ಮಧ್ಯಪ್ರದೇಶ | ʼಗೋರಕ್ಷಕರʼ ಮೇಲೆ ಹಲ್ಲೆಗೆ ಬಿಜೆಪಿ ನಾಯಕ, ಪೊಲೀಸ್ ಅಧಿಕಾರಿಯಿಂದ ಸಂಚು?; ಆಡಿಯೋ ವೈರಲ್

ಮಯೂರ್ ದುಬೆ, ಓಮೇಶ್ವರ್ ಠಾಕ್ರೆ (Photo credit: NDTV)
ಭೋಪಾಲ್: ಆಡಳಿತಾರೂಢ ಬಿಜೆಪಿಯ ಯುವ ಘಟಕವಾದ ಭಾರತೀಯ ಜನತಾ ಮೋರ್ಚಾ (ಬಿಜೆವೈಎಂ) ನಾಯಕರೊಬ್ಬರು ಪೊಲೀಸ್ ಅಧಿಕಾರಿಯೊಂದಿಗೆ ಸಂವಾದ ನಡೆಸಿ ಸ್ವಘೋಷಿತ ಗೋರಕ್ಷಕರ ಮೇಲೆ ಹಲ್ಲೆಗೆ ಸಂಚು ರೂಪಿಸಿದ್ದಾರೆನ್ನಲಾದ ದಿನಾಂಕವಿಲ್ಲದ ಆಡಿಯೋ ಕ್ಲಿಪ್ ಮಧ್ಯಪ್ರದೇಶದ ಸಿಯೋನಿಯಲ್ಲಿ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ ಎಂದು NDTV ವರದಿ ಮಾಡಿದೆ.
ಈಗ ವೈರಲ್ ಆಗಿರುವ ಆಡಿಯೋ ಕ್ಲಿಪ್‌ನಲ್ಲಿ, ಬಿಜೆವೈಎಂ ನಾಯಕ ಮಯೂರ್ ದುಬೆ, ಕನ್ಹಿವಾಡಾ ಪೊಲೀಸ್ ಠಾಣೆಯ ಉಸ್ತುವಾರಿ ಹೊತ್ತಿರುವ ಓಮೇಶ್ವರ್ ಠಾಕ್ರೆ ಅವರೊಂದಿಗೆ ಸಂಘ ಪರಿವಾರದ ಕಾರ್ಯಕರ್ತರೂ ಆಗಿರುವ ಸ್ವಘೋಷಿತ ಗೋರಕ್ಷಕರನ್ನು ಸಿಲುಕಿಸಲು ಸಂಚು ಹೂಡಿದ್ದಾರೆ ಎಂದು ಹೇಳಲಾಗಿದೆ.
"ಹಿಂದುತ್ವದ ಹೆಸರಿನಲ್ಲಿ ತಪ್ಪು ಕೆಲಸಗಳನ್ನು ಮಾಡುವ" ಸ್ವಘೋಷಿತ ಗೋರಕ್ಷಕರನ್ನು ಹೆಣೆಯಲು ಒಂದು ಕಥೆಯನ್ನು ಕಾರ್ಯರೂಪಕ್ಕೆ ಇಳಿಸುವ ಬಗ್ಗೆ ಬಿಜೆಪಿ ಯುವ ನಾಯಕ ದುಬೆ ಚರ್ಚಿಸಿರುವುದು ವೈರಲ್ ಆಗಿರುವ ಆಡಿಯೋದಲ್ಲಿದೆ. ಈ ಸಂಚಿನ ಭಾಗವಾಗಿ ಅಂತರರಾಜ್ಯ ಗೋವು ಕಳ್ಳಸಾಗಣೆದಾರರನ್ನು ಆಮಿಷವಾಗಿ ಬಳಸಿಕೊಂಡು ಸ್ವಘೋಷಿತ ಗೋ ರಕ್ಷಕರನ್ನು ಬಲೆಗೆ ಬೀಳಿಸುವ ಯೋಜನೆ ಅವರದ್ದಾಗಿತ್ತು. ಅದಕ್ಕೆ ಬೇಕಾದ ಹಣಕಾಸಿನ ಬಗ್ಗೆಯೂ ಆಡಿಯೋದಲ್ಲಿ ಪ್ರಸ್ತಾಪವಾಗಿದೆ.
"ನಾವು ಹಣ ನೀಡುತ್ತೇವೆ, ಎಲ್ಲಾ ಖರ್ಚುಗಳನ್ನು ಭರಿಸುತ್ತೇವೆ... ನಿಮ್ಮ ವೈಯಕ್ತಿಕ ಸಂಖ್ಯೆಗೆ ವಾಟ್ಸಾಪ್ ಸಂದೇಶ ಕಳುಹಿಸುತ್ತೇವೆ. ಕಾರು ಎಲ್ಲಿಯೂ ನಿಲ್ಲಬಾರದು... ಇದು ಮುಂಗಡ, ಉಳಿದದ್ದು ನಗದು... ನಂತರ, ನಿಮ್ಮ ವಿರುದ್ಧ ಅಥವಾ ನನ್ನ ವಿರುದ್ಧ ದೂರು ನೀಡಿದವರನ್ನು ನಾವು ಎಳೆದು ಥಳಿಸುತ್ತೇವೆ" ಎಂದು ದುಬೆ ಹೇಳುವುದನ್ನು ಆಡಿಯೋದಲ್ಲಿ ಕೇಳಬಹುದು.
