ಮದುವೆಯು ಪತಿಗೆ ತನ್ನ ಪತ್ನಿಯ ಮೇಲೆ ಒಡೆತನವನ್ನು ನೀಡುವುದಿಲ್ಲ: ಅಲಹಾಬಾದ್ ಹೈಕೋರ್ಟ್

ಸಾಂದರ್ಭಿಕ ಚಿತ್ರ (PTI)
ಪ್ರಯಾಗರಾಜ್: ತನ್ನ ಪತ್ನಿಯೊಂದಿಗಿನ ಆಪ್ತಕ್ಷಣಗಳ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ಆರೋಪವನ್ನು ಎದುರಿಸುತ್ತಿರುವ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಅಲಹಾಬಾದ್ ಉಚ್ಚ ನ್ಯಾಯಾಲಯವು ನಿರಾಕರಿಸಿದೆ. ಮದುವೆಯು ಪತಿಗೆ ತನ್ನ ಪತ್ನಿಯ ಮೇಲೆ ಒಡೆತನ ಅಥವಾ ನಿಯಂತ್ರಣವನ್ನು ನೀಡುವುದಿಲ್ಲ,ಅವಳ ಸ್ವಾಯತ್ತತೆ ಮತ್ತು ಖಾಸಗಿತನದ ಹಕ್ಕನ್ನು ದುರ್ಬಲಗೊಳಿಸುವುದಿಲ್ಲ ಎಂದು ಅದು ಹೇಳಿದೆ.
ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾ. ವಿನೋದ್ ಕುಮಾರ್ ಅವರು, ‘ಆಪ್ತಕ್ಷಣಗಳ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ಅರ್ಜಿದಾರರು(ಪತಿ) ವೈವಾಹಿಕ ಸಂಬಂಧದ ಗಂಭೀರ ಉಲ್ಲಂಘನೆಯನ್ನು ಎಸಗಿದ್ದಾರೆ. ಪತಿಯು ತನ್ನ ಪತ್ನಿ ತನ್ನಲ್ಲಿ ಇಟ್ಟಿರುವ ನಂಬಿಕೆ,ವಿಶ್ವಾಸ ಮತ್ತು ಭರವಸೆಯನ್ನು ಗೌರವಿಸಬೇಕು,ವಿಶೇಷವಾಗಿ ಅವರ ಆತ್ಮೀಯ ಕ್ಷಣಗಳ ಸಂದರ್ಭದಲ್ಲಿ. ಅಂತಹ ವಿಷಯವನ್ನು ಹಂಚಿಕೊಳ್ಳುವ ಕೃತ್ಯವು ಪತಿ ಮತ್ತು ಪತ್ನಿಯ ನಡುವಿನ ಬಾಂಧವ್ಯವನ್ನು ವ್ಯಾಖ್ಯಾನಿಸುವ ಅಂತರ್ಗತ ಗೋಪ್ಯತೆಯ ಉಲ್ಲಂಘನೆಗೆ ಸಮನಾಗಿದೆ. ಈ ನಂಬಿಕೆ ದ್ರೋಹವು ವೈವಾಹಿಕ ಸಂಬಂಧದ ಬುನಾದಿಯನ್ನೇ ಅಲುಗಾಡಿಸುತ್ತದೆ ಮತ್ತು ವೈವಾಹಿಕ ಬಂಧದಿಂದ ರಕ್ಷಿತವಾಗಿಲ್ಲ ಎಂದು ಹೇಳಿದರು.
