯ ಬಿಜೆಪಿ ಜನಪ್ರತಿನಿಧಿಗಳು ನೀರಿನಿಂದ ತೆಗೆದ ಮೀನಿನಂತಾಗಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಅಕ್ರಮ ಸಕ್ರಮ ಸಮಿತಿಯಡಿ 71 ಪ್ರಕರಣಗಳು ಕಾನೂನು ಬಾಹಿರವಾಗಿ ನಡೆಸಿರುವ ಬಗ್ಗೆ ದೂರು ನೀಡಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಉಜ್ವಲ ಯೋಜನೆಯನ್ನು ಕ್ಷೇತ್ರದ ಮತದಾರನೂ ಅಲ್ಲದ, ಶಾಸಕನೂ ಅಲ್ಲದವರಿಂದ ಹಂಚಿಕೆ ಮಾಡಲಾಗಿದೆ. ಇಂತಹ ದಬ್ಬಾಳಿಕೆಗಳು ಬಿಜೆಪಿ ಆಡಳಿತದಲ್ಲಿ ಅಧಿಕಾರಿಗಳ ಮೂಲಕ ನಡೆಸಲಾಗುತ್ತಿತ್ತು. ಅದನ್ನೀಗ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅಧಿಕಾರಿಗಳನ್ನು ಬೆದರಿಸುವ ತಂತ್ರವನ್ನು ಮಾಡಲಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ 136 ಶಾಸಕರನ್ನು ಗೆದ್ದ ಬಲಿಷ್ಟ ಸರಕಾರ ಆಡಳಿತದಲ್ಲಿದೆ. ಅಧಿಕಾರಿಗಳು ಇದಕ್ಕೆ ಸೊಪ್ಪು ಹಾಕಬಾರದು. ಶಿಷ್ಟಾಚಾರ ನೆಪದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಾಗಿಲಲ್ಲಿ ನಡೆದ ಬಿಜೆಪಿ ಜನಪ್ರತಿನಿಧಿಗಳ ಪ್ರತಿಭಟನೆಯನ್ನು ಕಾಂಗ್ರೆಸ್ ಖಂಡಿಸುವುದಾಗಿ ಅವರು ಹೇಳಿದರು.

ಗೋಷ್ಟಿಯಲ್ಲಿ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಶಶಿಧರ ಹೆಗ್ಡೆ, ಲ್ಯಾನ್ಸಿ ಲಾಟ್ಪಿಂಟೋ, ಶುಭೋದಯ ಆಳ್ವ, ಜಯಶೀಲ ಅಡ್ಯಂತಾಯ, ಶಾಹುಲ್ ಹಮೀದ್, ಪ್ರಥ್ವಿರಾಜ್, ಜೋಕಿಂ ಡಿಸೋಜಾ, ವಿಶ್ವಾಸ್ ದಾಸ್, ಚಂದ್ರ ಪ್ರಕಾಶ್ ಶೆಟ್ಟಿ, ಬೇಬಿ ಕುಂದರ್, ಸಲೀಂ, ಪ್ರಕಾಶ್ ಸಾಲಿಯಾನ್, ಅಪ್ಪಿ, ಸುಹಾನ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News