ಮಂಗಳೂರು ಮೀನು ಮಾರುಕಟ್ಟೆಯಲ್ಲಿ ದಲಿತ ಮಹಿಳೆಯರಿಗೆ ತಾರತಮ್ಯ ಆರೋಪ: ಎಸ್ಸಿ ಎಸ್ಟಿ ಕುಂದುಕೊರತೆ ಸಭೆಯಲ್ಲಿ ಆಕ್ರೋಶ

ಮಂಗಳೂರು, ಮಾ.23: ಮಂಗಳೂರು ಸಹಿತ ಹಲವಡೆ ಇರುವ ಮೀನು ಮಾರುಕಟ್ಟೆಯಲ್ಲಿ ದಲಿತ ಮಹಿಳೆಯರನ್ನು ತಾರತಮ್ಯದಿಂದ ನೋಡುವ, ಮುಖ್ಯವಾಗಿ ಚಿಪ್ಪು ಮಾರುವ ದಲಿತ ಮಹಿಳೆಯರನ್ನು ಮಾರ್ಕೆಟ್‌ನ ಮೂಲೆಯಲ್ಲಿ ಕುಳ್ಳಿರಿಸುವ ಧೋರಣೆ ಕಂಡು ಬಂದಿದ್ದು, ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ದ.ಕ. ಜಿಲ್ಲಾ ಸಂಚಾಲಕ ಗಿರೀಶ್ ಕುಮಾರ್ ಆಗ್ರಹಿಸಿದ್ದಾರೆ.
ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ರವಿವಾರ ನಡೆದ ಎಸ್ಸಿ ಎಸ್ಟಿ ಕುಂದುಕೊರತೆ ಸಭೆಯಲ್ಲಿ ಮನವಿ ಮಾಡಿದ ಅವರು ಉಡುಪಿಯ ಮಲ್ಪೆ ಬಂದರಿನಲ್ಲಿ ದಲಿತ ಮಹಿಳೆ ಮೀನು ಕದ್ದರೆಂಬ ಆರೋಪ ದಲ್ಲಿ ಆಕೆಯನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ ಘಟನೆ ಖಂಡನೀಯ. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ಪ್ರಕರಣವನ್ನು ಮುಚ್ಚಿ ಹಾಕಲು ಬಿಡಬಾರದು. ಇಂತಹ ಘಟನೆ ಮಂಗಳೂರಿನಲ್ಲಿ ನಡೆಯದಂತೆ ಮುನ್ನಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಧ್ವನಿಗೂಡಿಸಿರುವ ದಲಿತ ಸಂಘಟನೆಯ ಜಿಲ್ಲಾ ಸಂಚಾಲಕ ಎಸ್.ಪಿ. ಆನಂದ ಅವರು ಮಲ್ಪೆಯಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆ ಮತ್ತು ಅಲ್ಲಿರುವ ಅವರ ಸಮುದಾಯಕ್ಕೆ ಸೇರಿದ 45 ಕುಟುಂಬಗಳನ್ನು ಓಡಿಸುವ ಹುನ್ನಾರ ನಡೆಯುತ್ತಿದೆ. ದಲಿತ ಮಹಿಳೆಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನು ಬಂಧಿಸಿ ಅವರ ಮೇಲೆ ಗೊಂಡಾ ಕಾಯ್ದೆ ದಾಖಲಿಸಬೇಕು ಮತ್ತು ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಮಂಗಳೂರಿನಲ್ಲಿ ಮೀನು ಮಾರಾಟ ಮಾಡುವವರರಲ್ಲಿ ತಾರತಮ್ಯಕ್ಕೆ ಅವಕಾಶ ನೀಡಬಾರದು . ಮೀನುಗಾರಿಕಾ ಇಲಾಖೆ ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು.
ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯ ಸಭಾಂಗಣದ ಗೋಡೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೊ ಅಳವಡಿಸುವಂತೆ ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ರಘರಾಜ್ ಆಗ್ರಹಿಸಿದರು.
