ಬಿಜೆಪಿ ನೇತೃತ್ವದ ಭಾರತದಲ್ಲಿ ಯುವಜನರ ಆಶೋತ್ತರ ಕಡೆಗಣಿಸಲಾಗಿದೆ: ಸುನೀಲ್ ಕುಮಾರ್ ಬಜಾಲ್

ಮಂಗಳೂರು, ಮಾ.23: ಭಾರತ ದೇಶದಲ್ಲಿಂದು ನಿರುದ್ಯೋಗದ ಪ್ರಮಾಣ ವಿಪರೀತವಾಗಿ ಏರಿಕೆ ಯಾಗಿದೆ. ಬಡತನ, ಹಸಿವು, ಅಸ್ಪ್ರಶ್ಯತೆ, ಮತೀಯವಾದದ ಭಾರತವನ್ನು ಭಗತ್ ಸಿಂಗ್ ಎಂದೂ ಬಯಸಿರಲಿಲ್ಲ. ಕೇಂದ್ರದಲ್ಲಿ ಆಳುವ ಬಿಜೆಪಿ ನೇತೃತ್ವದ ಭಾರತದಲ್ಲಿ ಯುವಜನರ ಆಶೋತ್ತರಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಡಿವೈಎಫ್‌ಐ ಮಾಜಿ ರಾಜ್ಯಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಹೇಳಿದರು.
ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿಯು ಭಗತ್ ಸಿಂಗ್‌ರ ಹುತಾತ್ಮ ದಿನದ ಅಂಗವಾಗಿ ನಿರುದ್ಯೋಗದ ವಿರುದ್ಧ ಸೌಹಾರ್ದ ಭಾರತಕ್ಕಾಗಿ ಕೊಟ್ಟಾರದ ಜಿಪಂ ಕಚೇರಿಯಿಂದ ಉರ್ವಸ್ಟೋರ್ ಜಂಕ್ಷನ್‌ವರೆಗೆ ರವಿವಾರ ಹಮ್ಮಿಕೊಂಡ ಭಗತ್ ಸಿಂಗ್ ಹುತಾತ್ಮ ಜ್ಯೋತಿ ಮೆರವಣೆಗೆಯ ಬಳಿಕ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಡಿವೈಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಮಾತನಾಡಿ ಸಂತೋಷ್ ಬಜಾಲ್ ಮಾತನಾಡಿ ಇವತ್ತಿನ ಶಿಕ್ಷಣ ಸಂಸ್ಥೆಗಳು ನಿರುದ್ಯೋಗಿ ಯುವಜನರನ್ನು ಸೃಷ್ಟಿಸುವ ಕಾರ್ಖಾನೆಯಾಗಿದೆ. ಶಿಕ್ಷಣ ಪಡೆದು ಹೊರ ಬರುತ್ತಿರುವ ಯುವಜನರಿಗೆ ಉದ್ಯೋಗವಿಲ್ಲ. ಇರುವ ಉದ್ಯೋಗಳಿಗೆ ಭದ್ರತೆಯಿಲ್ಲ. ಸಣ್ಣ ಪುಟ್ಟ ಅಂಗಡಿ ಮುಂಗಟ್ಟುಗಳಲ್ಲಿ ಕಡಿಮೆ ಆದಾಯಕ್ಕೆ ದುಡಿಯುತ್ತಿರುವ ಕಾರ್ಮಿಕರಿಗೆ ಕನಿಷ್ಟ ವೇತನವೂ ಇಲ್ಲ. ಈ ಬಗ್ಗೆ ಒಬ್ಬನೇ ಒಬ್ಬ ಶಾಸಕ ಧ್ವನಿ ಎತ್ತುತ್ತಿಲ್ಲ. ಅದೇ ಶಾಸಕರೆಲ್ಲ ತಮ್ಮ ಸಂಬಳ ಹೆಚ್ಚಳಗೊಳಿಸಿ ಅವರ ಬದುಕನ್ನಷ್ಟೇ ಭದ್ರಗೊಳಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಇಂದಿನ ಯುವ ತಲೆಮಾರಿಗೆ ಭಗತ್ ಸಿಂಗ್‌ರ ಹೋರಾಟದ ಆಶಯಗಳನ್ನು ಮತ್ತವರ ಕನಸಿನ ಭಾರತವನ್ನು ಕಟ್ಟುವ ಇತಿಹಾಸಗಳ ಕುರಿತು ತಿಳಿಸಬೇಕಾಗಿದೆ ಎಂದರು.
ವೇದಿಕೆಯಲ್ಲಿ ಡಿವೈಎಫ್‌ಐ ಜಿಲ್ಲಾ ಮುಖಂಡರಾದ ನವೀನ್ ಕೊಂಚಾಡಿ, ನಿತಿನ್ ಕುತ್ತಾರ್, ಪುನೀತ್ ಉರ್ವಸ್ಟೋರ್, ಮಾಧುರಿ ಬೋಳಾರ ಉಪಸ್ಥಿತರಿದ್ದರು.
ಡಿವೈಎಫ್‌ಐ ಮುಖಂಡರಾದ ಜಗದೀಶ್ ಬಜಾಲ್, ರಿಜ್ವಾನ್ ಹರೇಕಳ, ರಾಜೇಶ್ ಉರ್ವಸ್ಟೋರ್, ಮನೋಜ್ ಉರ್ವಸ್ಟೋರ್, ಪ್ರದೀಪ್, ಧಿರಾಜ್ ಬಜಾಲ್, ಪ್ರಕಾಶ್ ಶೆಟ್ಟಿ ಬಜಾಲ್, ಭಾರತೀ ಬೋಳಾರ, ದಯಾನಂದ ಶೆಟ್ಟಿ, ಇಕ್ಬಾಲ್ ಉರ್ವಸ್ಟೋರ್ ಮತ್ತಿತರರು ಉಪಸ್ಥಿತರಿದ್ದರು.
