ಸರಕಾರಿ ಗೌರವಗಳೊಂದಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂತ್ಯಕ್ರಿಯೆ

Update: 2024-12-28 15:16 GMT

Screengrab:X/@ani

ಹೊಸದಿಲ್ಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಸಂಸ್ಕಾರವು ಶನಿವಾರ ಇಲ್ಲಿ ಭಾರತ ಮತ್ತು ವಿದೇಶಗಳ ಗಣ್ಯರ ಉಪಸ್ಥಿತಿಯಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು.

ನಿಗಮ ಬೋಧ್ ಘಾಟ್‌ನಲ್ಲಿ ಧಾರ್ಮಿಕ ಸ್ತೋತ್ರಗಳ ಪಠಣದ ನಡುವೆ ಸಿಂಗ್ ಅವರ ಹಿರಿಯ ಪುತ್ರಿ ಉಪಿಂದರ್ ಸಿಂಗ್ ಅವರು ತಂದೆಯ ಚಿತೆಗೆ ಅಗ್ನಿಸ್ಪರ್ಶವನ್ನು ಮಾಡಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು,ಉಪರಾಷ್ಟ್ರಪತಿ ಜಗದೀಪ ಧನ್ಕರ್,ಪ್ರಧಾನಿ ನರೇಂದ್ರ ಮೋದಿ ಹಾಗೂ ಮಲ್ಲಿಕಾರ್ಜುನ ಖರ್ಗೆ,ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹಿರಿಯ ಕಾಂಗ್ರೆಸಿಗರ ಉಪಸ್ಥಿತಿಯಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸಲಾಯಿತು.

ಸಿಂಗ್ ಅವರಿಗೆ ಅಂತಿಮ ನಮನಗಳನ್ನು ಸಲ್ಲಿಸಿದ ವಿದೇಶಿ ಗಣ್ಯರಲ್ಲಿ ಭೂತಾನ ದೊರೆ ಜಿಗ್ಮೆ ಖೇಸರ್ ನಾಮ್‌ಗ್ಯೆಲ್ ವಾಂಗ್‌ಚುಕ್ ಮತ್ತು ಮಾರಿಷಿಯಸ್ ವಿದೇಶಾಂಗ ಸಚಿವ ಧನಂಜಯ ರಾಮಫುಲ್ ಸೇರಿದ್ದರು.

ಸಿಂಗ್(92) ಡಿ.26ರಂದು ರಾತ್ರಿ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ರಕ್ಷಣಾ ಸಚಿವ ರಾಜನಾಥ ಸಿಂಗ್,ಗೃಹಸಚಿವ ಅಮಿತ್ ಶಾ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರೂ ಮಾಜಿ ಪ್ರಧಾನಿಗೆ ಪುಷ್ಪಾಂಜಲಿಗಳನ್ನು ಸಲ್ಲಿಸಿದರು.

ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಅನಿಲ ಚೌಹಾಣ ಮತ್ತು ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥರೂ ಅಂತಿಮ ನಮನಗಳನ್ನು ಸಲ್ಲಿಸಿದರು.

ಕರ್ನಾಟಕದ ಸಿದ್ದರಾಮಯ್ಯ, ತೆಲಂಗಾಣದ ರೇವಂತ ರೆಡ್ಡಿ, ಹಿಮಾಚಲ ಪ್ರದೇಶದ ಸುಖವಿಂದರ್ ಸಿಂಗ್ ಸುಖು ಮತ್ತು ದಿಲ್ಲಿಯ ಆತಿಷಿ ಸೇರಿದಂತೆ ಹಲವಾರು ಮುಖ್ಯಮಂತ್ರಿಗಳು ಹಾಗೂ ದಿಲ್ಲಿಯ ಲೆಫ್ಟಿನಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರೂ ಮಾಜಿ ಪ್ರಧಾನಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ಮಾಜಿ ಮುಖ್ಯಮಂತ್ರಿಗಳಾದ ಭೂಪಿಂದರ್ ಸಿಂಗ್ ಹೂಡಾ,ಅಶೋಕ್ ಗೆಹ್ಲೋಟ್ ಮತ್ತು ಭೂಪೇಶ್ ಬಘೇಲ್,‌ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ,ಪ್ರಿಯಾಂಕಾ ಗಾಂಧಿ ವಾದ್ರಾ,ಜೈರಾಮ ರಮೇಶ ಮತ್ತು ರಣದೀಪ ಸುರ್ಜೆವಾಲಾ ಹಾಗೂ ಹಲವಾರು ಮಾಜಿ ಕೇಂದ್ರ ಸಚಿವರೂ ಉಪಸ್ಥಿತರಿದ್ದರು.

