ದೇರಳಕಟ್ಟೆ: ಅಂಚೆ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮ

ಕೊಣಾಜೆ: ಅಂಚೆ ಅಪಘಾತ ವಿಮಾ ಯೋಜನೆ ಜನ ಸಾಮಾನ್ಯರಿಗಾಗಿ ರೂಪಿಸಿರುವಂತಹ ಯೋಜನೆ ಯಾಗಿದ್ದು ಕೇವಲ ಪಾಲಿಸಿ ಮಾಡಿಸುವುದು ಮಾತ್ರವಲ್ಲ ಅದರ ಪರಿಹಾರ ಅರ್ಜಿಗಳು ಸಲ್ಲಿಕೆಯಾದಾಗ ಅದರ ತ್ವರಿತ ವಿಲೇವಾರಿಗೆ ಕೂಡಾ ಅಂಚೆ ಇಲಾಖೆ ಅಷ್ಟೇ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ಹಿರಿಯ ಅಂಚೆ ಅಧೀಕ್ಷಕ ಎಂ.ಸುಧಾಕರ ಮಲ್ಯ ಇವರು ತಿಳಿಸಿದರು.
ಅವರು ದೇರಳಕಟ್ಟೆಯ ವೈದ್ಯನಾಥ ನಗರದ ಶ್ರೀ ವೈದ್ಯನಾಥ ಭಜನಾ ಮಂಡಳಿ, ವೈದ್ಯನಾಥನಗರ ದೇರಳಕಟ್ಟೆ ಮತ್ತು ಭಾರತೀಯ ಅಂಚೆ ಇಲಾಖೆಯ ಸಹಭಾಗಿತ್ವದಲ್ಲಿ ನಡೆದ ಅಂಚೆ ಜನ ಸುರಕ್ಷಾ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.
ಈಗ ಅಪಘಾತ ವಿಮೆಯ ಜೊತೆಗೆ ಅಂಚೆ ಇಲಾಖೆ ಜೀವ ವಿಮೆ, ಆರೋಗ್ಯ ವಿಮೆ ಮತ್ತು ವಾಹನ ವಿಮಾ ಯೋಜನೆಗಳನ್ನು ಕೂಡಾ ಜನರಿಗೆ ಕೈಗೆಟಕುವ ಪ್ರೀಮಿಯಂ ನಲ್ಲಿ ತಲುಪಿಸುತ್ತಿದೆ. ಜನರು ಇದರ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ಇದೇ ಸಂದರ್ಭ ಕಳೆದ ನವೆಂಬರ್ ನಲ್ಲಿ ಹರೇಕಳದಲ್ಲಿ ನಡೆದ ಅಂಚೆ ಜನ ಸುರಕ್ಷಾ ಶಿಬಿರದಲ್ಲಿ ಅಂಚೆ ಅಪಘಾತ ವಿಮಾ ಪಾಲಿಸಿ ಮಾಡಿಸಿದ್ದ ಅರುಣ್ ಕುಮಾರ್ ರವರು ಅಪಘಾತವೊಂದರಲ್ಲಿ ನಿಧನರಾಗಿದ್ದು ಅವರ ಪತ್ನಿ ಮೀನಾಕ್ಷಿ ಮತ್ತು ಮಕ್ಕಳಿಗೆ 10 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ವಿತರಿಸಲಾಯಿತು.
ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಸುಭಾಶ್ ಸಾಲಿಯಾನ್ ಇವರು ಅಂಚೆ ಇಲಾಖೆಯಲ್ಲಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ವ್ಯವಸ್ಥಾಪಕರು ಸಿಹಾಸ್ ಬಷೀರ್, ಆದಿತ್ಯ ಬಿರ್ಲಾ ಸಂಸ್ಥೆಯ ಮಧು ಇವರು ಪರಿಹಾರ ವಿತರಣೆಯಲ್ವಿವರಿಸಿದರು, ಅಂಚೆ ಅಪಘಾತ ವಿಮೆಯ ಬಗ್ಗೆ ವಿವರಿಸಿದರು.
ವೈದ್ಯನಾಥನಗರ ಭಜನಾ ಮಂಡಳಿಯ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ಸುರೇಶ್ ಆಚಾರ್ಯ, ಮಾಜಿ ಅಧ್ಯಕ್ಷರಾದ ಕೆ. ಪಿ.ಸುರೇಶ್ ಶೆಟ್ಟಿ, ಮಂಗಳ ಗಂಗೋತ್ರಿ ಅಂಚೆ ಪಾಲಕಿ ಬಿ.ರಮಣಿ, ದೇರಳಕಟ್ಟೆ ಅಂಚೆ ಪಾಲಕ ಮಹೇಶ್, ಆಸುಪಾಸಿನ ಅಂಚೆ ಕಚೇರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ನಾಗೇಶ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಶಿಬಿರದಲ್ಲಿ ಸುಮಾರು 51 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಅಪಘಾತ ವಿಮಾ ಪಾಲಿಸಿ ಮಾಡಿಸಿಕೊಡಲಾಯಿತು.