ಮಾಧ್ಯಮಗಳಿಗೆ ಹೆದರುವ ಪ್ರಧಾನಿ ನಾನಲ್ಲ ಎಂದಿದ್ದ ಮನಮೋಹನ್‌ಸಿಂಗ್

Update: 2024-12-27 17:03 GMT

ಹೊಸದಿಲ್ಲಿ : ನಿಖರವಾಗಿ ಒಂದು ದಶಕದ ಹಿಂದೆ, ಮನಮೋಹನ್‌ಸಿಂಗ್  ಅವರು ಪ್ರಧಾನಿ ಹುದ್ದೆಯಲ್ಲಿದ್ದು 2014ರ, ಜನವರಿ 3ರಂದು ನಡೆಸಿದ ಕಟ್ಟಕಡೆಯ ಪತ್ರಿಕಾಗೋಷ್ಠಿಯಲ್ಲಿ ನೂರಕ್ಕೂ ಅಧಿಕ ಪತ್ರಕರ್ತರಿಂದ ಪ್ರಶ್ನೆಗಳ ಸುರಿಮಳೆಯನ್ನೇ ಎದುರಿಸಬೇಕಾಯಿತು.

ಈ ಪತ್ರಿಕಾಗೋಷ್ಠಿಯು ಪ್ರಸಕ್ತ ರಾಜಕೀಯ ದೃಶ್ಯಾವಳಿಗಿಂತ ತೀರಾ ವ್ಯತಿರಿಕ್ತವಾದುದಾಗಿತ್ತು. ಕಳೆದ ಹತ್ತು ವರ್ಷಗಳಲ್ಲಿ ಹಾಲಿ ಪ್ರಧಾನಿ ನರೇಂದ್ರ ಮೋದಿಯವರು ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ನಡೆಸಿರಲಿಲ್ಲವೆಂಬುದು ಇಲ್ಲಿ ಗಮನಾರ್ಹವಾಗಿದೆ.

ಆ ಪತ್ರಿಕಾಗೋಷ್ಠಿಯಲ್ಲಿ ಮನಮೋಹನ್‌ಸಿಂಗ್ ಅವರು, ಲೋಕಸಭಾ ಚುನಾವಣೆಗೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾದ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ತನ್ನ ಆಡಳಿತಾವಧಿಯಲ್ಲಿ ಕೈಗೊಳ್ಳಲಾದ ಯೋಜನೆಗಳು, ಸುಧಾರಣೆಗಳನ್ನು ಅವರು ಬಲವಾದಗಿ ಸಮರ್ಥಿಸಿದರು. ತಾನೋರ್ವ ದುರ್ಬಲ ಪ್ರಧಾನಿ ಮತ್ತು ಮಾತನಾಡಲು ಹಿಂದೇಟು ಹಾಕುವವ ಎಂಬ ಟೀಕೆಗಳನ್ನು ಅವರು ತಳ್ಳಿಹಾಕಿದರು.

‘‘ಮಾಧ್ಯಮಗಳಿಗೆ ಬೆದರುವ ಪ್ರಧಾನಿ ನಾನಲ್ಲ. ಸಮಕಾಲೀನ ಮಾಧ್ಯಮಗಳು ಹಾಗೂ ಸಂಸತ್‌ನಲ್ಲಿರುವ ಪ್ರತಿಪಕ್ಷಗಳಿಗಿಂತ ಇತಿಹಾಸವು ನನ್ನ ಬಗ್ಗೆ ಹೆಚ್ಚು ದಯಾಳುವಾಗಿರುವುದು ಎಂದು ನಾನು ನಂಬುತ್ತೇನೆ’’ ಎಂದು ಸಿಂಗ್ ಹೇಳಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ಸಿಂಗ್ ಅವರು 62 ಪೂರ್ವರಚಿತವಲ್ಲದ ಪ್ರಶ್ನೆಗಳಿಗೆ ಉತ್ತರಿಸಿದರು. ಆ ಮೂಲಕ ಭಾರತೀಯ ರಾಜಕಾರಣದಲ್ಲಿ ಅಪರೂಪವಾಗಿ ಕಾಣಸಿಗುವಂತಹ ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ಪ್ರದರ್ಶಿಸಿದರು.ಭ್ರಷ್ಟಾಚಾರ ಕುರಿತಾಗಿ ನಿಷ್ಕ್ರಿಯತೆ ಪ್ರದರ್ಶಿಸಿದ್ದೇನೆಂಬ ಆರೋಪಗಳಿಗೆ ಉತ್ತರಿಸಿದ ಅವರು, ಹಲವಾರು ಸವಾಲುಗಳ ಹೊರತಾಗಿಯೂ ಲಂಚಕೋರತನದ ವಿರುದ್ಧ ಕಠಿಣ ಕ್ರಮಗಳನ್ನು ತನ್ನ ಸರಕಾರ ಕೈಗೊಂಡಿತ್ತು ಎಂದು ಉತ್ತರಿಸಿದ್ದರು.

ಸಾರ್ವಜನಿಕ ಸೇವೆಯಲ್ಲಿ ತನ್ನ ಬದ್ಧತೆಯನ್ನು ಪುನರುಚ್ಚರಿಸಿದ್ದ ಅವರು, ನಾನು 9 ವರ್ಷಗಳ ಹಿಂದೆ ಹೇಗಿದ್ದೇನೋ, ಈಗಲೂ ಹಾಗೆಯೇ ಇದ್ದೇನೆ. ನನ್ನ ಸಾಮರ್ಥ್ಯವನ್ನು ಮೀರಿ ದೇಶಕ್ಕೆ ಸೇವೆ ಸಲ್ಲಿಸಲು ಯತ್ನಿಸಿದ್ದೇನೆ ಎಂದವರು ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News