ಒಂದೂವರೆ ತಿಂಗಳಿಂದ ಯುವಕ ನಾಪತ್ತೆ: ದೂರು ನೀಡಿದ್ದರೂ ಇನ್ನೂ ಪತ್ತೆಯಾಗಿಲ್ಲ!

Update: 2023-11-26 10:16 GMT

ಮಂಗಳೂರು, ನ. 26: ಪೌರ ಕಾರ್ಮಿಕರೊಬ್ಬರ 22ರ ಹರೆಯದ ಪುತ್ರ ಕಳೆದ ಒಂದೂವರೆ ತಿಂಗಳಿನಿಂದ ನಾಪತ್ತೆಯಾಗಿದ್ದು, ಕಾವೂರು ಠಾಣೆಯಲ್ಲಿ ದೂರು ನೀಡಲಾಗಿದೆ. ಆದರೆ ಇನ್ನೂ ಆತನ ಪತ್ತೆಯಾಗಿಲ್ಲ ಎಂಬ ದೂರು ಮಂಗಳೂರು ಪೊಲೀಸ್ ಆಯುಕ್ತರಿಗೆ ರವಿವಾರ ಸಲ್ಲಿಕೆಯಾಗಿದೆ.

ಪಾಂಡೇಶ್ವರದ ರೊಸಾರಿಯೊ ಚರ್ಚ್ ಆವರಣದ ಸಭಾಂಗಣದಲ್ಲಿ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅಧ್ಯಕ್ಷತೆಯಲ್ಲಿ ನಡೆದ ದಲಿತರ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡ ಎಸ್.ಪಿ. ಆನಂದ್ ಪ್ರಕರಣದ ಬಗ್ಗೆ ಗಮನ ಸೆಳೆದರು.

ಪೌರ ಕಾರ್ಮಿಕೆ ಶೋಭಾ ಎಂಬವರ ಪುತ್ರ ಮನೋಜ್ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಗಾಗಿ ತಮ್ಮ ಮನೆ ಪಕ್ಕದ ವ್ಯಕ್ತಿಗೆ 25,000 ರೂ. ನೀಡಿದ್ದರು. ಒಂದು ತಿಂಗಳಾದರೂ ಬೈಕ್ ಸಿಗದ ಕಾರಣ ಹಣ ಮರಳಿ ಕೇಳಿದ್ದರು. ಇದಾಗಿ ಕೆಲ ದಿನಗಳ ಬಳಿಕ ಆ ವ್ಯಕ್ತಿ ಯುವಕನನ್ನು 10 ದಿನಗಳ ಕೂಲಿ ಕೆಲಸಕ್ಕಾಗಿ ಬರಲು ಹೇಳಿದ್ದರು. ಆ ಸಮಯದಿಂದ ಯುವಕ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪೊಲೀಸರು ವ್ಯಕ್ತಿಯನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಆ ಸಂದರ್ಭ ಆತ ಹಣ ಪಡೆದಿರುವುದನ್ನು ಒಪ್ಪಿಕೊಂಡು ಎರಡು ಕಂತುಗಳಲ್ಲಿ ವಾಪಸ್ ಕೊಡುವುದಾಗಿ ಹೇಳಿ 10,000 ರೂ. ಹಿಂದಿರುಗಿಸಿದ್ದಾರೆ. ಆದರೆ ಬಾಕಿ ಹಣವೂ ವಾಪಾಸಾಗಿಲ್ಲ. ಒಂದೂವರೆ ತಿಂಗಳಿನಿಂದ ಯುವಕನ ಪತ್ತೆಯೂ ಆಗಿಲ್ಲ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾವೂರು ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಗುರುರಾಜ್, ವ್ಯಕ್ತಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಂತೆ ಆತ ಎರಡು ಕಂತುಗಳಲ್ಲಿ ಹಣ ವಾಪಸ್ ಕೊಡುವುದಾಗಿ ಹೇಳಿದ್ದು, ಯುವಕನ ನಾಪತ್ತೆಗೂ ತನಗೂ ಸಂಬಂಧ ಇಲ್ಲ ಹೇಳಿದ್ದಾರೆ. ನಾಪತ್ತೆ ಪ್ರಕರಣ ದಾಖಲಾಗಿದ್ದು, ಸಿಡಿಆರ್ ಹಾಕಲಾಗಿದೆ. ನಾಪತ್ತೆಯಾಗಿರುವ ಯುವಕನ ಫೋನ್ ಸ್ವಿಚ್ ಆಫ್ ಆಗಿದೆ ಎಂದರು.

