ದೇಶದಲ್ಲಿ 43 ಲಕ್ಷ ಚೆಕ್ ಬೌನ್ಸ್ ಪ್ರಕರಣಗಳು ಬಾಕಿ: ರಾಜಸ್ಥಾನದಲ್ಲಿ ಅತ್ಯಧಿಕ
ಹೊಸದಿಲ್ಲಿ: ದೇಶಾದ್ಯಂತ ಒಟ್ಟು 43 ಲಕ್ಷ ಚೆಕ್ ಬೌನ್ಸ್ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇದ್ದು, ರಾಜಸ್ಥಾನದಲ್ಲಿ ಅತ್ಯಧಿಕ ಎಂದರೆ 6.4 ಲಕ್ಷ ಪ್ರಕರಣಗಳು ಬಾಕಿ ಇವೆ. ಮಹಾರಾಷ್ಟ್ರ, ಗುಜರಾತ್, ದೆಹಲಿ, ಉತ್ತರ ಪ್ರದೇಶ ಮತ್ತು ಬಂಗಾಳ ನಂತರದ ಸ್ಥಾನಗಳಲ್ಲಿವೆ.
ದೇಶಾದ್ಯಂತ ಕೋರ್ಟ್ ಗಳಲ್ಲಿ ಬಾಕಿ ಇರುವ ಪ್ರಕರಣಗಳ ಪೈಕಿ ಟ್ರಾಫಿಕ್ ಚಲನ್ ಗಳು ಮತ್ತು ಚೆಕ್ ಬೌನ್ಸ್ ಪ್ರಕರಣಗಳೇ ಅತ್ಯಧಿಕ. ಟ್ರಾಫಿಕ್ ಚಲನ್ ಗಳನ್ನು ವರ್ಚುವಲ್ ಕೋರ್ಟ್ ಮೂಲಕ ಪಾವತಿಸುವ ವ್ಯವಸ್ಥೆಯನ್ನು ಸರ್ಕಾರ ಆರಂಭಿಸಿದ್ದು, ಚೆಕ್ ಬೌನ್ಸ್ ಪ್ರಕರಣಗಳನ್ನು ಅಪರಾಧ ಸ್ವರೂಪದ ಪ್ರಕರಣಗಳು ಎಂದು ಪರಿಗಣಿಸಿ ಪುರಾವೆ ದಾಖಲು ಮಾಡಿಕೊಳ್ಳುವುದು ಮತ್ತು ಸಾಕ್ಷಿಯ ಹೇಳಿಕೆಯನ್ನು ಒಳಗೊಂಡಿರುವುದರಿಂದ ಕಾಯಂ ಕೋರ್ಟ್ ಗಳೇ ನಿಭಾಯಿಸುತ್ತವೆ.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಂ ಮೇಘ್ವಾಲ್ ಅವರು ಇತ್ತೀಚೆಗೆ ಸಂಸತ್ತಿನಲ್ಲಿ ಹೇಳಿಕೆ ನೀಡಿ, ಚೆಕ್ ಬೌನ್ಸ್ ಪ್ರಕರಣಗಳ ವಿಲೇವಾರಿ ವಿಳಂಬವಾಗಲು ಪದೇ ಪದೇ ಪ್ರಕರಣದ ವಿಚಾರಣೆ ಮುಂದೂಡುವುದು, ವಿಚಾರಣೆಗಾಗಿ ಪ್ರಕರಣಗಳ ಕಣ್ಗಾವಲು, ಅನುಸರಣೆ ಮತ್ತು ಗುಂಪು ಮಾಡಲು ಸೂಕ್ತ ವ್ಯವಸ್ಥೆ ಇಲ್ಲದಿರುವುದು, ಆಯಾ ಕೋರ್ಟ್ ಗಳು ವಿಚಾರಣೆ ಮತ್ತು ಇತ್ಯರ್ಥಕ್ಕೆ ನಿಗದಿತ ಸಮಯ ನಿಗದಿಪಡಿಸದಿರುವುದು ಮುಖ್ಯ ಕಾರಣ ಎಂದು ಹೇಳಿಕೆ ನೀಡಿದ್ದರು.