ತಮಿಳುನಾಡು ಸರ್ಕಾರದ ವಿರುದ್ಧ ಪ್ರತಿಭಟನೆ: ಸ್ವಯಂ ಛಡಿಯೇಟು ಬಾರಿಸಿಕೊಂಡ ಕೆ ಅಣ್ಣಾಮಲೈ

Update: 2024-12-27 06:24 GMT

Photo credit: indiatoday.in

ಚೆನ್ನೈ: ಅಣ್ಣಾ ವಿವಿಯಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ತಮಿಳುನಾಡು ರಾಜ್ಯ ಸರ್ಕಾರ ಅಸಮರ್ಥತೆಯಿಂದ ನಿಭಾಯಿಸಿದೆ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅವರು, ತಮಗೆ ತಾವೇ ಛಡಿಯೇಟು ಬಾರಿಸಿಕೊಂಡು ವಿನೂತನ ಶೈಲಿಯಲ್ಲಿ ಪ್ರತಿಭಟಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟಿಸಿದರೆ, ಕಾರ್ಯಕರ್ತರನ್ನು ಪೊಲೀಸರು ಕರೆದುಕೊಂಡು ಹೋಗಿ ಕಲ್ಯಾಣ ಮಂಟಪಗಳಲ್ಲಿ ಇರಿಸುತ್ತಾರೆ. ಹಾಗಾಗಿ, ತಮ್ಮ ಮನೆಯಲ್ಲೇ ಪ್ರತಿಭಟನೆ ನಡೆಸುವುದಾಗಿ ಅಣ್ಣಾಮಲೈ ಹಿಂದಿನ ದಿನ ಘೋಷಿಸಿದ್ದರು.

ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭರವಸೆ ನೀಡಿದಂತೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ತಮ್ಮ ನಿವಾಸದಲ್ಲಿ ಆರು ಬಾರಿ ತನ್ನನ್ನು ತಾನೇ ಛಡಿಯೇಟಿನಿಂದ ಹೊಡೆದುಕೊಂಡಿದ್ದಾರೆ. ದ್ರಾವಿಡ ಮುನ್ನೇತ್ರ ಕಳಗಂ ಪಕ್ಷ ರಾಜ್ಯವನ್ನು ಆಳುವಲ್ಲಿನ ಅಸಮರ್ಥತೆಗೆ ಪ್ರಾಯಶ್ಚಿತ್ತವಾಗಿ ಸ್ವಯಂ ಛಡಿಯೇಟು ಬಾರಿಸುವುದಾಗಿ ಅವರು ಹೇಳಿದ್ದರು.

ಅಣ್ಣಾಮಲೈ ಛಡಿಯೇಟು ಬಾರಿಸುವ ಸಂದರ್ಭದಲ್ಲಿ, ಬಿಜೆಪಿ ಬೆಂಬಲಿಗರು ʼನಿಮಗೆ ನಾಚಿಕೆಯಾಗುವುದಿಲ್ಲವೇ ಸ್ಟಾಲಿನ್?ʼ, "ಆರೋಪಿ ಜ್ಞಾನಶೇಖರನ್ ಅವರನ್ನು ಗಲ್ಲಿಗೇರಿಸಿ" ಮತ್ತು "#ShameOnYouStalin" ಮುಂತಾದ ಘೋಷಣೆಗಳನ್ನು ಹೊಂದಿರುವ ಫಲಕಗಳನ್ನು ಹಿಡಿದಿದ್ದರು.

ಸ್ವಯಂ ಛಡಿಯೇಟಿನ ನಂತರ, ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ʼತಮಿಳು ಸಂಸ್ಕೃತಿಯನ್ನು ಅರ್ಥಮಾಡಿಕೊಂಡ ಯಾರಿಗಾದರೂ ಈ ಪದ್ಧತಿಗಳು ನೆಲಮೂಲದ ಪದ್ಧತಿ ಎಂದು ತಿಳಿಯುತ್ತದೆʼ ಎಂದು ಹೇಳಿದರು.

"ನಮ್ಮನ್ನು ನಾವೇ ಹೊಡೆಯುವುದು, ನಮ್ಮನ್ನು ನಾವೇ ಶಿಕ್ಷಿಸಿಕೊಳ್ಳುವುದು, ಕಠಿಣ ಆಚರಣೆಗಳಿಗೆ ಒಳಪಡಿಸಿಕೊಳ್ಳುವುದು ಇತ್ಯಾದಿ ಎಲ್ಲವೂ ಈ ಸಂಸ್ಕೃತಿಯ ಭಾಗವಾಗಿದೆ. ಇದು ಯಾವುದೇ ವ್ಯಕ್ತಿಯ ವಿರುದ್ಧ ಅಥವಾ ಯಾವುದಕ್ಕೂ ವಿರುದ್ಧವಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ನಿರಂತರ ಅನ್ಯಾಯದ ವಿರುದ್ಧವಾಗಿದೆ. ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದಿರುವುದು ಕೇವಲ ಒಂದು ತಿರುವು" ಎಂದು ಅವರು ಹೇಳಿದರು.

"ನನ್ನ ಪೂರ್ವಜರಲ್ಲಿ ಹಲವರು ಈ ಹಾದಿಯಲ್ಲಿ ನಡೆದಿದ್ದಾರೆ. ನಾನು ಕೂಡ ಅದನ್ನು ಆರಿಸಿಕೊಂಡಿದ್ದೇನೆ. ಇದು ಉನ್ನತ ಶಕ್ತಿಗೆ ಶರಣಾಗುವ, ದೇವರಿಗೆ ಶರಣಾಗುವ ಪ್ರಕ್ರಿಯೆಯಾಗಿದೆ" ಎಂದು ಅವರು ಹೇಳಿದ್ದಾರೆ.

“ನಾನು ಸಾಕಷ್ಟು ಆಲೋಚಿಸಿದ ನಂತರ ಪಾದರಕ್ಷೆ ತ್ಯಜಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. (ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ತೆಗೆದುಹಾಕಲು) ಪಕ್ಷ ಮತ್ತು ಕಾರ್ಯಕರ್ತರು ಕಠಿಣವಾಗಿ ಪರಿಶ್ರಮಿಸಿದ್ದಾರೆ. ಅದರ ನಂತರ ಒಂದು ದೊಡ್ಡ ಶಕ್ತಿಗೆ ಶರಣಾಗುವುದು, ನಡೆಯುತ್ತಿರುವ ವಿಷಯಗಳನ್ನು ನೋಡಿಕೊಳ್ಳಲು ದೊಡ್ಡ ಶಕ್ತಿಗೆ ಬಿಡುವುದು ಸಹ ಮುಖ್ಯವಾಗಿದೆ ಎಂದು ನಾನು ನಂಬುತ್ತೇನೆ" ಎಂದು ಅವರು ಹೇಳಿದರು.

"2026 ರಲ್ಲಿ, ಡಿಎಂಕೆಯನ್ನು ಅಧಿಕಾರದಿಂದ ತೆಗೆದುಹಾಕುವುದು ಮತ್ತು ತಮಿಳುನಾಡಿನ ಕಳೆದುಹೋದ ವೈಭವವನ್ನು ಮರಳಿ ಪಡೆಯುವುದು ನಮ್ಮ ಗುರಿಯಾಗಿದೆ" ಎಂದು ಅವರು ಹೇಳಿದರು.

ರಾಜ್ಯದಲ್ಲಿ ಡಿಎಂಕೆ ಸರ್ಕಾರ ಉರುಳುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಅಣ್ಣಾಮಲೈ ಅವರು ಗುರುವಾರ ಪ್ರತಿಜ್ಞೆ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News