ಪತ್ನಿಯು ತನ್ನ ಪತಿಯ ವಿಸ್ತರಣೆಯಲ್ಲ, ಬದಲಾಗಿ ತನ್ನದೇ ಆದ ಹಕ್ಕುಗಳು, ಬಯಕೆಗಳು ಮತ್ತು ಸ್ವಾತಂತ್ರ್ಯವನ್ನು ಹೊಂದಿರುವ ವ್ಯಕ್ತಿ. ಅವಳ ದೈಹಿಕ ಸ್ವಾಯತ್ತತೆ ಮತ್ತು ಖಾಸಗಿತನವನ್ನು ಗೌರವಿಸುವುದು ಕಾನೂನು ಬಾಧ್ಯತೆ ಮಾತ್ರವಲ್ಲ, ನಿಜವಾದ ಸಮಾನ ಸಂಬಂಧವನ್ನು ಬೆಳೆಸುವಲ್ಲಿ ಕಡ್ಡಾಯ ನೈತಿಕ ಅಂಶವೂ ಆಗಿದೆ ಎಂದು ನ್ಯಾಯಾಲಯವು ಹೇಳಿತು.
ಮಿರ್ಜಾಪುರ ಜಿಲ್ಲೆಯ ಪ್ರದ್ಯುಮ್ನ ಯಾದವ್ ಎಂಬಾತನ ವಿರುದ್ಧ ಆತನ ಪತ್ನಿ ಮಾಹಿತಿ ತಂತ್ರಜ್ಞಾನ(ಐಟಿ)ಕಾಯ್ದೆಯ ಕಲಂ 67ರಡಿ ಪ್ರಕರಣ ದಾಖಲಿಸಿದ್ದಳು. ಯಾದವ್ ತನಗೆ ಅರಿವಿಲ್ಲದೆ ಮತ್ತು ತನ್ನ ಒಪ್ಪಿಗೆಯಿಲ್ಲದೆ ತಮ್ಮಿಬ್ಬರ ನಡುವಿನ ಆತ್ಮೀಯ ಕ್ಷಣಗಳ ಅಶ್ಲೀಲ ವೀಡಿಯೊವನ್ನು ಮೊಬೈಲ್‌ನಿಂದ ಚಿತ್ರೀಕರಿಸಿದ್ದು, ಅದನ್ನು ಮೊದಲು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಮತ್ತು ಬಳಿಕ ಸಂಬಂಧಿ,ಮತ್ತು ಗ್ರಾಮಸ್ಥರೊಂದಿಗೆ ಹಂಚಿಕೊಂಡಿದ್ದಾನೆ ಎಂದು ಆಕೆ ಆರೋಪಿಸಿದ್ದಳು.
ತನ್ನ ಕಕ್ಷಿದಾರ ದೂರುದಾರ ಮಹಿಳೆಯನ್ನು ಕಾನೂನುಬದ್ಧವಾಗಿ ಮದುವೆಯಾಗಿರುವ ಪತಿಯಾಗಿರುವುದರಿಂದ ಐಟಿ ಕಾಯ್ದೆಯ ಕಲಂ 67ರಡಿ ಯಾವುದೇ ಅಪರಾಧವನ್ನು ಎಸಗಿಲ್ಲ. ಪತಿ ಮತ್ತು ಪತ್ನಿಯ ನಡುವೆ ರಾಜಿಗೆ ನ್ಯಾಯಯುತ ಅವಕಾಶಗಳಿವೆ ಎಂದು ಯಾದವ್ ಪರ ವಕೀಲರು ವಾದಿಸಿದರು.
ಅವರ ವಾದವನ್ನು ವಿರೋಧಿಸಿದ ಹೆಚ್ಚುವರಿ ಸರಕಾರಿ ವಕೀಲರು, ದೂರುದಾರ ಮಹಿಳೆಯು ಅರ್ಜಿದಾರನ ಕಾನೂನುಬದ್ಧ ಪತ್ನಿಯಾಗಿದ್ದರೂ ಆಕೆಯ ಅಶ್ಲೀಲ ವೀಡಿಯೊವನ್ನು ಮಾಡಲು ಮತ್ತು ಅದನ್ನು ಸಂಬಂಧಿ ಹಾಗೂ ಗ್ರಾಮಸ್ಥರೊಂದಿಗೆ ಹಂಚಿಕೊಳ್ಳುವ ಹಕ್ಕು ಪತಿಗೆ ಇಲ್ಲ ಎಂದು ಹೇಳಿದರು.