ಪೆರಿಯ ಜೋಡಿ ಕೊಲೆ ಪ್ರಕರಣ | ಮಾಜಿ ಸಿಪಿಎಂ ಶಾಸಕ ಸೇರಿದಂತೆ 14 ಜನರನ್ನು ತಪ್ಪಿತಸ್ಥರೆಂದು ಘೋಷಿಸಿದ ಸಿಬಿಐ ಕೋರ್ಟ್
ಕೊಚ್ಚಿ: ಐದು ವರ್ಷಗಳ ಹಿಂದೆ,2019,ಫೆ.17ರಂದು ಕಾಸರಗೋಡು ಜಿಲ್ಲೆಯ ಪೆರಿಯದಲ್ಲಿ ನಡೆದಿದ್ದ ಇಬ್ಬರು ಯುವಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ(19) ಮತ್ತು ಶರತ್ ಲಾಲ್ ಪಿ.ಕೆ (24) ಕೊಲೆ ಪ್ರಕರಣದಲ್ಲಿ ಮಾಜಿ ಸಿಪಿಎಂ ಶಾಸಕ ಕೆ.ವಿ.ಕುಂಞಿರಾಮನ್ ಸೇರಿದಂತೆ 14 ಜನರನ್ನು ತಪ್ಪಿತಸ್ಥರು ಎಂದು ಇಲ್ಲಿಯ ಸಿಬಿಐ ನ್ಯಾಯಾಲಯವು ಶನಿವಾರ ಘೋಷಿಸಿದೆ.
ಒಟ್ಟು 24 ಆರೋಪಿಗಳ ಪೈಕಿ ಮೊದಲ ಎಂಟು ಜನರ ವಿರುದ್ಧದ ಕೊಲೆ ಮತ್ತು ಪಿತೂರಿ ಆರೋಪಗಳು ಸಾಬೀತಾಗಿವೆ ಎಂದು ಪ್ರಕಟಿಸಿರುವ ನ್ಯಾಯಾಲಯವು ಆರು ಆರೋಪಿಗಳ ವಿರುದ್ಧದ ಪಿತೂರಿ,ಸಾಕ್ಷ್ಯನಾಶ ಮತ್ತು ಕೊಲೆಗೆ ನೆರವು ಒದಗಿಸಿದ್ದ ಆರೋಪಗಳನ್ನು ಎತ್ತಿ ಹಿಡಿದಿದೆ. ಪ್ರಕರಣದಲ್ಲಿಯ ಇತರ 10 ಆರೋಪಿಗಳನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ.
ನ್ಯಾಯಾಲಯವು ಜ.3ರಂದು ಶಿಕ್ಷೆಯನ್ನು ಪ್ರಕಟಿಸಲಿದೆ.
ನ್ಯಾಯಾಲಯವು ತಪ್ಪಿತಸ್ಥರು ಎಂದು ಪ್ರಕಟಿಸಿರುವವರಲ್ಲಿ ಕುಂಞಿರಾಮನ್ ಜೊತೆ ಕಾಂಞಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂದನ್,ಪೆರಿಯ ಸಿಪಿಎಂ ಸ್ಥಳೀಯ ಸಮಿತಿಯ ಮಾಜಿ ಸದಸ್ಯ ಎ.ಪೀತಾಂಬರನ್ ಮತ್ತು ಮಾಜಿ ಪಕ್ಕಂ ಸ್ಥಳೀಯ ಕಾರ್ಯದರ್ಶಿ ರಾಘವನ್ ವೇಲುಥೋಲಿ ಅವರೂ ಸೇರಿದ್ದಾರೆ.
ಪ್ರಾಸಿಕ್ಯೂಷನ್ ಪ್ರಕಾರ ಪ್ರದೇಶದಲ್ಲಿ ಸಿಪಿಎಂ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ರಾಜಕೀಯ ಪ್ರೇರಿತ ದಾಳಿಗಳು ಮತ್ತು ಪ್ರತಿದಾಳಿಗಳ ಬಳಿಕ ಈ ಜೋಡಿ ಕೊಲೆಗಳು ನಡೆದಿದ್ದವು.
ಕೇರಳ ಉಚ್ಚ ನ್ಯಾಯಾಲಯದ ಆದೇಶದಂತೆ ಸಿಬಿಐ 2019,ಅ.23ರಂದು ಕೇರಳ ಪೋಲಿಸರಿಂದ ತನಿಖೆಯನ್ನು ಹಸ್ತಾಂತರಿಸಿಕೊಂಡಿತ್ತು.