ಸೋಮವಾರ ಐದನೇ ಹಂತದ ಮತದಾನ | 8 ರಾಜ್ಯಗಳ 49 ಕ್ಷೇತ್ರಗಳಿಗೆ ಚುನಾವಣೆ
ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಸೋಮವಾರ ಐದನೇ ಹಂತದ ಮತದಾನ ನಡೆಯಲಿದ್ದು ಎಂಟು ರಾಜ್ಯಗಳ 49 ಕ್ಷೇತ್ರಗಳ ಜನರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಜಾರ್ಖಂಡ್ ಹಾಗೂ ಉತ್ತರಪ್ರದೇಶದ ಎರಡು ವಿಧಾನಸಭಾ ಕ್ಷೇತ್ರಗಳಿಗೂ ನಾಳೆ ಮತದಾನ ನಡೆಯಲಿದೆ.
ಬಿಹಾರದ ಐದು, ಜಮ್ಮುಕಾಶ್ಮೀರದ ಒಂದು, ಜಾರ್ಖಂಡ್ನ ಮೂರು ಹಾಗೂ ಲಡಾಕ್ನ ಒಂದು, ಮಹಾರಾಷ್ಟ್ರದ 13 ಹಾಗೂ ಒಡಿಶಾದ ಐದು, ಉತ್ತರಪ್ರದೇಶದ 14 ಹಾಗೂ ಪಶ್ಚಿಮಬಂಗಾಳದ ಏಳು ಲೋಕಸಭಾ ಕ್ಷೇತ್ರಗಳಿಗೆ ಸೋಮವಾರ ಮತದಾನ ನಡೆಯಲಿದೆ. 49 ಕ್ಷೇತ್ರಗಳಲ್ಲಿ ಒಟ್ಟು 695 ಅಭ್ಯರ್ಥಿಗಳು ಕಣದಲ್ಲಿದ್ದು, ಮಹಾರಾಷ್ಟ್ರದಲ್ಲಿ ಗರಿಷ್ಠ 264 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ (ರಾಯ್ಬರೇಲಿ), ಕಿಶೋರಿ ಲಾಲ್ ಶರ್ಮಾ (ಆಮೇಠಿ), ಬಿಜೆಪಿಯ ಸ್ಮತಿ ಇರಾನಿ (ಆಮೇಠಿ), ಪಿಯೂಶ್ ಗೋಯಲ್ (ಮುಂಬೈ ಉತ್ತರ), ರಾಜನಾಥ ಸಿಂಗ್ (ಲಕ್ನೋ) ಹಾಗ ಚಿರಾಗ್ ಪಾಸ್ವಾನ್ (ಹಾಜಿಪುರ), ಐದನೇ ಹಂತದ ಚುನಾವಣೆಯಲ್ಲಿ ಕಣದಲ್ಲಿರುವ ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ಜಾರ್ಖಂಡ್ನ ಗಾಂಡೆ ಹಾಗೂ ಉತ್ತರಪ್ರದೇಶದ ಲಕ್ನೋ ಪೂರ್ವ ವಿಧಾನಸಭಾ ಕ್ಷೇತ್ರಗಳಿಗೆ ಸೋಮವಾರ ಉಪಚುನಾವಣೆ ನಡೆಯಲಿದೆ.
ಮೊದಲ ನಾಲ್ಕು ಹಂತಗಳಲ್ಲಿ ಮತದಾನದ ಪ್ರಮಾಣವು 66,95 ಶೇ. ಆಗಿತ್ತೆಂದು ಚುನಾವಣಾ ಆಯೋಗ ತಿಳಿಸಿದೆ. ಮೊದಲ ನಾಲ್ಕು ಹಂತಗಳಲ್ಲಿ 379 ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಸುಮಾರು 45.10 ಕೋಟಿ ಮಂದಿ ಹಕ್ಕು ಚಲಾಯಿಸಿದ್ದರು.