PTI Fact Check: ದಿಲ್ಲಿ ಏಮ್ಸ್‌ನಿಂದ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ರ ಕೊನೆಯ ಚಿತ್ರವೆಂದು ತೋರಿಸಲಾದ ಫೋಟೊ ನಿಜವಲ್ಲ

Update: 2024-12-28 20:55 IST
Editor : Ismail | Byline : PTI
Manmohan Singh

ಡಾ.ಮನಮೋಹನ ಸಿಂಗ್ | PC : PTI 

  • whatsapp icon

ಹೊಸದಿಲ್ಲಿ: ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರು ಡಿ.26ರಂದು ನಿಧನರಾದ ಬಳಿಕ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಚಿತ್ರವೊಂದನ್ನು ಹಂಚಿಕೊಂಡು,ಇದು ದಿಲ್ಲಿಯ ಏಮ್ಸ್‌ನಲ್ಲಿ ಮರಣಶಯ್ಯೆಯಲ್ಲಿದ್ದ ಸಿಂಗ್ ಅವರ ಕೊನೆಯ ಚಿತ್ರ ಎಂದು ಹೇಳಿಕೊಂಡಿದ್ದರು. ಪಿಟಿಐ ಫ್ಯಾಕ್ಟ್ ಚೆಕ್ ಡೆಸ್ಕ್ ತನ್ನ ತನಿಖೆಯಲ್ಲಿ ಈ ಫೋಟೊ ಜ್ವರದಿಂದ ಬಳಲುತ್ತಿದ್ದ ಸಿಂಗ್ ಅವರು ಅಕ್ಟೋಬರ್ 2021ರಲ್ಲಿ ಏಮ್ಸ್‌ಗೆ ದಾಖಲಾಗಿದ್ದಾಗ ತೆಗೆದ ಚಿತ್ರವಾಗಿದೆ ಎನ್ನುವುದನ್ನು ಬಯಲಿಗೆಳೆದಿದೆ. ಅಂದರೆ ಮೂರು ವರ್ಷಗಳ ಹಿಂದಿನ ಚಿತ್ರವನ್ನು ಸಿಂಗ್ ಅವರ ಕೊನೆಯ ಫೋಟೊ ಎಂಬ ಸುಳ್ಳು ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿತ್ತು.

 

 (PC : PTI)

‘ರಾಜು ವರ್ಮಾ’ ಹೆಸರಿನ ಎಕ್ಸ್ ಬಳಕೆದಾರನೋರ್ವ ಡಿ.26ರಂದು ಫೋಟೊವೊಂದನ್ನು ಹಂಚಿಕೊಂಡು,ಇದು ಡಿ.26ರಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನಿಧನಕ್ಕೆ ಮೊದಲಿನ ಕೊನೆಯ ಚಿತ್ರವಾಗಿದೆ ಎಂದು ಹೇಳಿದ್ದ. ‘ಮನಮೋಹನ್‌ಜಿ ಅವರ ಕೊನೆಯ ಚಿತ್ರ. ಮುಳುಗುತ್ತಿದ್ದ ದೇಶದ ಆರ್ಥಿಕ ಸ್ಥಿತಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದ ಮಹಾನ್ ವ್ಯಕ್ತಿಗೆ ನಮನಗಳು’ ಎಂಬ ಅಡಿಬರಹವಮನ್ನು ವರ್ಮಾ ಚಿತ್ರಕ್ಕೆ ನೀಡಿದ್ದ. ಈ ಚಿತ್ರ ವೈರಲ್ ಆಗಿತ್ತು.

 (PC : PTI)

ಪಿಟಿಐ ಡೆಸ್ಕ್ ಗೂಗಲ್ ಲೆನ್ಸ್ ಮೂಲಕ ಪರಿಶೀಲನೆ ನಡೆಸಿ ‘ಎನ್‌ಬಿಟಿ ದಿಲ್ಲಿ’ ಅಕ್ಟೋಬರ್ 2021ರಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಈ ಚಿತ್ರದ ಯಾವುದೇ ಹಸ್ತಕ್ಷೇಪ ನಡೆಸಿರದ ಆವೃತ್ತಿಯನ್ನು ಪತ್ತೆ ಹಚ್ಚಿದೆ. ಆಗಿನ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ವೈದ್ಯರೋರ್ವರ ಜೊತೆ ಸಿಂಗ್ ಪಕ್ಕದಲ್ಲಿ ನಿಂತುಕೊಂಡಿದ್ದನ್ನು ಮೂಲಚಿತ್ರವು ತೋರಿಸಿತ್ತು.