ಕಾನೂನು ಪ್ರಕಾರ ಕೇಸು ದಾಖಲಿಸಲು ಡಿಸಿಪಿ ಸೂಚನೆ
ಅತ್ಯಾಚಾರ, ಅತ್ಯಾಚಾರ ಯತ್ನ, ದೌರ್ಜನ್ಯ ಮುಂತಾದ ಪ್ರಕರಣಗಳನ್ನು ರಾಜಿ ಪಂಚಾಯತಿಕೆ ಮೂಲಕ ಬಗೆಹರಿಸಲು ಪ್ರಯತ್ನಿಸುವ ಬದಲು ಕಾನೂನು ರೀತ್ಯ ಕೇಸು ದಾಖಲಿಸಲು ಕ್ರಮ ಕೈಗೊಳ್ಳುವಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ ಗೋಯಲ್ ಎಲ್ಲ ಠಾಣಾಧಿಕಾರಿಗಳಿಗೆ ಸೂಚಿಸಿದರು.
ಹಿಂದಿನ ಸಭೆಯಲ್ಲಿ ಪ್ರಸ್ತಾಪಗೊಂಡಿದ್ದ ದಲಿತ ಯುವತಿ ಮೇಲೆ ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯ ವಿಚಾರ ಠಾಣಾ ಹಂತದಲ್ಲೇ ಬಗೆಹರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದಾಗ ಅದಕ್ಕೆ ದಲಿತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಮಧ್ಯಪ್ರವೇಶಿಸಿ ಮಾತನಾಡಿದ ಡಿಸಿಪಿ ಸಿದ್ಧಾರ್ಥ ಗೋಯಲ್, ಇಂತಹ ಗಂಭೀರ ಪ್ರಕರಣಗಳನ್ನು ಠಾಣಾ ಹಂತದಲ್ಲೇ ಮಾತುಕತೆ ನಡೆಸಿ ಪರಿಹಾರ ಸಲ್ಲದು. ಕಾನೂನು ಪ್ರಕಾರ ಕೇಸು ದಾಖಲಿಸುವಂತೆ ಸಂತ್ರಸ್ತರಿಗೆ ಪೊಲೀಸರು ಸೂಚಿಸಬೇಕು ಎಂದರು.
ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆ ಹಾಗೂ ಪೋಕ್ಸೋ ಕೇಸುಗಳಲ್ಲಿ ಎಸ್ಪಿ ಹಂತದ ಅಧಿಕಾರಿಯೇ ತನಿಖಾಧಿ ಕಾರಿ ಆಗಿರುತ್ತಾರೆ. ಹಾಗಾಗಿ ಈ ಎರಡು ಪ್ರಕರಣಗಳಿಗೂ ಎಸಿಪಿಯೇ ತನಿಖಾಧಿಕಾರಿ ಆಗಿರುತ್ತಾರೆ ಎಂದು ಅವರು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಸೀಟು ಸಿಗುತ್ತಿಲ್ಲ. ಎಸ್‌ಎಸ್‌ಎಲ್ಸಿ ಪರೀಕ್ಷೆ ಮುಗಿದಾಕ್ಷಣ ಮುಂದಿನ ವಿದ್ಯಾಭ್ಯಾಸಕ್ಕೆ ಹಾಸ್ಟೆಲ್ ಸೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಜೂನ್‌ನಲ್ಲಿ ಪಿಯು ಕಾಲೇಜು ಆರಂಭವಾಗುತ್ತದೆ, ಆಗಸ್ಟ್ ವೇಳೆಗೆ ಹಾಸ್ಟೆಲ್‌ಗೆ ಅರ್ಜಿ ಆಹ್ವಾನಿಸುತ್ತಾರೆ. ಇದರಿಂದಾಗಿ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶ ಸಿಗುತ್ತಿಲ್ಲ. ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ದಲಿತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಇಲಾಖಾ ಅಧಿಕಾರಿ ಲಿಖಿತವಾಗಿ ಮೊದಲು ಅರ್ಜಿ ಸಲ್ಲಿಸಲು ಅವಕಾಶಇದೆ. ಬಳಿಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದರು.
ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಲಿಫ್ಟ್ ಸೌಲಭ್ಯಕ್ಕೆ ಆಪರೇಟರ್‌ನನ್ನು ನೇಮಿಸಬೇಕು. ಕೇಂದ್ರ ಮಾರುಕಟ್ಟೆಯಲ್ಲಿ ಕೂಡಲೇ ಪೊಲೀಸ್ ಔಟ್‌ಪೋಸ್ಟ್ ಸ್ಥಾಪಿಸುವಂತೆ ದಲಿತ ಮುಖಂಡರು ಆಗ್ರಹಿಸಿದರು.
ಮೂಡಬಿದ್ರೆಯಲ್ಲಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಸುಸನ್ನಾಳ ಆತ್ಮಹತ್ಯೆ ಪ್ರಕರಣದಲ್ಲಿ ವಾರ್ಡನ್ ಒಬ್ಬರನ್ನು ಹೊಣೆ ಮಾಡಿ ಕಾಲೇಜು ಆಡಳಿತ ಮಂಡಳಿಯು ಅವರನ್ನು ವಜಾ ಮಾಡಿದೆ.ಈ ಪ್ರಕರಣವನ್ನು ಸರಕಾರದ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸಿ , ಕೂಲಂಕಶವಾಗಿ ತನಿಖೆ ನಡೆಸ ನೈಜ ಆರೋಪಿಗಳನ್ನು ಬಂಧಿಸುವಂತೆ ಎಸ್‌ಪಿ. ಆನಂದ್ ಮನವಿ ಮಾಡಿದರು.
ಸಂಚಾರ ವಿಭಾಗದ ಡಿಸಿಪಿ ರವಿಶಂಕರ್ ಇದ್ದರು. ಎಸಿಪಿ ಧನ್ಯಾ ನಾಯಕ್ ನಿರೂಪಿಸಿದರು.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಠಾಣೆ ಎಪ್ರಿಲ್‌ನಿಂದ ಕಾರ್ಯಾರಂಭ ನಿರೀಕ್ಷೆ
ಎಸ್ಸಿ ಎಸ್ಟಿ ದೌರ್ಜನ್ಯಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣಗಳ ದೂರು ಇನ್ನು ಮುಂದೆ ಸರ್ಕಾರದ ಸೂಚನೆಯಂತೆ ಆಯಾ ಜಿಲ್ಲೆಗಳಲ್ಲಿ ಹೊಸದಾಗಿ ಸ್ಥಾಪನೆಯಾಗುವ ನಾಗರಿಕ ಹಕ್ಕು ಜಾರಿ ನಿರ್ದೇಶನಾ ಲಯ ಠಾಣೆಗಳಲ್ಲಿ ದಾಖಲಾಗಲಿದೆ.
ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ ಹಾಗೂ ದ.ಕ. ಜಿಲ್ಲೆಗೆ ಸಂಬಂಧಿಸಿ ಪ್ರಾದೇಶಿಕ ಕಚೇರಿ ಕೂಡ ಮಂಗಳೂರಿನಲ್ಲೇ ಇರಲಿದೆ. ಮಂಗಳೂರಿನ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಟ್ಟಡದಲ್ಲೇ ಪೊಲೀಸ್ ಠಾಣೆ ಆರಂಭವಾಗಲಿದೆ. ಹಾಲಿ ಕಚೇರಿಯನ್ನು ಪೊಲೀಸ್ ಠಾಣೆಯಾಗಿ ಪರಿವರ್ತಿಸಲು ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಸಿಬ್ಬಂದಿ ನೇಮಕ,ಮೂಲಸೌಕರ್ಯಗಳ ಅಳವಡಿಕೆ ಪೂರ್ಣಗೊಂಡು ಎಪಿಲ್‌ನಿಂದ ಕಾರ್ಯಾರಂಭಗೊಳ್ಳುವ ನಿರೀಕ್ಷೆ ಇದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.