ಮಣಿಪುರದ ಹಿಂಸಾಚಾರ ಉಗ್ರಗಾಮಿಗಳಿಗೆ ಕಡಿಮೆಯಿಲ್ಲದ ಕೃತ್ಯ-ಎಂ.ಬಿ.ವಿಶ್ವನಾಥ್
ಪುತ್ತೂರು: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಗಳು ಯಾವುದೇ ಉಗ್ರಗಾಮಿಗಳು ನಡೆಸುತ್ತಿರುವ ಕೃತ್ಯಕ್ಕೆ ಕಡಿಮೆಯಿಲ್ಲ. ಅಲ್ಲಿ ಮಹಿಳೆಯರ ಬೆತ್ತಲೆ ಮಾಡಿ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ನಡೆಸಲಾಗಿದೆ. ಅಲ್ಲದೆ ಜನಾಂಗವನ್ನು ಗುರಿಯಾಗಿರಿಸಿಕೊಂಡು ಹಿಂಸಾಚಾರಗಳು ನಡೆಯು ತ್ತಿದೆ. ಸರಕಾರ ಎಚ್ಚೆತ್ತುಕೊಂಡು ಜನರನ್ನು ರಕ್ಷಣೆಗೆ ಮುಂದಾಗಬೇಕು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಆಗ್ರಹಿಸಿದರು.
ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಣಿಪುರ ನಡೆಯುತ್ತಿರುವ ಹಿಂಸಾಚಾರವನ್ನು ವಿರೋಧಿಸಿ ಪುತ್ತೂರು ಬಸ್ಸು ನಿಲ್ದಾಣದ ಬಳಿಯಲ್ಲಿರುವ ಗಾಂಧೀ ಕಟ್ಟೆಯಲ್ಲಿ ಮೊಂಬತ್ತಿ ಉರಿಸಿ ನಡೆಸ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಮಾತನಾಡಿ, ಮಣಿಪುರದ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆಗೆ ಕುಂದುಂ ಟಾಗಿದ್ದು, ಹಿರಿಯರ ದೂರದರ್ಶಿತದ ಚಿಂತನೆಗಳ ಮಣ್ಣು ಪಾಲಾಗಿದೆ. ಚುನಾವಣೆಯಲ್ಲಿ ಗೆಲ್ಲುವುದೇ ಪ್ರಜಾಪ್ರಭುತ್ವವಲ್ಲ. ಎಲ್ಲರ ಪ್ರಾಣ, ಮಾನ ರಕ್ಷಣೆ ಪ್ರಧಾನಿಯ ಕರ್ತವ್ಯ. ರಷ್ಯಾ-ಉಕ್ರೇನ್ ಯುದ್ದ ನಿಲ್ಲಿಸಲಾಗುವ ಪ್ರಧಾನಿಗೆ ಮಣಿಪುರದ ಗಲಭೆ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಅವಿಶ್ವಾಸ ನಿರ್ಣಯ ಮಂಡನೆಯೇ ಪ್ರಧಾನಿ ಮೋದಿಗೆ ಮೊದಲ ಹಿನ್ನಡೆಯಾಗಿದೆ. ದೇಶದಲ್ಲಿ ಅಲ್ಪ ಸಂಖ್ಯಾತರು, ದಲಿತರಿಗೆ ರಕ್ಷಣೆಯಿಲ್ಲ ಎಂಬಂತಾಗಿದೆ. ದೇಶ ಉಳಿಯ ಬೇಕಾದರೆ ಮೋದಿ ಅಧಿಕಾರದಿಂದ ಇಳಿಯಬೇಕು ಎಂದರು.
ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ಜಿ.ಪಂ ಮಾಜಿ ಸದಸ್ಯ ಎಂ.ಎಸ್ ಮಹಮ್ಮದ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿ'ಸೋಜ, ಜಿಲ್ಲಾ ಕಿಸಾನ್ ಘಟಕದ ರವೀಂದ್ರ ರೈ ನೆಕ್ಕಿಲು, ಬ್ಲಾಕ್ ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ ಬನ್ನೂರು, ಉಪಾಧ್ಯಕ್ಷ ಮಹಾಬಲ ರೈ ವಳತ್ತಡ್ಕ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸಿದ್ದೀಕ್ ಸುಲ್ತಾನ್ ಸ್ವಾಗತಿಸಿದರು. ನಗರ ಸಭಾ ಸದಸ್ಯ ಮಹಮ್ಮದ್ ರಿಯಾಝ್ ವಂದಿಸಿದರು.