ಬಬ್ಬುಕಟ್ಟೆ| ಸಮಾನ ಮನಸ್ಕ ಸಂಘಟನೆಗಳಿಂದ ಸೌಹಾರ್ದ ಇಫ್ತಾರ್ ಕೂಟ

ಉಳ್ಳಾಲ : ಬದುಕಿನಲ್ಲಿ ಸೌಹಾರ್ದ ಒಂದು ಉಸಿರು.ನಾವು ಸೌಹಾರ್ದತೆಯಲ್ಲೇ ಬದುಕಿ ಬಂದಿದ್ದೇವೆ ಎಂದು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಹೇಳಿದರು.
ಸದ್ಭಾವನಾ ವೇದಿಕೆ ಉಳ್ಳಾಲ, ಸಮಾಸ್ ಬ್ಯಾಡ್ಮಿಂಟನ್ ತೊಕ್ಕೊಟ್ಟು, ಪೊಸಕುರಲ್ ತೊಕ್ಕೊಟ್ಟು, ಹ್ಯುಮಾನಿಟಿ ಫೌಂಡೇಶನ್ ಮಂಗಳೂರು, ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಉಳ್ಳಾಲ, ಜಮಾತೆ ಇಸ್ಲಾಮಿ ಹಿಂದ್ ಉಳ್ಳಾಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಬಬ್ಬುಕಟ್ಟೆ ಪ್ರೈಮ್ ಸ್ಪೋರ್ಟ್ಸ್ ಅರೆನಾ ಮೈದಾನದಲ್ಲಿ ನಡೆದ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸೌಹಾರ್ದತೆ ಬಯಸದ ಇನ್ನೊಂದು ವರ್ಗ ಇದೆ.ಅವರಿಗೆ ಯಾವ ಸಲಹೆ ನೀಡಿದರೂ ಅವರು ಬದಲಾಗು ವುದಿಲ್ಲ. ನಾವು ಸಣ್ಣ ಪ್ರಾಯದಲ್ಲಿ ಇದ್ದ ವೇಳೆ ಹಿಂದೂ ಮುಸ್ಲಿಂ ಜತೆಯಾಗಿ ಇದ್ದರು.ಜತೆಯಾಗಿ ಕೆಲಸ ಮಾಡುತ್ತಿದ್ದರು. ಬಡತನ ಅಂದಿತ್ತು. ಬಡತನ ಸೌಹಾರ್ದ ಬದುಕನ್ನೇ ಬಯಸುತ್ತದೆ ಎಂದರು.
ಸಮಾಜದ ಸ್ವಾಸ್ಥ್ಯ ಹಾಳು ಮಾಡುವವರು ನಾವೇ.ಹಿಂದು ಸಮುದಾಯದ ಒಬ್ಬ ವ್ಯಕ್ತಿಯನ್ನು ಮಂಗಳೂರಿನಲ್ಲಿ ಮುಸ್ಲಿಂ ವ್ಯಕ್ತಿ ಕೊಲೆ ಮಾಡಿದರೆ ದೊಡ್ಡ ಸುದ್ದಿ ಆಗುತ್ತದೆ. ದುಬೈ ಯಿಂದ ಕರೆ ಬರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
ಮಸ್ಜುದುಲ್ ಹುದಾ ಮಸೀದಿ ಖತೀಬ್ ಮುಹಮ್ಮದ್ ಕುಂಞಿ ಮಾತನಾಡಿ, ಪ್ರಸಕ್ತ ಕಾಲ ಘಟ್ಟದಲ್ಲಿ ಮನುಷ್ಯರ ನಡುವೆ ಅಂತರ ಜಾಸ್ತಿ ಆಗುತ್ತಿದೆ. ಒಂದು ಧರ್ಮದ ಧಾರ್ಮಿಕ ಕಾರ್ಯಕ್ರಮ ನಡೆಯುವ ವೇಳೆ ಇನ್ನೊಂದು ಧರ್ಮದವರು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇವುಗಳು ಮೊದಲು ನಿವಾರಣೆ ಆಗಬೇಕು ಎಂದರು.
ಪಿಂಗಾರ ಪತ್ರಿಕೆ ಸಂಪಾದಕ ರೈಮಂಡ್ ಡಿ ಕುನ್ಹ ತಾಕೋಡೆ ಮಾತನಾಡಿದರು. ಸದ್ಭಾವನಾ ವೇದಿಕೆ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮ ದಲ್ಲಿ ಕಣಚೂರು ಮೆಡಿಕಲ್ ಕಾಲೇಜು ನಿರ್ದೇಶಕ ಅಬ್ದುಲ್ ರಹಿಮಾನ್, ರಫೀಕ್ ಪೋಕ ಜಮಾತೆ ಇಸ್ಲಾಮಿ ಹಿಂದ್ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಂ ಮತ್ತಿತರರು ಉಪಸ್ಥಿತರಿದ್ದರು.
ಹ್ಯುಮಾನಿಟಿ ಫೌಂಡೇಶನ್ ಅಧ್ಯಕ್ಷ ನಾಸೀರ್ ಅಹ್ಮದ್ ಸಾಮಣಿಗೆ ಸ್ವಾಗತಿಸಿದರು. ಸುಲ್ತಾನ್ ನಬೀಲ್ ಕಿರಾಅತ್ ಪಠಿಸಿದರು. ಮುಝಮ್ಮಿಲ್ ಕಾರ್ಯಕ್ರಮ ನಿರೂಪಿಸಿದರು.

