ಕಮೆಂಟರಿ ವೇಳೆ ಜೋಫ್ರಾ ಆರ್ಚರ್ ಅವರನ್ನು ʼಕಪ್ಪು ಟ್ಯಾಕ್ಸಿʼಗೆ ಹೋಲಿಸಿದ ಹರ್ಭಜನ್ ಸಿಂಗ್

ಜೋಫ್ರಾ ಆರ್ಚರ್ / ಹರ್ಭಜನ್ ಸಿಂಗ್ (Photo credit: PTI)
ಮುಂಬೈ: ಭಾರತದ ಲೆಜೆಂಡರಿ ಸ್ಪಿನ್ನರ್ ಹರ್ಭಜನ್ ಸಿಂಗ್ ರವಿವಾರ ಇಂಗ್ಲೆಂಡ್ ನ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರನ್ನು 'ಕಪ್ಪು ಟ್ಯಾಕ್ಸಿ' ಗೆ ಹೋಲಿಸಿದ ನಂತರ ಜನಾಂಗೀಯ ನಿಂದನೆ ವಿವಾದಕ್ಕೆ ನಾಂದಿ ಹಾಡಿದ್ದಾರೆ. ರಾಜಸ್ಥಾನ ರಾಯಲ್ಸ್ (ಆರ್‌ಆರ್) ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ನಡುವಿನ ಐಪಿಎಲ್ 2025 ಪಂದ್ಯದ ಕಮೆಂಟರಿ ವೇಳೆ ಅವರು ಈ ಹೇಳಿಕೆ ನೀಡಿದ್ದರು.
ಮೊದಲ ಇನ್ನಿಂಗ್ಸ್ ನ 18 ನೇ ಓವರ್‌ನಲ್ಲಿ, ಆರ್ಚರ್ ಎಸ್‌ಆರ್‌ಹೆಚ್ ಬ್ಯಾಟರ್ ಗಳಾದ ಇಶಾನ್ ಕಿಶನ್ ಮತ್ತು ಹೆನ್ರಿಕ್ ಕ್ಲಾಸೆನ್ ಅವರಿಗೆ ಬೌಲಿಂಗ್ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ದಕ್ಷಿಣ ಆಫ್ರಿಕಾದ ಆಟಗಾರ ಕ್ಲಾಸೆನ್, ಆರ್ಚರ್ ವಿರುದ್ಧ ಎರಡನೇ ಮತ್ತು ಮೂರನೇ ಎಸೆತದಲ್ಲಿ ಸತತ ಬೌಂಡರಿಗಳನ್ನು ಬಾರಿಸಿದ ನಂತರ ಹರ್ಭಜನ್ ಅವರು ಕಮೆಂಟರಿ ವೇಳೆ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.
"ಲಂಡನ್ ಮೆ ಕಾಲಿ ಟ್ಯಾಕ್ಸಿ ಕಾ ಮೀಟರ್ ತೇಝ್ ಭಾಗ್ತಾ ಹೈ, ಔರ್ ಯಹ ಪೆ ಆರ್ಚರ್ ಸಾಹಬ್ ಕಾ ಮೀಟರ್ ಭಿ ತೇಝ್ ಭಾಗಾ ಹೈ (ಲಂಡನ್‌ನ ಕಪ್ಪು ಟ್ಯಾಕ್ಸಿಗಳ ಮೀಟರ್‌ನಂತೆ, ಆರ್ಚರ್ ನ ಮೀಟರ್ ಕೂಡ ಹೆಚ್ಚಾಗಿದೆ)" ಎಂದು ಹರ್ಭಜನ್ ವ್ಯಂಗ್ಯವಾಡಿದ್ದರು.
ನೇರ ಪ್ರಸಾರದ ವೇಳೆ ನೀಡಿದ್ದ ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹರ್ಭಜನ್ ಸಿಂಗ್ ಅವರನ್ನು ಐಪಿಎಲ್ 2025 ಕಮೆಂಟರಿ ಪ್ಯಾನೆಲ್ ನಿಂದ ತಕ್ಷಣವೇ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.