ಇನ್ನೊಂದು ಆಡಿಯೋ ಕ್ಲಿಪ್‌ನಲ್ಲಿ, ಹಿರಿಯ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಾಯಕರಿಗೆ ಕೆಲವು ವ್ಯಕ್ತಿಗಳ, ವಿಶೇಷವಾಗಿ ಮಾಧವ್ ದುಬೆ ಮತ್ತು ದೀಪಕ್ ಯಾದವ್, ಇಬ್ಬರೂ ಹಿಂದುತ್ವ ಸಂಘಟನೆಗಳಿಗೆ ಸಂಬಂಧಿಸಿದ ಪ್ರಶ್ನಾರ್ಹ ಚಟುವಟಿಕೆಗಳ ಬಗ್ಗೆ ವಿವರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯು ದುಬೆಗೆ ತಿಳಿಸುತ್ತಿರುವುದನ್ನು ಕೇಳಬಹುದು.
ಆಡಿಯೋ ಕ್ಲಿಪ್‌ಗಳ ಸತ್ಯಾಸತ್ಯತೆಯನ್ನು NDTV ದೃಢೀಕರಿಸಿಲ್ಲ. ಆದರೆ ಸಿಯೋನಿ ಪೊಲೀಸ್ ವರಿಷ್ಠಾಧಿಕಾರಿ ಈ ಪ್ರಕರಣದ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದು ದೃಢಪಡಿಸಿದ್ದಾರೆ.
"ಶನಿವಾರ ಬೆಳಿಗ್ಗೆ ಈ ವಿಚಾರವಾಗಿ ನನಗೆ ಮಾಹಿತಿ ನೀಡಲಾಯಿತು. ಎಎಸ್‌ಪಿ ನೇತೃತ್ವದಲ್ಲಿ ವಿಚಾರಣೆಗೆ, ಆಡಿಯೋ ಪರಿಶೀಲನೆಗೆ ಆದೇಶಿಸಲಾಗಿದೆ. ನಿಷ್ಪಕ್ಷಪಾತ ತನಿಖೆಗಾಗಿ ಠಾಣೆಯ ಉಸ್ತುವಾರಿಯನ್ನು ವಜಾಗೊಳಿಸಲಾಗಿದೆ", ಎಂದು ಅವರು ಹೇಳಿದರು.
ವೈರಲ್ ಆಗಿರುವ ಈ ಆಡಿಯೋ ಬಿಜೆವೈಎಂ ಮತ್ತು ಗೋ ರಕ್ಷಕ ಬ್ರಿಗೇಡ್‌ನಂತಹ ಇತರ ಸಂಘ ಪರಿವಾರದ ಸಂಘಟನೆಗಳ ನಡುವಿನ ಬಿರುಕು ಮತ್ತು ಪೊಲೀಸರ ಮತ್ತು ನಕಲಿ ಗೋ ಕಳ್ಳಸಾಗಣೆದಾರರ ನಡುವಿನ ನಂಟನ್ನು ಸೂಚಿಸುತ್ತದೆ ಎಂದು NDTV ವರದಿ ಮಾಡಿದೆ.
ಮಧ್ಯಪ್ರದೇಶದ ಸಿಯೋನಿಯು ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ತೆಲಂಗಾಣಕ್ಕೆ ಗೋ ಕಳ್ಳಸಾಗಣೆ ಮಾಡುವ ಪ್ರಮುಖ ಮಾರ್ಗವಾಗಿದೆ. ಕಳೆದ ವರ್ಷ, ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಗೋ ಕಳ್ಳಸಾಗಣೆ ಪ್ರಕರಣಗಳು ಇಲ್ಲಿ ನಡೆದಿದೆ. 55 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 99 ಮಂದಿಯನ್ನು ಬಂಧಿಸಲಾಗಿದೆ. 1,300 ಕ್ಕೂ ಹೆಚ್ಚು ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಂದು ತಿಳಿದು ಬಂದಿದೆ.
ಜೂನ್ 2024 ರಲ್ಲಿ, ಸ್ಥಳೀಯ ಕಾಡು ಪ್ರದೇಶದಲ್ಲಿ 54 ಹಸುಗಳ ವಿರೂಪಗೊಂಡ ಮೃತದೇಹಗಳು ಪತ್ತೆಯಾಗಿದ್ದವು. ಇದು ಭಾರಿ ಅಶಾಂತಿಗೆ ಕಾರಣವಾಗಿತ್ತು. ಪರಿಣಾಮವಾಗಿ ಜಿಲ್ಲಾಧಿಕಾರಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಯನ್ನು ವಜಾಗೊಳಿಸಲಾಗಿತ್ತು.
2022 ರಲ್ಲಿ, ಸಿಯೋನಿಯ ಕುರೈ ಪ್ರದೇಶದಲ್ಲಿ ಸ್ವಘೋಷಿತ ಗೋರಕ್ಷಕರು ಇಬ್ಬರು ಬುಡಕಟ್ಟು ಸಮುದಾಯಕ್ಕೆ ಸೇರಿದವರನ್ನು ಹತ್ಯೆ ಮಾಡಲಾಗಿತ್ತು.