ಆರೋಪಿಗಳ ಆಸ್ತಿಗಳನ್ನು ಕೆಡವುದು ಸಂವಿಧಾನದ ಮೇಲೆ ಬುಲ್ಡೋಝರ್ ಚಲಾಯಿಸುವುದಕ್ಕೆ ಸಮಾನ: ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಉಜ್ಜಲ್ ಭುಯಾನ್
ನ್ಯಾಯಾಧೀಶ ಉಜ್ಜಲ್ ಭುಯಾನ್ (Photo credit: barandbench.com)
ಹೊಸದಿಲ್ಲಿ: ಅಪರಾಧದಲ್ಲಿ ಭಾಗಿಯಾಗಿರುವ ಶಂಕೆಯಲ್ಲಿ ಆರೋಪಿಗಳ ಆಸ್ತಿಗಳನ್ನು ಬುಲ್ಡೋಝರ್ ಬಳಸಿ ಕೆಡವುದು ಭಾರತದ ಸಂವಿಧಾನದ ಮೇಲೆ ಬುಲ್ಡೋಝರ್ ಚಲಾಯಿಸುವುದಕ್ಕೆ ಸಮಾನ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶ ಉಜ್ಜಲ್ ಭುಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಪುಣೆಯ ಭಾರತಿ ವಿದ್ಯಾಪೀಠ ನ್ಯೂ ಲಾ ಕಾಲೇಜಿನಲ್ಲಿ ನಡೆದ 13 ನೇ ನ್ಯಾಯಮೂರ್ತಿ ಪಿಎನ್ ಭಗವತಿ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ನ್ಯಾಯಾಲಯದ ವಾದ ಮಂಡನೆ ಸ್ಪರ್ಧೆಯಲ್ಲಿ ನ್ಯಾಯಮೂರ್ತಿ ಭುಯಾನ್ ಮಾತನಾಡುತ್ತಿದ್ದರು.
ಆರೋಪಿಗಳ ಮನೆಗಳನ್ನು ಕೆಡವಿ ನಂತರ ಅದನ್ನು ಅಕ್ರಮ ಎಂದು ಕರೆದು, ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳುವ ನಡೆಯೇ ಗೊಂದಲಕಾರಿಯಾಗಿದೆ. ಇದು ಮಾನಸಿಕವಾಗಿಯೂ ಕುಗ್ಗಿಸುವ ಪ್ರಯತ್ನ ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದ್ದಾರೆ.
"ನನ್ನ ಪ್ರಕಾರ, ಆಸ್ತಿಯನ್ನು ಕೆಡವಲು ಬುಲ್ಡೋಝರ್ ಬಳಸುವುದು ಸಂವಿಧಾನದ ಮೇಲೆ ಬುಲ್ಡೋಝರ್ ಚಲಾಯಿಸಿದಂತೆ. ಇದು ಕಾನೂನಿನ ಪರಿಕಲ್ಪನೆಯ ನಿಯಮಗಳ ನಿರಾಕರಣೆಯಾಗಿದೆ. ಒಂದು ವೇಳೆ ಇದನ್ನು ನಿಲ್ಲಿಸಿದ್ದರೆ, ಇದು ನಮ್ಮ ನ್ಯಾಯ ವಿತರಣಾ ವ್ಯವಸ್ಥೆಯನ್ನೇ ನಾಶಪಡಿಶಲಿದೆ" ಎಂದು ನ್ಯಾಯಮೂರ್ತಿ ಭುಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
"ಆ ಮನೆಯಲ್ಲಿ ಆ ವ್ಯಕ್ತಿ ಆರೋಪಿಯಾಗಿರಬಹುದು ಅಥವಾ ಅಪರಾಧಿಯೂ ಆಗಿರಬಹುದು ಎಂದು ನಾವು ಭಾವಿಸುತ್ತೇವೆ. ಆದರೆ ಅವನ ತಾಯಿ ಅಲ್ಲೇ ಇರುತ್ತಾರೆ, ಅವನ ಸಹೋದರಿ ಅಲ್ಲೇ ಇರುತ್ತಾರೆ, ಅವನ ಹೆಂಡತಿ ಅಲ್ಲೇ ಇರುತ್ತಾರೆ, ಅವನ ಮಕ್ಕಳು ಅಲ್ಲೇ ಇರುತ್ತಾರೆ. ಅವರು ಮಾಡಿರುವ ತಪ್ಪೇನು?" ನ್ಯಾಯಮೂರ್ತಿ ಭೂಯಾನ್ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