ಪ್ರಕರಣವನ್ನು ಆದಷ್ಟು ಬೇಗ ಪತ್ತೆ ಹಚ್ಚುವಂತೆ ಆಯುಕ್ತ ಅನುಪಮ್ ಅಗ್ರವಾಲ್ ಇನ್ ಸ್ಪೆಕ್ಟರ್ ರಿಗೆ ಸೂಚನೆ ನೀಡಿದರು.

ಫೇಸ್‌ಬುಕ್‌ನಲ್ಲಿ ಡಾ. ಅಂಬೇಡ್ಕರ್‌ಗೆ ಅವಮಾನ: ದೂರು

ಸಾಮಾಜಿಕ ಜಾಲತಾಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಗೆ ಅವಮಾನ ಮಾಡುವುದು ಸೇರಿದಂತೆ ಕೋಮುಗಲಭೆಗೆ ಪೂರಕವಾದ ಅವಹೇಳನಕೇರಿ ಪೋಸ್ಟ್ ಹಾಕುವ ಬಗ್ಗೆ ಕಳೆದ ಸಭೆಯಲ್ಲಿ ದೂರು ನೀಡಲಾಗಿದ್ದರೂ ಕ್ರಮವಾಗಿಲ್ಲ ಎಂದು ದಲಿತ ನಾಯಕರೊಬ್ಬರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು ಈ ಬಗ್ಗೆ ಫೇಸ್‌ಬುಕ್ ಸಂಸ್ಥೆಯವರ ಜತೆ ಪತ್ರ ವ್ಯವಹಾರ ನಡೆಸಲಾಗಿದೆ ಎಂದರು.

ಠಾಣೆಗೆ ಬರುವವರ ಜತೆ ಗೌರವದಿಂದ ವರ್ತಿಸಿ

ಪೊಲೀಸ್ ಠಾಣೆಗೆ ಬರುವ ಜನರ ಜತೆ ಒರಟಾಗಿ ವರ್ತಿಸಲಾಗುತ್ತಿದೆ ಎಂದು ಮುಖಂಡರೊಬ್ಬರ ದೂರಿಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು, ಠಾಣೆಗಳಲ್ಲಿ ಎಲ್ಲಾ ಅಧಿಕಾರಿ ಸಿಬ್ಬಂದಿ ಸಮಾಜದ ಯಾರೇ ಮುಖಂಡ ಅಥವಾ ಜನಸಾಮಾನ್ಯ ಬಂದಾಗಲೂ ಗೌರವ ಕೊಟ್ಟು ವ್ಯವಹರಿಸಬೇಕು. ಯಾವುದೇ ದೂರಿನ ಸಂದರ್ಭ ಸಮಸ್ಯೆ ಇತ್ಯರ್ಥಪಡಿಸುವುದು ಮುಂದಿನ ವಿಚಾರ. ಆದರೆ ಠಾಣೆಗೆ ಬಂದವರ ಜತೆ ವಿನಯದಿಂದ ವರ್ತಿಸುವುದು ಮುಖ್ಯವಾಗಿರಬೇಕು ಎಂದರು.

ಅಂಬೇಡ್ಕರ್ ಭವನ ಕಾಣುವುದೇ ಇಲ್ಲ!

ಉರ್ವಾಸ್ಟೋರ್‌ನಲ್ಲಿ ನಿರ್ಮಾಣವಾಗಿರುವ ದ.ಕ. ಜಿಲ್ಲಾ ಅಂಬೇಡ್ಕರ್ ಭವನ ರಸ್ತೆಗೆ ಗೋಚರಿಸುವುದಿಲ್ಲ. ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು. ಎದುರಿನ ಕ್ವಾರ್ಟಸ್ ತೆರವುಗೊಳಿಸಿ ಅಲ್ಲಿ ಡಾ. ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ಚಂದ್ರ ಕುಮಾರ್ ಸೇರಿದಂತೆ ದಲಿತ ಮುಖಂಡರು ಆಗ್ರಹಿಸಿದರು.

