ಗುಜರಾತ್: ಬುಲೆಟ್ ರೈಲು ಯೋಜನೆ ಸ್ಥಳದಲ್ಲಿ ಜಾರಿದ ಬೃಹತ್ ಯಂತ್ರ,; 51 ರೈಲುಗಳ ಸಂಚಾರಕ್ಕೆ ವ್ಯತ್ಯಯ

Photo credit: X@rajtoday
ಅಹ್ಮದಾಬಾದ್: ಬುಲೆಟ್ ರೈಲು ಮಾರ್ಗದ ಕಂಬಗಳ ನಡುವೆ ಕಾಂಕ್ರೀಟ್ ಗರ್ಡರ್‌ಗಳನ್ನು ಅಳವಡಿಸಲು ಬಳಸಲಾಗುವ ಬೃಹತ್ ಯಂತ್ರ ‘ಗ್ಯಾಂಟ್ರಿ’ಯನ್ನು ರವಿವಾರ ರಾತ್ರಿ ಹಿಂದಕ್ಕೆ ಎಳೆಯುತ್ತಿದ್ದಾಗ ಅದು ಜಾರಿ ಬಿದ್ದ ಪರಿಣಾಮ ಅಹ್ಮದಾಬಾದ್‌ನಿಂದ ದೇಶದ ವಿವಿಧ ಭಾಗಗಳಿಗೆ ಕನಿಷ್ಠ 51 ರೈಲುಗಳ ಸಂಚಾರಕ್ಕೆ ವ್ಯತ್ಯಯವುಂಟಾಗಿತ್ತು. ಈ ಘಟನೆಯಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.
ಅಹ್ಮದಾಬಾದ್ ಅಗ್ನಿಶಾಮಕ ಮತ್ತು ತುರ್ತುಸೇವೆಗಳ (ಎಎಫ್‌ಇಎಸ್) ಅಧಿಕಾರಿಗಳ ಪ್ರಕಾರ,ರವಿವಾರ ರಾತ್ರಿ 10:28ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ವಟ್ವಾ ರಸ್ತೆ ಸಮೀಪ ಹೈ-ಸ್ಪೀಡ್ ಬುಲೆಟ್ ರೈಲು ಯೋಜನೆ ಕಾಮಗಾರಿ ಸ್ಥಳದಲ್ಲಿ ಸ್ಲ್ಯಾಬ್‌ಗಳನ್ನು ಇರಿಸುವ ಬೃಹತ್ ಕ್ರೇನ್ (ಸೆಗ್ಮೆಂಟಲ್ ಲಾಂಚಿಂಗ್ ಗ್ಯಾಂಟ್ರಿ) ವಯಾಡಕ್ಟ್ ನಿರ್ಮಾಣಕ್ಕಾಗಿ ಕಾಂಕ್ರೀಟ್ ಗ್ರಿಡ್‌ನ್ನು ಅಳವಡಿಸಿದ ಬಳಿಕ ಹಿಂದಕ್ಕೆಳೆಯುತ್ತಿದ್ದಾಗ ಆಕಸ್ಮಿಕವಾಗಿ ಜಾರಿ ಎರಡು ಕಂಬಗಳ ನಡುವೆ ಕುಸಿದು ಬಿದ್ದಿದೆ. ಪರಿಣಾಮ ಸಮೀಪದಲ್ಲಿಯ ರೈಲು ಹಳಿಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ರಾಷ್ಟ್ರೀಯ ಹೈ-ಸ್ಪೀಡ್ ರೈಲು ನಿಗಮದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು,ನಿರ್ಮಾಣಕ್ಕೆ ಯಾವುದೇ ಹಾನಿಯಾಗಿಲ್ಲ. ಎರಡು ಹೆವಿ ಡ್ಯೂಟಿ ರೋಡ್ ಕ್ರೇನ್‌ಗಳು ಸೇರಿದಂತೆ ಭಾರಿ ಯಂತ್ರೋಪಕರಣಗಳನ್ನು ಪುನಃಸ್ಥಾಪನೆ ಕಾರ್ಯದಲ್ಲಿ ತೊಡಗಿಸಲಾಗಿದೆ ಎಂದು ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಅವಘಡದಿಂದಾಗಿ 51ಕ್ಕೂ ಅಧಿಕ ರೈಲುಗಳ ಸಂಚಾರಕ್ಕೆ ವ್ಯತ್ಯಯವುಂಟಾಗಿತ್ತು. 25 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದು,ಕೆಲವು ರೈಲುಗಳ ಸಂಚಾರಗಳನ್ನು ಭಾಗಶಃ ರದ್ದುಗೊಳಿಸಲಾಗಿತ್ತು. ಐದು ರೈಲುಗಳ ವೇಳಾಪಟ್ಟಿಯನ್ನು ಬದಲಿಸಲಾಗಿದ್ದು,ಇತರ ಆರು ರೈಲುಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ ಎಂದು ಪಶ್ಚಿಮ ರೈಲ್ವೆಯ ಅಹ್ಮದಾಬಾದ್ ವಿಭಾಗವು ತಿಳಿಸಿದೆ.