 (PC : PTI)

‘ಏಮ್ಸ್‌ನಲ್ಲಿ ದಾಖಲಾಗಿರುವ ಮಾಜಿ ಪ್ರಧಾನಿ ಸಿಂಗ್ ಅವರನ್ನು ಭೇಟಿಯಾಗಲು ಮಾಂಡವೀಯ ಆಗಮಿಸಿದ್ದರು ’ಎಂಬ ಅಡಿಬರಹವನ್ನು ಈ ಚಿತ್ರವು ಹೊಂದಿತ್ತು. ಮಾಂಡವೀಯ ಅವರ ಭೇಟಿಯ 2021,ಅ.14ರ ವರದಿಯನ್ನು ಪಿಟಿಐ ಪ್ರಕಟಿಸಿತ್ತು. ಇದೇ ವಿಷಯದಲ್ಲಿ ‘ದಿ ಟ್ರಿಬ್ಯೂನ್’ ಮೂರು ವರ್ಷಗಳ ಹಿಂದೆ ಯೂಟ್ಯೂಬ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿತ್ತು. ‘ದೈನಿಕ ಭಾಸ್ಕರ್’ ಈ ಸುದ್ದಿಯನ್ನು ಅ.16,2021ರಂದು ಪ್ರಕಟಿಸಿತ್ತು ಎನ್ನುವುದೂ ಪಿಟಿಐ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ವರದಿಯು ಆಗ ಸಿಂಗ್ ಅವರನ್ನು ಭೇಟಿಯಾಗಲು ಏಮ್ಸ್‌ಗೆ ಮಾಂಡವೀಯ ಆಗಮನಕ್ಕೆ ಸಂಬಂಧಿಸಿದಂತೆ ಹುಟ್ಟಿಕೊಂಡಿದ್ದ ವಿವಾದಕ್ಕೆ ಸಂಬಂಧಿಸಿತ್ತು. ತನ್ನ ತಂದೆ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದ ಚಿತ್ರವನ್ನು ಸಾರ್ವಜನಿಕಗೊಳಿಸಿದ್ದಕ್ಕಾಗಿ ಸಿಂಗ್ ಪುತ್ರಿ ದಮನ ಸಿಂಗ್ ಕ್ರೋಧ ವ್ಯಕ್ತಪಡಿಸಿದ್ದರು.

 (PC : PTI)

ತನ್ನ ತನಿಖೆಯಲ್ಲಿ ಪಿಟಿಐ ಫ್ಯಾಕ್ಟ್ ಚೆಕ್ ಡೆಸ್ಕ್,ಸಿಂಗ್ ಅವರ ನಿಧನದ ಬಳಿಕ ಅವರ ಕೊನೆಯ ಚಿತ್ರ ಎಂಬ ಅಡಿಬರಹದೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲಾಗಿದ್ದ ಫೋಟೊ ನಿಜಕ್ಕೂ ಅಕ್ಟೋಬರ್ 2021ರಲ್ಲಿ ಜ್ವರದಿಂದ ಬಳಲುತ್ತಿದ್ದ ಅವರು ಏಮ್ಸ್‌ಗೆ ದಾಖಲಾಗಿದ್ದಾಗ ತೆಗೆದಿದ್ದ ಚಿತ್ರವಾಗಿದೆ ಎಂಬ ಅಂತಿಮ ತೀರ್ಮಾನಕ್ಕೆ ಬಂದಿದೆ.

 ಈ ಲೇಖನವನ್ನು ಮೊದಲು ptinews.com ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್‌ʼನ ಭಾಗವಾಗಿ ವಾರ್ತಾ ಭಾರತಿ ಅನುವಾದಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - PTI

contributor

Similar News