ಮಂಗಳೂರು: ಎಸ್ಸಿ-ಎಸ್ಟಿ ಅಹವಾಲು ಸಭೆ

Update: 2024-08-25 12:39 GMT

ಮಂಗಳೂರು: ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಎಸ್ಸಿ-ಎಸ್ಟಿ ಅಹವಾಲು ಸಭೆಯು ರವಿವಾರ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ಶಾಲಾ ವಾಹನಗಳ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಬೇಕು, ನಗರದ ಎಲ್ಲೆಂದೆಡೆ ವಾಹನಗಳನ್ನು ನಿಲ್ಲಿಸಲಾಗುತ್ತದೆ, ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಎಂಬಿತ್ಯಾದಿ ಅಹವಾಲು, ಆರೋಪಗಳು ಸಭೆಯಲ್ಲಿ ಕೇಳಿ ಬಂದವು.

ನಗರದ ಬೆಂದೂರುವೆಲ್ ಸಹಿತ ಅನೇಕ ಕಡೆ ಶಾಲಾ ಆವರಣದ ಹೊರಗೆ ಬೆಳಗ್ಗೆ ಹಾಗೂ ಸಂಜೆ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಶಾಲಾ ಮಕ್ಕಳನ್ನು ಇಳಿಸುವುದು ಹಾಗೂ ಹತ್ತಿಸಿಕೊಳ್ಳುವುದಕ್ಕೆ ಪೋಷಕರು ಹಾಗೂ ಶಾಲಾ ವಾಹನಗಳನ್ನು ರಸ್ತೆ ಬದಿಯಲ್ಲೇ ನಿಲ್ಲಿಸುತ್ತಾರೆ. ಇದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಈ ಬಗ್ಗೆ ಶಾಲೆಗಳ ಮುಖ್ಯಸ್ಥರಿಗೆ ಈಗಾಗಲೇ ತಿಳಿಸಲಾಗಿದೆ. ಶಾಲೆಗಳಲ್ಲಿ ವಿಶಾಲ ಅಂಗಳವಿದ್ದರೂ ಅಲ್ಲಿ ಮಕ್ಕಳನ್ನು ಇಳಿಸುತ್ತಿಲ್ಲ. ರಸ್ತೆಯಲ್ಲೇ ಮಕ್ಕಳನ್ನು ಪಿಕ್‌ಅಪ್ ಮಾಡುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ವಾಹನಗಳ ಮೇಲೆ ನಿರ್ದಾಕ್ಷಿಣ್ಯ ಕೇಸು ದಾಖಲಿಸಲಾಗುವುದು. ಶಾಲೆಗಳಿಗೆ ನೋಟಿಸ್ ನೀಡಲಾಗುವುದು ಎಂದರು.

ನಗರ ಪ್ರದೇಶದಲ್ಲಿ ರಾತ್ರಿ ವೇಳೆ ಎಲ್ಲೆಂದರಲ್ಲಿ ವಾಹನ ನಿಲ್ಲಿಸಬಾರದು. ವಾಹನ ಕಳ್ಳತನವಾದರೆ ಅದನ್ನು ಪತ್ತೆಹಚ್ಚಲು ಕಷ್ಟವಾಗುತ್ತದೆ. ಆದ್ದರಿಂದ ಸಿಸಿ ಕ್ಯಾಮರಾ ಇರುವ ಕಡೆಗಳಲ್ಲೇ ವಾಹನ ನಿಲ್ಲಿಸಿದರೆ ಉತ್ತಮ ಎಂದು ಡಿಸಿಪಿ ದಿನೇಶ್ ಕುಮಾರ್ ಸಲಹೆ ನೀಡಿದರು.

ಪೊಲೀಸರ ವಿರುದ್ಧ ನಾಗರಿಕರೇ ಕೈ ಮಾಡುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಮೂಲ್ಕಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ್ದಲ್ಲದೆ, ಪ್ರಶ್ನಿಸಿದ ಇನ್‌ಸ್ಪೆಕ್ಟರ್ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಗಳು ನಡೆದಿದೆ ಎಂದು ದಲಿತ ಮುಖಂಡ ವಿಶ್ವನಾಥ್ ಹೇಳಿದರು.

ಕಾನೂನು ಪಾಲಕರ ವಿರುದ್ಧ ಕೈಮಾಡಿದರೆ ಕೇಸು ದಾಖಲಿಸಲಾಗುವುದು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ ಗೋಯಲ್ ಎಚ್ಚರಿಸಿದರು. ಎಸಿಪಿ ಧನ್ಯಾ ನಾಯಕ್ ನಿರೂಪಿಸಿದರು.






 


 


Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News