ಮಾಜಿ ಪ್ರಧಾನಿಗೆ ಬಿಎಂಡಬ್ಲ್ಯುಗಿಂತಲೂ ಮಾರುತಿ 800 ಇಷ್ಟದ ಕಾರು

Update: 2024-12-27 16:20 GMT

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ : ತನ್ನ ಮಾರುತಿ 800 ಕಾರಿನ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಅವರಿಗಿದ್ದ ಅಪಾರ ಒಲವನ್ನು, ಮಾಜಿ ಐಪಿಎಸ್ ಅಧಿಕಾರಿ ಹಾಗೂ ವಿಶೇಷ ರಕ್ಷಣಾ ದಳದ ಮಾಜಿ ವರಿಷ್ಠ ಅಸೀಮ್ ಅರುಣ್ ನೆನಪಿಸಿಕೊಂಡಿದ್ದಾರೆ.

ಪ್ರಸಕ್ತ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಸದರ್‌ನಲ್ಲಿ ಶಾಸಕರಾಗಿರುವ ಅಸೀಮ್ ಅರುಣ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮನ್‌ಮೋಹನ್ ಸಿಂಗ್ ಕುರಿತ ತನ್ನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಅವರು ಅತ್ಯಂತ ಸರಳ, ಸಜ್ಜನಿಕೆಯ ವ್ಯಕ್ತಿಯಾದ ಮನಮೋಹನ್ ಸಿಂಗ್ ಅವರು ಒಂದೇ ಒಂದು ಮಾರುತಿ 800 ಕಾರನ್ನು ಹೊಂದಿದ್ದರು. ಅದನ್ನು ಅವರು ಬಹಳಷ್ಟು ಹಚ್ಚಿಕೊಂಡಿದ್ದರು ಎಂದು ಅರುಣ್ ಸ್ಮರಿಸಿಕೊಂಡಿದ್ದಾರೆ.

2004ರಿಂದ ಮೊದಲ್ಗೊಂಡು ಸುಮಾರು ಮೂರು ವರ್ಷಗಳ ಕಾಲ ನಾನು ಅವರ ಅಂಗರಕ್ಷಕನಾಗಿದ್ದೆ. ವಿಶೇಷ ರಕ್ಷಣಾ ದಳ ( ಎಸ್‌ಪಿಜಿ)ದ ತಂಡದ ಮುಖ್ಯಸ್ಥನಾಗಿ ನನಗೆ ಅವರಿಗೆ ಅತ್ಯಂತ ಸನಿಹದ ಭದ್ರತೆಯನ್ನು ಒದಗಿಸುವ ಹೊಣೆಗಾರಿಕೆಯಿತ್ತು. ನೆರಳಿನಂತೆ ಅವರ ಜೊತೆಗಿರುವ ಹೊಣೆಗಾರಿಕೆ ನನಗಿತ್ತು ಎಂದು ಅರುಣ್ ‘ಎಕ್ಸ್’ನಲ್ಲಿ ಬರೆದಿದ್ದಾರೆ.

ಮನಮೋಹನ್‌ಸಿಂಗ್ ಅವರ ಸರಳತೆಯ ಬಗೆಗೂ ಅವರು ತನ್ನ ಬರಹದಲ್ಲಿ ಬೆಳಕು ಚೆಲ್ಲಿದ್ದಾರೆ. ಡಾ.ಸಿಂಗ್ ಅವರು ಕೇವಲ ಒಂದು ಕಾರಿನ ಒಡೆತನವನ್ನು ಹೊಂದಿದ್ದರು. ಪ್ರಧಾನಿ ನಿವಾಸದಲ್ಲಿ ಮಿರುಗುವ ಕಪ್ಪು ಬಿಎಂಡಬ್ಲ್ಯು ಕಾರುಗಳ ಹಿಂದೆ ಅದನ್ನು ನಿಲ್ಲಿಸಲಾಗುತ್ತಿತ್ತು. ಅವರು ನನ್ನೊಂದಿಗೆ ಆಗಾಗ್ಗೆ ಹೇಳುತ್ತಿದ್ದರು ‘‘ಅಸೀಮ್, ಈ ಕಾರಿನಲ್ಲಿ (ಬಿಎಂಡಬ್ಲ್ಯು) ಪ್ರಯಾಣಿಸಲು ನಾನು ಇಷ್ಟಪಡುವುದಿಲ್ಲ. ನನಗಂತೂ ಇದೇ ವಾಹನ ಮಾರುತಿ800 ಇಷ್ಟ ಎಂದು ಹೇಳುತ್ತಿದ್ದರು. ಆಗ ನಾನು ಬಿಎಂಡಬ್ಲ್ಯು ಕಾರು ಇರುವುದು ಐಶಾರಾಮಿಗಲ್ಲ. ವಿಶೇಷ ರಕ್ಷಣಾ ದಳಕ್ಕೆ ಬೇಕಾದ ಭದ್ರತಾ ಸ್ವರೂಪಗಳನ್ನು ಅದು ಹೊಂದಿದೆ. ಎಂದು ಹೇಳುತ್ತಿದ್ದೆ. ಆದಾಗ್ಯೂ, ಅವರ ವಾಹನಗಳ ಸಾರೋಟು ಮುಂದೆ ಸಾಗುವಾಗ, ಅಲ್ಲಿಯೇ ನಿಂತಿರುತ್ತಿದ್ದ ಮಾರುತಿ ಕಾರಿನತ್ತ ಅವರು ಅಕ್ಕರೆಯಿಂದ ದೃಷ್ಟಿ ಹಾಯಿಸುತ್ತಿದ್ದರು. ಈ ದುಬಾರಿ ಕಾರು ಪ್ರಧಾನಿಗೆ ಸೇರಿದ್ದಾಗಿದೆ. ಆದರೆ ಈ ಮಾರುತಿ ಕಾರು ನನ್ನದು’’ ಎಂದು ಅವರು ಹೇಳುತ್ತಿದ್ದರು ಎಂದು ಆಸೀಮ್ ಸ್ಮರಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News