ಹೆರ್ಮನ್ ಮ್ಯೋಗ್ಲಿಂಗ್ ಪ್ರತಿಮೆ ಹಾಗೂ ರಸ್ತೆಗೆ ನಾಮಕರಣ ಮಾಡಲು ಮನವಿ
ಮಂಗಳೂರು: ಕನ್ನಡ ಪತ್ರಿಕೋದ್ಯಮದ ಪಿತಾಮಹ ಮಂಗಳೂರ ಸಮಾಚಾರ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಡಾ.ಹೆರ್ಮನ್ ಮ್ಯೋಗ್ಲಿಂಗ್ ಅವರ ಹೆಸರನ್ನು ಬೆಂಗಳೂರಿನಲ್ಲಿ ರಸ್ತೆಯೊಂದಕ್ಕೆ ನಾಮಕರಣ ಮಾಡಬೇಕು ಮತ್ತು ಮ್ಯೋಗ್ಲಿಂಗ್ ಅವರ ಪ್ರತಿಮೆಯನ್ನು ಸ್ಥಾಪನೆ ಮಾಡಬೇಕು ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ದ.ಕ.ಜಿಲ್ಲಾ ಸಮಿತಿಯು ಮಂಗಳವಾರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.
ಹರ್ಮನ್ ಮ್ಯೋಗ್ಲಿಂಗ್ ಅವರ ಜೊತೆಗಾರ ಕನ್ನಡ ಶಬ್ದಕೋಶ ರಚಿಸಿದ ರೆವರೆಂಡ್ ಕಿಟೆಲ್ ಅವರ ಹೆಸರು ರಸ್ತೆಗೆ ನಾಮಕರಣ ಮಾಡಲಾಗಿದೆ. ಅವರ ಪ್ರತಿಮೆಯನ್ನೂ ಬೆಂಗಳೂರಿನಲ್ಲಿ ನಿರ್ಮಿಸಲಾಗಿದೆ. ಆದರೆ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ’ ಪತ್ರಿಕೆ ಆರಂಭಿಸಿ ಆ ಮೂಲಕ ಕನ್ನಡ ಪತ್ರಿಕೋದ್ಯಮದದ ಶಕೆಯನ್ನು ಆರಂಭಿಸಿದ ಮ್ಯೋಗ್ಲಿಂಗ್ ಅವರ ಪ್ರತಿಮೆಯಾಗಲಿ, ಅವರ ಹೆಸರಿನಲ್ಲಿ ರಸ್ತೆಯಾಗಲಿ, ವೃತ್ತಗಳಾಗಲಿ ಕರ್ನಾಟಕದಲ್ಲಿ ಎಲ್ಲಿಯೂ ಇಲ್ಲ. ಹಾಗಾಗಿ ಈ ಬಗ್ಗೆ ಕ್ರಮ ಜರಗಿಸುವಂತೆ ಸಮಿತಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ಪ್ರಧಾನ ಕಾರ್ಯದರ್ಶಿ ಕೆನ್ಯೂಟ್ ಪಿಂಟೋ, ಕೋಶಾಧಿಕಾರಿ ಗಿರಿಧರ ಶೆಟ್ಟಿ, ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ಮನವಿ ಸಲ್ಲಿಸಿದ್ದಾರೆ.