ಆಸ್ತಿ ತೆರಿಗೆ ಹೆಚ್ಚಳ; ಮನಪಾ ಬಿಜೆಪಿ ಆಡಳಿತದಿಂದ ಇಬ್ಬಗೆ ನೀತಿ: ಪ್ರವೀಣ್ ಚಂದ್ರ ಆಳ್ವ
ಮಂಗಳೂರು, ಮಾ.1: ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ 2021ರ ಫೆಬ್ರವರಿಯಲ್ಲಿ ಜಾರಿಗೊಳಿಸಲಾದ ಆಸ್ತಿ ತೆರಿಗೆ ಹೆಚ್ಚಳವನ್ನು ಆ ಸಂದರ್ಭದಲ್ಲಿ ಬಿಜೆಪಿಯ ತ್ರಿಬಲ್ ಇಂಜಿನ್ ಸರಕಾರವಿದ್ದರೂ ಮಾತನಾಡದೆ, ಇದೀಗ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಆರೋಪ ಮಾಡುತ್ತಿರುವುದು ಬಿಜೆಪಿಯ ಇಬ್ಬಗೆಯ ನೀತಿ ಎಂದು ಮನಪಾ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಆರೋಪಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮನಪಾ ಚರಿತ್ರೆಯಲ್ಲೇ ಮೊದಲ ಬಾರಿಗೆ ತೆರಿಗೆ ಖಾಲಿ ಜಾಗಕ್ಕೂ ಹಾಕುವ ಮೂಲಕ ಅಂಗಳಕ್ಕೂ ತೆರಿಗೆ ಕಟ್ಟುವ ಪರಿಸ್ಥಿತಿ ನಿರ್ಮಿಸಲಾಗಿದೆ. ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ತೆರಿಗೆ ಹೆಚ್ಚಳಕ್ಕೆ ಸಂಬಂಧಿಸಿ 2021ರ ಫೆಬ್ರವರಿ 19ರಂದು ರಾಜ್ಯ ಸರಕಾರದಿಂದ ನಿರ್ದೇಶನ ಬಂದಿರುವ ಬಗ್ಗೆ ಆಗಿನ ಮೇಯರ್ ಅವರು ಪ್ರಸ್ತಾಪಿಸಿದ್ದರು. ಮನಪಾ ಸಾಮಾನ್ಯ ಪರಿಷತ್ನಲ್ಲಿ ಈ ಬಗ್ಗೆ ಚರ್ಚೆಯಾದಾಗ ಪ್ರತಿಪಕ್ಷವಾದ ಕಾಂಗ್ರೆಸ್ ಖಾಲಿ ಜಾಗಕ್ಕೆ ತೆರಿಗೆ ಹಾಕಿದರೆ ಜನಸಾಮಾನ್ಯರಿಗೆ ತೊಂದರೆ ಆಗಲಿದೆ ಎಂದು ವಿರೋಧ ವ್ಯಕ್ತಪಡಿಸಿತ್ತು. ಆ ಸಂದರ್ಭ ಅಂದಿನ ಮೇಯರ್ ಮೌನವಾಗಿದ್ದರು. ಇದೀಗ ಮೇಯರ್ ಅವರು ನಿನ್ನೆ ಮಾಧ್ಯಮಕ್ಕೆ ಮಾಹಿತಿ ನೀಡಿ, ಆಸ್ತಿ ತೆರಿಗೆಗೆ ಸಂಬಂಧಿಸಿ ಚರ್ಚಿಸಲು ಸಭೆ ಕರೆಯಲಾಗಿದ್ದು, ಪ್ರತಿಪಕ್ಷದವರು ಭಾಗವಹಿಸಿದ್ದರು ಎಂದು ಹೇಳಿದ್ದಾರೆ. ನಾವು ಸಭೆಗಾಗಿ ಹೋಗಿದ್ದರೂ ವಿರೋಧಿಸಿ ಹೊರನಡೆದಿದ್ದೆವು ಎಂದು ಪ್ರವೀಣ್ ಚಂದ್ರ ಆಳ್ವ ಹೇಳಿದರು.
