ಈಡಿ ಮೇಲೆ ಸಿಬಿಐ ದಾಳಿ | ಲಂಚದ ಹಣ ವಶ, ಅಧಿಕಾರಿ ಪರಾರಿ
ಹೊಸದಿಲ್ಲಿ : ಶಿಮ್ಲಾದಲ್ಲಿ ನಿಯೋಜಿಸಲಾದ ಜಾರಿ ನಿರ್ದೇಶನಾಲಯದ (ಈಡಿ) ಅಧಿಕಾರಿಯೊಬ್ಬರು ಲಂಚ ಸ್ವೀಕರಿಸಿದ ಆರೋಪದ ಮೇಲೆ ಸಿಬಿಐ ಅಧಿಕಾರಿಗಳು ಅವರ ನಿವಾಸದ ಮೇಲೆ ದಾಳಿ ನಡೆಸಿದ್ದು, ಅಧಿಕಾರಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಲಂಚವಾಗಿ ಸ್ವೀಕರಿಸಿದ್ದಾರೆ ಎಂದು ಹೇಳಲಾದ 54 ಲಕ್ಷ ರೂ ಸೇರಿದಂತೆ ದೊಡ್ಡ ಮೊತ್ತದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಅಧಿಕಾರಿಗಳು ದಿ ಇಂಡಿಯನ್ ಎಕ್ಸ್‌ಪ್ರೆಸ್ ಗೆ ತಿಳಿಸಿದ್ದಾರೆ.
ಆರೋಪಿ ಈಡಿ ಅಧಿಕಾರಿಯು ಸಹಾಯಕ ನಿರ್ದೇಶಕರಾಗಿದ್ದಾರೆ. ಅವರ ಸಹೋದರ, ಸಾರ್ವಜನಿಕ ವಲಯದ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದು, ದಿಲ್ಲಿಯಲ್ಲಿ ನೇಮಕಗೊಂಡಿದ್ದು, ಇದೇ ಪ್ರಕರಣದಲ್ಲಿ ಸಿಬಿಐ ಅವರನ್ನು ವಶಕ್ಕೆ ತೆಗೆದುಕೊಂಡಿದೆ.
ಸಿಬಿಐ ಪ್ರಕಾರ, ಈಡಿ ಅಧಿಕಾರಿಯು ತನಿಖೆ ನಡೆಸುತ್ತಿರುವ ಮೂರು ವರ್ಷಗಳ ಹಿಂದಿನ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಚ ಸ್ವೀಕರಿಸಿದ್ದರೆ ಎನ್ನಲಾಗಿದೆ.
ಹಿರಿಯ ಸಿಬಿಐ ಅಧಿಕಾರಿಯೊಬ್ಬರು ನವದೆಹಲಿಯಿಂದ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ದೂರವಾಣಿ ಮೂಲಕ ತಿಳಿಸಿದರು,
“54 ಲಕ್ಷ ರೂಪಾಯಿ ಲಂಚದ ಮೊತ್ತವನ್ನು ಮತ್ತು ಪ್ರಮುಖ ಶಂಕಿತ ಆರೋಪಿ ಅಧಿಕಾರಿಯು ಪರಾರಿಯಾದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಬಳಿಕ ಅವರ ಸಹೋದರನನ್ನು ಬಂಧಿಸಲಾಗಿದ್ದು, ಸದ್ಯ ಸಿಬಿಐ ಕಸ್ಟಡಿಯಲ್ಲಿದ್ದಾರೆ.
ನಂತರ, ಛೋಟಾ ಶಿಮ್ಲಾದ ಸ್ಟ್ರಾಬೆರಿ ಹಿಲ್ಸ್‌ನಲ್ಲಿರುವ ರಾಣಿ ವಿಲ್ಲಾದಲ್ಲಿರುವ ಈಡಿ ಕಚೇರಿ ಆವರಣ, ನಿವಾಸದಲ್ಲಿ ಶೋಧ ನಡೆಸಲಾಯಿತು. ನಿವಾಸದಲ್ಲಿ ಹೆಚ್ಚುವರಿವಾಗಿ 56.50 ಲಕ್ಷ ರೂ. ಸೇರಿದಂತೆ ಈವರೆಗೆ 1.01 ಕೋಟಿ ರೂ.ಗಳನ್ನು ಸಿಬಿಐ ವಶಪಡಿಸಿಕೊಂಡಿದೆ", ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಸೆಕ್ಷನ್ 7A ಅಡಿಯಲ್ಲಿ ಚಂಡೀಗಢದ ಸಿಬಿಐ ಕಚೇರಿಯಲ್ಲಿ ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ. “ಆರೋಪಿ ಅಧಿಕಾರಿಯ ಸಹೋದರನನ್ನು ಚಂಡೀಗಢದ ವಿಶೇಷ ಸಿಬಿಐ ನ್ಯಾಯಾಧೀಶರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿದು ಬಂದಿದೆ. ಈಡಿ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮಧ್ಯವರ್ತಿಯೂ ತಲೆಮರೆಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.