ಧರ್ಮಸ್ಥಳದಲ್ಲಿ ಮುಂದುವರಿದ ಕಾಡಾನೆಗಳ ಹಾವಳಿ; ಅಪಾರ ನಷ್ಟ

Update: 2024-10-05 07:21 GMT

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿ ಮುಂದುವರಿದಿದೆ. ಶುಕ್ರವಾರ ರಾತ್ರಿಯ ವೇಳೆ ಧರ್ಮಸ್ಥಳ ಪೊಲಸೊಳಿಕೆ ನಿವಾಸಿ ಕೃಷ್ಣಪ್ಪ ಅವರ ಮನೆಯ ಸಮೀಪದ ತೋಟಕ್ಕೆ ನುಗ್ಗಿದ ಕಾಡಾನೆಗಳು ಬಾಳೆ ಹಾಗೂ ಅಡಿಕೆ ಗಿಡಗಳನ್ನು, ಮರಗೆಣಸಿನ ಗಿಡಗಳನ್ನು ನಾಶಗೊಳಿಸಿದೆ. ತೋಟದಲ್ಲಿದ್ದ ಬಾಳೆಗಿಡಗಳನ್ನು ಸಂಪೂರ್ಣವಾಗಿ ಮುರಿದು ಹಾಕಿದ್ದು ಮನೆಯ ಸಮೀಪವೇ ಆನೆಗಳು ಓಡಾಟ ನಡೆಸಿದ್ದು ಜನರಲ್ಲಿ ಭಯಮೂಡಿಸಿದೆ.

ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪದ ನಿವಾಸಿ ಕ್ಸೇವಿಯರ್ ಎಂಬವರಿಗೆ ಸೇರಿದ ತೋಟಕ್ಕೆ ನುಗ್ಗಿದ ಕಾಡಾನೆಗಳು ಕೃಷಿಗೆ ಹಾನಿಯುಂಟುಮಾಡಿದೆ. ಇಲ್ಲಿ ಫಸಲು ಬರುವ ಸುಮಾರು ಹತ್ತಕ್ಕೂ ಅಧಿಕ ಅಡಿಕೆ ಮರಗಳನ್ನು ನೆಲಕ್ಕೆ ಉರುಳಿಸಿದೆ. ದೊಡ್ಡ ತೆಂಗಿನ ಮರಗಳನ್ನೂ ನೆಲಕ್ಕೆ ಉರುಳಿಸಿದೆ. ತೋಟದಲ್ಲಿ ನೀರಿನ ಸಂಪರ್ಕ ಕ್ಕೆ ಹಾಕಲಾಗಿದ್ದ ಪೈಪ್ ಗಳನ್ನು ಸಂಪೂರ್ಣವಾಗಿ ನಾಶಪಡಿಸಿದ್ದು ಭಾರೀ ನಷ್ಟ ಸಂಭವಿಸಿದೆ. ಇಲ್ಲಿನ ನೇರ್ತನೆ ರಸ್ತೆಯ ಪಕ್ಕದಲ್ಲಿಯೇ ಕಾಡಾನೆಗಳು ಓಡಾಟ ನಡೆಸುತ್ತಿದ್ದು ಸಂಜೆಯಾದರೆ ಜನರು ಮನೆಗಳಿಂದ ಹೊರಬರಲು ಭಯ ಪಡುವ ವಾತಾವರಣ ನಿರ್ಮಾಣವಾಗಿದೆ.

ಧರ್ಮಸ್ಥಳ ನೇರ್ತನೆ ಸಮೀಪವೇ ಕಾಡಾನೆಗಳು ಬೀಡು ಬಿಟ್ಟಿದ್ದು ಇಲ್ಲಿ ನಿರಂತರವಾಗಿ ಕೃಷಿಗೆ ಹಾನಿಯುಂಟು ಮಾಡುತ್ತಿದೆ. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವಂತೆ ಜನರು ಒತ್ತಾಯಿಸುತ್ತಿದ್ದಾರೆ.



 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News