ಚಿತಗೆ ಅಗ್ನಿಸ್ಪರ್ಶಕ್ಕೆ ಮುನ್ನ ಭದ್ರತಾ ಪಡೆಗಳು ಮಾಜಿ ಪ್ರಧಾನಿಗೆ 21 ಕುಶಾಲು ತೋಫುಗಳ ಗೌರವ ವಂದನೆಯನ್ನು ಸಲ್ಲಿಸಿದವು.

ಅಂತಿಮ ವಿಧಿಗಳ ಮುನ್ನ ಸಿಖ್ ಧಾರ್ಮಿಕ ಗುರುಗಳು ಮತ್ತು ಸಿಂಗ್ ಕುಟುಂಬ ಸದಸ್ಯರು ಗುರ್ಬಾನಿಯ ಶ್ಲೋಕಗಳನ್ನು ಪಠಿಸಿದರು.

ಬೆಳಿಗ್ಗೆ ಸಿಂಗ್ ಅವರ ಪಾರ್ಥಿವ ಶರೀರವನ್ನು ದಿಲ್ಲಿಯಲ್ಲಿಯ ಅವರ ನಿವಾಸದಿಂದ ವಾಹನದಲ್ಲಿ ಕಾಂಗ್ರೆಸ್ ಕೇಂದ್ರ ಕಚೇರಿಗೆ ತರಲಾಗಿತ್ತು. ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ತಮ್ಮ ಅಂತಿಮ ಗೌರವಗಳನ್ನು ಸಲ್ಲಿಸಿದ ಬಳಿಕ ಕಾಂಗ್ರೆಸ್ ಕೇಂದ್ರ ಕಚೇರಿಯಿಂದ ಮಾಜಿ ಪ್ರಧಾನಿಯ ಅಂತಿಮ ಯಾತ್ರೆ ಆರಂಭಗೊಂಡಿತ್ತು. ಸಿಂಗ್ ಅವರ ಪಾರ್ಥಿವ ಶರೀರವನ್ನು ಪುಷ್ಪಾಲಂಕೃತ ವಾಹನದಲ್ಲಿ ಇರಿಸಲಾಗಿತ್ತು. ಭದ್ರತಾ ಸಿಬ್ಬಂದಿಗಳು,ಹಲವಾರು ಕಾಂಗ್ರೆಸ್ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಅಂತಿಮ ಯಾತ್ರೆಯಲ್ಲಿ ನಡೆದುಕೊಂಡು ಸಾಗಿದ್ದು,ಪೂರ್ವಾಹ್ನ 11.30ರ ಸುಮಾರಿಗೆ ನಿಗಮಬೋಧ್ ಘಾಟ್ ತಲುಪಿದ್ದರು. ಮೆರವಣಿಗೆಯುದ್ದಕ್ಕೂ ‘ಮನಮೋಹನ ಸಿಂಗ್ ಅಮರ ರಹೇ’,‘ಜಬ್ ತಕ್ ಸೂರಜ್ ಚಾಂದ್ ರಹೇಗಾ,ತಬ್ ತಕ್ ತೇರಾ ನಾಮ್ ರಹೇಗಾ’ ಘೋಷಣೆಗಳು ಮೊಳಗುತ್ತಿದ್ದವು. ಸಿಂಗ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕು ಎಂಬ ಬೇಡಿಕೆಗಳೂ ಮೆರವಣಿಗೆಯಲ್ಲಿ ಅನುರಣಿಸಿದವು.

ತ್ರಿವರ್ಣ ಧ್ವಜವನ್ನು ಹೊದಿಸಲಾಗಿದ್ದ ಪುಷ್ಪಾಲಂಕೃತ ಶವಪೆಟ್ಟಿಗೆಯನ್ನು ಘಾಟ್‌ನಲ್ಲಿ ಎತ್ತರದ ವೇದಿಕೆಯಲ್ಲಿ ಇರಿಸಲಾಗಿದ್ದು, ನಾಯಕರು ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪಾಂಜಲಿಗಳನ್ನು ಸಲ್ಲಿಸಿದರು.

ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕರು ಎಐಸಿಸಿ ಕೇಂದ್ರ ಕಚೇರಿಯಲ್ಲಿ ತಮ್ಮ ಅಗಲಿದ ನಾಯಕನಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸಿದರು. ಕಾರ್ಯಕರ್ತರು ತಮ್ಮ ನಾಯಕನ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲು ಒಂದು ಗಂಟೆ ಕಾಲ ಪಾರ್ಥಿವ ಶರೀರವನ್ನು ಅಲ್ಲಿರಿಸಿಲಾಗಿತ್ತು.

ಕಾಂಗ್ರೆಸ್ ಕಚೇರಿಯಲ್ಲಿ ಮತ್ತು ಬಳಿಕ ನಿಗಮಬೋಧ್ ಘಾಟ್‌ನಲ್ಲಿ ಖರ್ಗೆ,ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮತ್ತಿತರರು ಮಾಜಿ ಪ್ರಧಾನಿಗೆ ಪುಷ್ಪಾಂಜಲಿಗಳನ್ನು ಸಲ್ಲಿಸಿದರು.

ಸಿಂಗ್ ಪತ್ನಿ ಗುರುಶರಣ ಕೌರ್ ಮತ್ತು ಅವರ ಓರ್ವ ಪುತ್ರಿ ಕೂಡ ಪಾರ್ಥಿವ ಶರೀರಕ್ಕೆ ಪುಷ್ಪಾಂಜಲಿಗಳನ್ನು ಸಲ್ಲಿಸಿದರು. ಸಿಂಗ್ ಅವರ ಮೂವರು ಪುತ್ರಿಯರಾದ ಉಪಿಂದರ್ ಸಿಂಗ್,ದಮನ ಕೌರ್ ಮತ್ತು ಅಮೃತ ಕೌರ್ ಹಾಗೂ ಬಂಧುಗಳು ಉಪಸ್ಥಿತರಿದ್ದರು.

ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರೂ ಪಾರ್ಥಿವ ಶರೀರವಿದ್ದ ವಾಹನದ ಮುಂದಿದ್ದ ಸೇನೆಯ ಟ್ರಕ್‌ನಲ್ಲಿ ಸಿಂಗ್ ಅವರ ಬಂಧುಗಳೊಂದಿಗೆ ಆಸೀನರಾಗಿದ್ದರು. ಬಳಿಕ ಚಿತೆಯವರೆಗೆ ಪಾರ್ಥಿವ ಶರೀರಕ್ಕೆ ಹೆಗಲನ್ನೂ ನೀಡಿದ್ದರು.

ಸ್ಮಾರಕ ನಿರ್ಮಾಣ ವಿವಾದ:

ಇದಕ್ಕೂ ಮುನ್ನ ಬಳಿಕ ಸ್ಮಾರಕವನ್ನು ನಿರ್ಮಿಸಬಹುದಾದ ಸ್ಥಳದಲ್ಲಿಯೇ ಸಿಂಗ್ ಅಂತ್ಯಸಂಸ್ಕಾರ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸುವುದರೊಂದಿಗೆ ವಿವಾದವು ಭುಗಿಲೆದ್ದಿತ್ತು. ಬಿಜೆಪಿ ಸರಕಾರವು ಸಿಂಗ್ ಅವರ ಅಂತ್ಯಸಂಸ್ಕಾರ ಮತ್ತು ಸ್ಮಾರಕ ನಿರ್ಮಾಣಕ್ಕೆ ಸ್ಥಳವನ್ನು ನಿಗದಿಗೊಳಿಸದೆ ದೇಶದ ಮೊದಲ ಸಿಖ್ ಪ್ರಧಾನಿಯನ್ನು ಉದ್ದೇಶಪೂರ್ವಕವಾಗಿ ಅವಮಾನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.’

ಆದರೆ ಕೇಂದ್ರ ಸರಕಾರವು ಸಿಂಗ್ ಅವರಿಗೆ ಸ್ಮಾರಕವನ್ನು ನಿರ್ಮಿಸಲು ಈಗಾಗಲೇ ನಿರ್ಧರಿಸಲಾಗಿದೆ ಮತ್ತು ಅದಕ್ಕಾಗಿ ಸೂಕ್ತ ಸ್ಥಳವನ್ನು ಶೀಘ್ರವೇ ಕಂಡುಕೊಳ್ಳಲಾಗುವುದು ಎಂದು ಹೇಳಿದೆ.

ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿ ಎಂದೇ ಪರಿಗಣಿಸಲಾಗಿರುವ ಮನಮೋಹನ ಸಿಂಗ್ 2004ರಿಂದ 2014ರ ನಡುವೆ ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.

ಮಾಜಿ ಪ್ರಧಾನಿಗೆ ಗೌರವದ ದ್ಯೋತಕವಾಗಿ ದೇಶಾದ್ಯಂತ ಏಳು ದಿನಗಳ ಕಾಲ ಶೋಕವನ್ನು ಆಚರಿಸಲಾಗುತ್ತಿದ್ದು,ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು ಎಂದು ಕೇಂದ್ರ ಗೃಹಸಚಿವಾಲಯವು ಪ್ರಕಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News