ದಲಿತ ದೌಜನ್ಯ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ಪ್ರಕರಣ ದಾಖಲಿಸುವುದು ನಡೆಯುತ್ತಿದೆ. ಇಂತಹ ಪ್ರಕರಣಗಳಲ್ಲಿ ದೂರು ನೀಡುವವರ ಜಾತಿ ಪ್ರಮಾಣ ಪತ್ರದ ಪರಿಶೀಲನೆ ನಡೆಸಬೇಕು ಎಂದು ಅನಿಲ್ ಉರ್ವಾಸ್ಟೋರ್ ಎಂಬವರು ದೂರಿದರು.

ಆನ್‌ಲೈನ್ ಗೇಮ್, ಕ್ರಿಕೆಟ್ ಬೆಟ್ಟಿಂಗ್ ನಿಲ್ಲಿಸಿ

ಶಾಲಾ ಮಕ್ಕಳು ಕೂಡಾ ಆನ್‌ಲೈನ್ ಗೇಮ್, ಕ್ರಿಕೆಟ್ ಬೆಟ್ಟಿಂಗ್ ಬಲಿಪಶುಗಳಾಗುತ್ತಿದ್ದಾರೆ. ಶಾಲೆಬಿಟ್ಟು ಕೆಲಸಕ್ಕೆ ಹೋಗುವ ಪ್ರಮೇಯವೂ ನಡೆಯುತ್ತಿದೆ. ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಭಾಸ್ಕರ್ ಎಂಬವರು ಆಗ್ರಹಿಸಿದರು.

ಜಾತ್ರೆಯಲ್ಲಿ ರೋಗಿಯ ಚಿಕಿತ್ಸೆಗಾಗಿ ವೇಷ ಹಾಕಿಕೊಂಡು ಚಂದಾ ಎತ್ತುವ ಪ್ರಕ್ರಿಯೆಗಳು ಹೆಚ್ಚಾಗುತ್ತಿವೆ. ಈ ರೀತಿ ಸಂಗ್ರಹಿಸಿದ ಚಂದಾ ಸಂಬಂಧಪಟ್ಟವರಿಗೆ ತಲುಪುವ ಬಗ್ಗೆ ಸಂದೇಹವಿದೆ. ಅದರ ಬದಲು ಚಿಕಿತ್ಸೆ ಅಗತ್ಯ ಇರುವವರಿಗೆ ನೇರವಾಗಿ ಅಥವಾ ಸರಕಾರದ ಮೂಲಕ ಸೂಕ್ತ ಕ್ರಮ ವಹಿಸಬೇಕು. ಠಾಣೆಗಳ ಎದುರು ಪೊಲೀಸರಿಂದ ವಶಪಡಿಸಿಕೊಳ್ಳಲಾದ ವಾಹನಗಳನ್ನು ಇರಿಸುವುದರಿಂದ ಠಾಣೆಗೆ ಬರುವವರಿಗೆ ವಾಹನ ಪಾರ್ಕ್ ಮಾಡಲು ಸ್ಥಳಾವಕಾಶ ಇರುವುದಿಲ್ಲ. ಪೊಲೀಸರು ವಶಪಡಿಸಿಕೊಂಡ ವಾಹನಗಳನ್ನು ಇರಿಸಲು ಪ್ರತ್ಯೇಕ ಸ್ಥಳ ಗುರುತಿಸಬೇಕು ಎಂಬ ದೂರುಗಳು ಸಭೆಯಲ್ಲಿ ವ್ಯಕ್ತವಾಯಿತು.

ಸಭೆಯಲ್ಲಿ ಡಿಸಿಪಿ ದಿನೇಶ್‌ಕುಮಾರ್ ಉಪಸ್ಥಿತರಿದ್ದರು.

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News