“ನೀವು ಆ ಮನೆಯನ್ನು ಕೆಡವಿದರೆ, ಅವರು ಎಲ್ಲಿಗೆ ಹೋಗಬೇಕು? ಅವರ ತಲೆಯ ಮೇಲಿರುವ ಸೂರನ್ನು ಕಿತ್ತುಕೊಳ್ಳುವುದು ಎಷ್ಟು ಸರಿ? ಅವರು ಮಾತ್ರ ಏಕೆ? ಆರೋಪಿ, ಅಪರಾಧಿ ಏನು ಮಾಡಬೇಕು? ಯಾರಾದರೂ ಆರೋಪಿ ಅಥವಾ ಅಪರಾಧಿ ಎಂಬ ಕಾರಣಕ್ಕಾಗಿ, ಅವರ ಮನೆಯನ್ನು ಕೆಡವುದು ಸರಿಯಲ್ಲ, ” ಎಂದು ನ್ಯಾಯಮೂರ್ತಿ ಭುಯಾನ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
'ಬುಲ್ಡೋಝರ್ ನ್ಯಾಯ' ಎಂದು ಕರೆಯಲ್ಪಡುವ ಈ ಪ್ರವೃತ್ತಿಯು, 2017 ರಲ್ಲಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ಆಡಳಿತಾವಧಿಯಿಂದ ಪ್ರಾರಂಭವಾಯಿತು. ಕಾನೂನುಬದ್ಧ ಪ್ರಕ್ರಿಯೆಯನ್ನು ಅನುಸರಿಸದೆ, ಗಲಭೆಯಲ್ಲಿ ತೊಡಗಿರುವವರ ಮನೆಗಳನ್ನು ಕೆಡವಲು ಬುಲ್ಡೋಝರ್ ಗಳನ್ನು ಬಳಸುವ ಈ ಪ್ರವೃತ್ತಿ ಈಗ ಸಾಮಾನ್ಯವಾಗಿ ಪರಿಣಮಿಸಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ, ಸುಪ್ರೀಂ ಕೋರ್ಟ್ 'ಬುಲ್ಡೋಝರ್ ನ್ಯಾಯ'ವನ್ನು ಕಾನೂನಿನ ಪ್ರಕಾರ ಸ್ವೀಕಾರಾರ್ಹವಲ್ಲ ಎಂದು ಹೇಳಿತ್ತು.
2023 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಭಡ್ತಿಯಾಗುವ ಮೊದಲು, ನ್ಯಾಯಮೂರ್ತಿ ಭುಯಾನ್ ಅವರು ಜೂನ್ 2022 ರಿಂದ ತೆಲಂಗಾಣ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ಅಕ್ಟೋಬರ್ 17, 2011 ರಂದು ಅವರನ್ನು ಗುವಾಹಟಿ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಿಸಲಾಗಿತ್ತು.
ಕಾಕತಾಳೀಯವೆಂಬಂತೆ ನ್ಯಾಯಮೂರ್ತಿ ಭುಯಾನ್ ಭಾಷಣ ಮಾಡುತ್ತಿದ್ದಾಗ, ಅದೇ ದಿನ ಮತ್ತು ಅದೇ ರಾಜ್ಯದಲ್ಲಿ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ನಾಗಪುರ ಹಿಂಸಾಚಾರದ ಅಪರಾಧಿಗಳು ಉತ್ತರ ಪ್ರದೇಶ ಶೈಲಿಯ ಬುಲ್ಡೋಝರ್ ಕ್ರಮವನ್ನು ಎದುರಿಸುತ್ತಾರೆಯೇ ಎಂದು ಕೇಳಿದಾಗ ಅಗತ್ಯವಿದ್ದರೆ ಬುಲ್ಡೋಝರ್ ಬಳಸುವುದಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.
ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ 17 ನೇ ಶತಮಾನದ ಮೊಘಲ್ ಚಕ್ರವರ್ತಿ ಔರಂಗಜೇಬ್ ಸಮಾಧಿಯನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿ ಬಲಪಂಥೀಯ ಸಂಘಟನೆಯೊಂದು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಒಂದು ಸಮುದಾಯದ ಪವಿತ್ರ ಗ್ರಂಥವನ್ನು ಸುಟ್ಟುಹಾಕಲಾಗಿದೆ ಎಂಬ ವದಂತಿಗಳ ನಡುವೆ ನಾಗ್ಪುರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು.