ಶಾಸಕ ಭರತ್‌ ಶೆಟ್ಟಿಯನ್ನು ಬಂಧಿಸಲು ಒತ್ತಾಯಿಸಿ ಅಡ್ಡೂರು ನಾಗರಿಕರಿಂದ ಪ್ರತಿಭಟನೆ

Update: 2024-09-01 15:53 GMT

ಅಡ್ಡೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಡ್ಡೂರನ್ನು ಮಿನಿ ಪಾಕಿಸ್ತಾನ ಎಂದು ಹೇಳಿರುವ ಶಾಸಕ ಭರತ್ ಶೆಟ್ಟಿಯನ್ನು ಬಂಧಿಸಲು ಒತ್ತಾಯಿಸಿ ಅಡ್ಡೂರು ನಾಗರಿಕರು ರವಿವಾರ ಅಡ್ಡೂರು ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಡ್ಡೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಸದಖತುಲ್ಲಾ ಫೈಝಿ, ಶಾಸಕ ಭರತ್‌ ಶೆಟ್ಟಿ ನಮ್ಮೂರನ್ನು ವಿರೋಧಿ ಪಾಕಿಸ್ತಾನಕ್ಕೆ ಹೋಲಿಸಿ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ. " ಶಾಸಕರೇ ತಾವು ನೀಡಿರುವ ವಿವಾದಿತ ಹೇಳಿಕೆಯ ಹಿಂದಿರುವ ನಿಗೂಢ ಉದ್ದೇಶ ಏನು? ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಯಿಂದ ದಿಂದ ಸಹಬಾಳ್ವೆ ನಡೆಸುತ್ತಿರುವ ಅಡ್ಡೂರಿನಲ್ಲಿ ವೈಷಮ್ಯ, ಅಪನಂಬಿಕೆ, ಸಂಘರ್ಷದ ವಿಷ ಬೀಜ ಬಿತ್ತುವ ಪ್ರಯತ್ನ ಏನಾದರೂ ಇದೆಯಾ? ಎಂದು ಪ್ರಶ್ನಿಸಿದ ಅವರು, ನಿಮ್ಮ ವಿಷಬೀಜ ಬಿತ್ತುವ ಪ್ರಯತ್ನ ಶಾಂತಿ, ಸರ್ವಜನಾಂಗದ ತೋಟವಾಗಿರುವ ಅಡ್ಡೂರಿನಲ್ಲಿ ಮೊಳಕೆ ಬರುವುದಿಲ್ಲ. ಮೊಳೆ ಒಡೆಯಲು ಶಾಂತಿ ಬಯಸುವ ಅಡ್ಡೂರಿನ ಸರ್ವ ಧರ್ಮೀಯರು ಬಿಡುವುದಿಲ್ಲ ಎಂದರು.

ಬದ್ರಿಯಾ ಜುಮಾ ಮಸೀದಿಯ ಉಪಾಧ್ಯಕ್ಷ ಝೈನುದ್ದೀನ್‌ ಮಾತನಾಡಿ, ಇಸ್ಲಾಂ ಎಂದರೆ ಶಾಂತಿ ಮತ್ತು ಸೌಹಾರ್ದದ ಪ್ರತೀಕ. ಶಾಸಕರ ಮಿನಿ ಪಾಕಿಸ್ತಾನ ಎಂಬ ಹೇಳಿಕೆ ಸರ್ವ ಧರ್ಮೀಯ ನಾಗರಿಕರಿಗೂ ಬೇಸರ ತಂದಿದೆ. ಶಾಸಕರು ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟ ಪಡಿಸಬೇಕು. ಭರತ್‌ ಶೆಟ್ಟಿ ಅವರು ಶಾಸಕರಾಗಿ ಎಷ್ಟು ಬಾರಿ ಅಡ್ಡೂರಿಗೆ ಭೇಟಿ ನೀಡಿದ್ದೀರಿ? ಎಷ್ಟು ಜನರ ಕಷ್ಟಗಳಿಗೆ ಸ್ಪಂದಿಸಿದ್ದೀರಿ ಎಂಬುದನ್ನು ಮೊದಲು ಸ್ಪಷ್ಟ ಪಡಿಸಬೇಕು. ಬಾಯಿಗೆ ಬಂದಂತೆ ಮಾತನಾಡುವುದು ಶಾಸಕ ಸ್ಥಾನಕ್ಕೆ ಗೌರವ ತರುವಂತದ್ದಲ್ಲ. ಶಾಸಕರು ಕತ್ತರಿಯ ಕೆಲಸ ಮಾಡದೆ ಸೂಜಿಯ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದ ಅವರು, "ಮುಂದಿನ ದಿನಗಳಲ್ಲಿ ಸೌಹಾರ್ದಯುತ ಅಡ್ಡೂರಿನ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿʼ ಎಂದು ಹೇಳಿದರು.

ಇಲ್ಲಿನ ಜನ ನಿಮ್ಮನ್ನು ಆಯ್ಕೆ ಮಾಡಿರುವುದು ಕೋಮುಗಲಭೆಗೆ ಪ್ರಚೋದನೆ ನೀಡುವ ಮತುಗಳನ್ನು ಆಡಲಲ್ಲ. ಗುರುಪುರ ಹೋಬಳಿಯಲ್ಲಿ ಕನಿಷ್ಠ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲ. ಒಂದು ಪದವಿ ಕಾಲೇಜು ಇಲ್ಲ. ಆದರೆ, ಶಾಸಕರು ಕೋಮು ಪ್ರಚೋದಕ ಹೇಳಿಕೆಗಳ ಮೂಲಕ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯ ತಯಾರಿ ನಡೆಸುತ್ತಿ ದ್ದಾರೆ. ಅವರ ಕೋಮು ಪ್ರಚೋದನಾತ್ಮಕ ಹೇಳಿಕೆಗಳಿಂದ ಇಲ್ಲಿನ ಜನ ಹೊಡೆದಾಡಿಕೊಂಡು ಸಾಯಬೇಕು. ಅದರ ಮೇಲೆ ತಮ್ಮ ರಾಜಕೀಯ ಮಾಡಲು ಶಾಸಕ ಭರತ್‌ ಶೆಟ್ಟಿ ಹವಣಿಸುತ್ತಿದ್ದಾರೆ ಎಂಬುವುದು ಅರ್ಥವಾಗುತ್ತಿದೆ. ಶಾಸಕರ ದೇಶದ್ರೋಹದ ಹೇಳಿಕೆ ವಿರುದ್ಧ ಪ್ರಕರಣ ದಾಖಲಿಸಿದ್ದರೂ ಈವರೆಗೂ ಅವರ ಮೇಲೆ ಯಾವುದೇ ಕ್ರಮಗಳು ಆಗಿಲ್ಲ ಎಂದು ಅಡ್ಡೂರು ಬದ್ರಿಯಾ ಜುಮಾ ಮಸೀದಿಯ ಉಪಾಧ್ಯಕ್ಷ ಎ.ಕೆ. ಅಶ್ರಫ್ ಅಸಮಾಧಾನ ವ್ಯಕ್ತ ಪಡಿಸಿದರು.

ಜಿ.ಪಂ. ಮಾಜಿ ಸದಸ್ಯ ಯು.ಪಿ.ಇಬ್ರಾಹಿಂ, ಅಶ್ರಫ್ ನಡುಗುಡ್ಡೆ ಮಾತನಾಡಿ ಶಾಸಕರ ಹೇಳಿಕೆಯನ್ನು ಖಂಡಿಸಿದರು. ಈ ಸಂದರ್ಭ ಅಡ್ಡೂರು ಜುಮಾ ಮಸೀದಿ ಅಧ್ಯಕ್ಷ ಅಹ್ಮದ್ ಬಾವ ಅಂಗಡಿ ಮನೆ, ಉಪಾಧ್ಯಕ್ಷ ಎ.ಕೆ. ಅಶ್ರಫ್, ಹಾಜಿ ಎಂ.ಎಚ್. ಮೊಯ್ದೀನ್, ಅಡ್ಡೂರು ಅಲ್ ಬಿರ್ರ್ ಅಧ್ಯಕ್ಷ ಎಂ.ಎಸ್.‌ ಶೇಖಬ್ಬ, ಜಾಬಿರ್ ಫೈಝಿ, ದ.ಕ. ಜಿಲ್ಲಾ ಮದರಸ ಮ್ಯಾನೇಜ್‌ ಮೆಂಟ್‌ ಅಧ್ಯಕ್ಷ ಎಮ್.‌ ಎಚ್. ಮಯ್ಯದ್ದಿ, ಕಾಂಜರಕೋಡಿ ಮಸೀದಿಯ ಅಧ್ಯಕ್ಷ ಝಕರಿಯಾ, ಜಯಲಕ್ಷ್ಮೀ, ತೋಕೂರು ಅಹ್ಮದ್‌ ಬಾವ, ಅರ್ಷದಿ ಉಸ್ತಾದ್‌, ಗುರುಪುರ ಗ್ರಾಮ ಪಂಚಾಯತ್ ಸದಸ್ಯರು ಸೇರಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬದ್ರಿಯಾ ಜುಮಾ ಮಸೀದಿ ಉಪಾಧ್ಯಕ್ಷ ಝೈನುದ್ದೀನ್ ಸ್ವಾಗತಿಸಿದರು, ಅಸ್ತಾರ್ ಅಡ್ಡೂರು ಕಾರ್ಯಕ್ರಮ ನಿರೂಪಿಸಿದರು.





Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News