ಸ್ವಯಂ ಘೋಷಿತ ಆಸ್ತಿ ತೆರಿಗೆ ಜಾರಿಯಾದ ಬಳಿಕ ಪಾಲಿಕೆಯಲ್ಲಿ 2008-09ನೆ ಸಾಲಿನ ಭೂ ನಿರ್ದೇಶನ ಮೌಲ್ಯದ ಆಧಾರದಲ್ಲಿ ತೆರಿಗೆ ವಿಧಿಸಲಾಗುತ್ತಿತ್ತು. 2013ರ ಸಂದರ್ಭದಲ್ಲಿಯೂ ಬಿಜೆಪಿಯು ಚುನಾವಣೆಯ ಸಂದರ್ಭ, ಕಾಂಗ್ರೆಸ್ ಆಡಳಿತದ ಮೇಲೆ ಆರೋಪ ಮಾಡಿ ತುಳಸಿಕಟ್ಟೆಗೂ ತೆರಿಗೆ ಎಂದಿದ್ದರು. ಆದರೆ ತೆರಿಗೆ ಹೆಚ್ಚಳಕ್ಕೆ ಕಾಂಗ್ರೆಸ್ ಅವಧಿಯಲ್ಲಿ ಅವಕಾಶ ನೀಡಿರಲಿಲ್ಲ. ಆದರೆ 2019ರಲ್ಲಿ ರಾಜ್ಯ ಹಾಗೂ ಮನಪಾದಲ್ಲಿ ಬಿಜೆಪಿ ಆಡಳಿತ ಬಂದ ಬಳಿಕ ತೆರಿಗೆ ಹೆಚ್ಚಳದ ಜತೆಗೆ ನೀರಿನ ದರದಲ್ಲೂ ಏರಿಕೆಯಾಗಿದೆ. 24000 ಲೀಟರ್ವರೆಗೆ 65 ರೂ.ಗಳಿಗೆ ಸಿಗುತ್ತಿದ್ದ ನೀರು, ಬಿಜೆಪಿ ಆಡಳಿತಾವಧಿಯಲ್ಲಿ 8000 ಲೀಟರ್ ಗೆ ಇಳಿಕೆ ಮಾಡಿ 102 ರೂ.ಗಳಿಗೆ ಏರಿಕೆ ಮಾಡಲಾಗಿದೆ. ತ್ರಿಬಲ್ ಇಂಜಿನ್ ಸರಕಾರವಿದ್ದರೂ ನೀರಿನ ಬೆಲೆ ಇಳಿಸುವಲ್ಲಿಯೂ ಬಿಜೆಪಿ ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು.
ಗುರುವಾರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿಯೂ ಮೇಯರ್ ಅವರ ನಡೆ ಸದನಕ್ಕೆ ಅಗೌರವ ನೀಡುವಂತಾಗಿತ್ತು. ಆಸ್ತಿ ತೆರಿಗೆ ವಿಚಾರದಲ್ಲಿ ವಿಪಕ್ಷದವರನ್ನು ತಮ್ಮ ಚೇಂಬರಿಗೆ ಕರೆಸಿ ಮಾತನಾಡುವ ಸೌಜನ್ಯ ತೋರಿಸಿಲ್ಲ. ಬದಲಾಗಿ ಸದನ ಮೊಟಕುಗೊಳಿಸಿ ಏನೂ ಹೇಳದೆ ಎದ್ದು ಹೋಗಿದ್ದಾರೆ. ಬಳಿಕ ರಾಜ್ಯ ಸರಕಾರದ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಶಶಿಧರ ಹೆಗ್ಡೆ, ಲ್ಯಾನ್ಸಿಲಾಟ್ ಪಿಂಟೋ, ಅಬ್ದುಲ್ ರವೂಫ್, ನವೀನ್ ಡಿಸೋಜಾ, ಅನಿಲ್ ಪೂಜಾರಿ, ಕೇಶವ ಮರೋಳಿ, ಸಂಶುದ್ದೀನ್, ಝೀನತ್ ಸಂಶುದ್ದೀನ್ ಮೊದಲಾದವರು ಉಪಸ್ಥಿರಿದ್ದರು.
ಕಾಂಗ್ರೆಸ್ ಸರಕಾರದಿಂದ ಮನಪಾದ ತೆರಿಗೆ ಹೆಚ್ಚಳ ಜಾಸ್ತಿ ಮಾಡಲಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ನಮ್ಮ ಜತೆಗೆ ನೇರಾ ನೇರಾ ಸಂವಾದಕ್ಕೆ ಬರಲಿ. ದಾಖಲೆಗಳೊಂದಿಗೆ ನಾವು ಉತ್ತರ ನೀಡಲು ತಯಾರಿದ್ದೇವೆ ಎಂದು ಮನಪಾ ಸದಸ್ಯ ವಿನಯರಾಜ್ ಸವಾಲು ಹಾಕಿದರು.