ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಯಿಂದ ಬೀದಿಗೆ ಬಿದ್ದ ಶಿಳ್ಳೆಕ್ಯಾತ ಕುಟುಂಬಗಳು: ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿ ಆರೋಪ
ಮಂಗಳೂರು : ಮಹಾನಗರ ಪಾಲಿಕೆ ವ್ಯಾಪ್ತಿಯ ಬೋಳಾರ ವಾರ್ಡಿನ ನೇತ್ರಾವತಿ ನದಿ ತೀರದಲ್ಲಿ ಕಳೆದ ಹಲವು ವರ್ಷ ಗಳಿಂದ ತೆಪ್ಪದ ಮೂಲಕ ಮೀನು ಹಿಡಿದು ಜೀವನ ಸಾಗಿಸುತ್ತಿರುವ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ 8 ಕುಟುಂಬ ಗಳು ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಯಿಂದಾಗಿ ಬೀದಿಗೆ ಬಿದ್ದಿದೆ ಎಂದು ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿಯು ಆರೋಪಿಸಿದೆ. ಅಲ್ಲದೆ ತಕ್ಷಣ ಈ ಕುಟುಂಬಗಳ ಗುಡಿಸಲನ್ನು ಉಳಿಸಬೇಕು ಮತ್ತು ಶಾಶ್ವತ ಮನೆಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದೆ.
ಸ್ಮಾಟ್ ಸಿಟಿ ಯೋಜನೆಯಡಿ 30 ಕೋ.ರೂ. ವೆಚ್ಚದಲ್ಲಿ ನದಿ ತೀರದಲ್ಲಿ ನಿರ್ಮಿಸಲು ಹೊರಟಿರುವ ವಾಕಿಂಗ್ ಟ್ರಾಕ್, ಸೈಕಲ್ ಟ್ರಾಕ್, ಪ್ಲೆ ಏರಿಯಾ ಇತ್ಯಾದಿ ಕಾಮಗಾರಿಗಳು ಶಿಳ್ಳೆಕ್ಯಾತ ಸಮುದಾಯದ ಗುಡಿಸಲುಗಳಿರುವ ಜಾಗದಲ್ಲೇ ನಿರ್ಮಾಣವಾಗಲಿರುವುದರಿಂದ ಈ ಸಮುದಾಯ ಕನಿಷ್ಟ ಮೂಲಭೂತ ಸೌಕರ್ಯಗಳಿಲ್ಲದೆ ಬದುಕುತ್ತಿರುವ ಸಣ್ಣ ಗುಡಿಸಲುಗಳನ್ನು ಕಳೆದುಕೊಂಡು ಬೀದಿಗೆ ಬೀಳುವ ಹೀನಾಯ ಪರಿಸ್ಥಿತಿ ಉಂಟಾಗಲಿದೆ ಎಂದು ದ.ಕ.ಜಿಲ್ಲಾಡಳಿತಕ್ಕೆ ಡಿವೈಎಫ್‌ಐ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಲಾಗಿದೆ. ಶಾಶ್ವತ ಸೂರಿಗಾಗಿ ಮನೆ ನಿವೇಶನಕ್ಕೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯಿಂದ ಮನೆ ಕಳೆದುಕೊಂಡು ಬೀದಿ ಪಾಲಾಗುವ ಆತಂಕದಲ್ಲಿರುವ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ ೮ ಗುಡಿಸಲುಗಳನ್ನು ಉಳಿಸಬೇಕು ಅಥವಾ ಪರ್ಯಾಯ ಶಾಶ್ವತ ಮನೆ ನಿರ್ಮಿಸಿ ಕೊಡಬೇಕು ಎಂದು ದ.ಕ.ಜಿಲ್ಲಾಧಿಕಾರಿ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕರನ್ನು ಒತ್ತಾಯಿಸಿದೆ.
ಕರಾವಳಿ ವೃತ್ತಿನಿರತ ಅಲೆಮಾರಿ (ಶಿಳ್ಳೆಕ್ಯಾತ) ಹಕ್ಕುಗಳ ಸಮಿತಿ ಹಾಗೂ ಸಂತ್ರಸ್ತರುಗಳ ನಿಯೋಗದಲ್ಲಿ ಸಮಿತಿಯ ಗೌರವಾಧ್ಯಕ್ಷ ಸಂತೋಷ್ ಬಜಾಲ್, ಅಧ್ಯಕ್ಷ ರವಿ ಟಿ.ಎನ್, ಕಾರ್ಯದರ್ಶಿ ವೆಂಕಟೇಶ್, ಸಂತ್ರಸ್ತರಾದ ದೊರೆ, ಚಿರಂಜೀವಿ, ಮಧು, ರಮೇಶ, ಮಂಗಳಾ, ಸರಳಾ, ರೇಣುಕಾ, ಲಕ್ಷ್ಮಣ, ಶಾಂತ ಕುಮಾರ ಉಪಸ್ಥಿತರಿದ್ದರು.