ವಾಜಪೇಯಿ ಸ್ಮರಣೆ ಕಾರ್ಯಕ್ರಮದಲ್ಲಿ 'ಈಶ್ವರ್ ಅಲ್ಲಾ ತೇರೇ ನಾಮ್' ಭಜನೆಗೆ ತಡೆ...

Update: 2024-12-27 03:32 GMT

ಪಾಟ್ನಾ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಖ್ಯಾತ ಜಾನಪದ ಗಾಯಕಿ ದೇವಿಯವರು ಮಹಾತ್ಮಾ ಗಾಂಧೀಜಿಯವರ ಅತ್ಯಂತ ಜನಪ್ರಿಯ "ಈಶ್ವರ ಅಲ್ಲಾ ತೇರೇ ನಾಮ್" ಭಜನೆಯನ್ನು ಹಾಡದಂತೆ ತಡೆದ ಘಟನೆ ವಿವಾದಕ್ಕೆ ಕಾರಣವಾಗಿದೆ. ಇಷ್ಟು ಮಾತ್ರವಲ್ಲದೇ ಬಾಪು ಸಭಾಘರ್ ಆಡಿಟೋರಿಯಂನಲ್ಲಿ ಗಾಯಕಿ ಕ್ಷಮೆ ಯಾಚಿಸುವಂತೆ ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದರು.

ಮಾಜಿ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಈ ಕಾರ್ಯಕ್ರಮವನ್ನು ದಿನಕರ ಶೋಧ ಸಂಸ್ಥಾನ ಎಂಬ ಎನ್‌ಜಿಒ ಸಹಯೋಗದಲ್ಲಿ ಆಯೋಜಿಸಿದ್ದರು. ಈ ಘಟನೆ ನಡೆಯಬಾರದಿತ್ತು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ದೇವಿ ಈ ಭಜನೆ ಆರಂಭಿಸುತ್ತಿದ್ದಂತೆಯೇ 60ಕ್ಕೂ ಹೆಚ್ಚು ಮಂದಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಲಾರಂಭಿಸಿದರು. ಇದರಿಂದ ಆಘಾತಗೊಂಡು ಬೆಚ್ಚಿಬಿದ್ದ ಗಾಯಕಿ ಆ ಬಳಿಕ ಕ್ಷಮೆ ಯಾಚಿಸಿದರು. ಅಶ್ವಿನಿ ಕುಮಾರ್ ಚೌಬೆ ಮಧ್ಯಪ್ರವೇಶಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆದರು. ಗಾಯಕಿಯ ಕ್ಷಮಾಯಾಚನೆ ಹಿನ್ನೆಲೆಯಲ್ಲಿ ಚೌಬೆ ಹಾಗೂ ಇತರ ಎಲ್ಲ ಪ್ರೇಕ್ಷಕರು ಒಕ್ಕೊರಲಿನಿಂದ ಜೈಶ್ರೀರಾಂ ಘೋಷಣೆ ಕೂಗಿದರು.

ಅಟಲ್ ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಅವರ ಕೊಡುಗೆಯನ್ನು ಸ್ಮರಿಸುವ ಸಲುವಾಗಿ "ಮೇ ಅಟಲ್ ರಹೂಂಗಾ" ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಚೌಬೆ ಅವರ ಹೊರತಾಗಿ ಡಾ.ಸಿಪಿ.ಠಾಕೂರ್, ಸಂಜಯ್ ಪಾಸ್ವಾಸ್, ಶಾನವಾಝ್ ಹುಸೇನ್ ಭಾಗವಹಿಸಿದ್ದರು. ಈ ಘಟನೆಯಲ್ಲಿ ಆದ ಅಹಿತಕರ ಘಟನೆ ಹಿಂದೆ ಆರ್ಜೆಡಿ ಕೈವಾಡವಿದೆ ಎಂದು ಬಿಜೆಪಿ ವಕ್ತಾರ ಕುಂತಲ್ ಕೃಷ್ಣ ಆಪಾದಿಸಿದ್ದಾರೆ.

ಸಮಾರಂಭದಲ್ಲಿ ಸನ್ಮಾನಕ್ಕಾಗಿ ನನ್ನನ್ನು ಆಹ್ವಾನಿಸಲಾಗಿತ್ತು. ಸಂಘಟಕರು ಒಂದು ಭಜನೆ ಹಾಡುವಂತೆ ಕೋರಿದರು ಎಂದು ದೇವಿ ಹೇಳಿದ್ದಾರೆ. ವಾಜಪೇಯಿಯವರ ಜನ್ಮದಿನವನ್ನು ಆಚರಿಸುವ ಸಂದರ್ಭದಲ್ಲಿ ಮಹಾತ್ಮಾಗಾಂಧೀಜಿಯವರ ಈ ಭಜನೆ ಸೂಕ್ತ ಎಂದು ಭಾವಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News