ಡಾ. ಮನಮೋಹನ್ ಸಿಂಗ್ ಸ್ಮಾರಕಕ್ಕೆ ಸ್ಥಳ ಹಂಚಿಕೆ: ಅಮಿತ್ ಶಾ
ಹೊಸದಿಲ್ಲಿ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಸ್ಮಾರಕಕ್ಕೆ ಕೇಂದ್ರ ಸರ್ಕಾರ ಶೀಘ್ರವೇ ಸ್ಥಳ ಹಂಚಿಕೆ ಮಾಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಕಟಿಸಿದ್ದಾರೆ. ಕೇಂದ್ರ ಸಂಪುಟ ಸಭೆಯ ಬಳಿಕ ಶನಿವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಈ ವಿಷಯವನ್ನು ತಿಳಿಸಿದ್ದಾರೆ.
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ಹೇಳಿಕೆ ನೀಡಿ, ಅಂತ್ಯಕ್ರಿಯೆ ಮತ್ತು ಇತರ ವಿಧಿವಿಧಾನಗಳು ಮುಂದುವರಿಸಬಹುದು. ಏಕೆಂದರೆ ಟ್ರಸ್ಟ್ ರಚನೆ ಮತ್ತು ಜಾಗ ಹಂಚಿಕೆಯಾಗಬೇಕಿದೆ ಎಂದು ಸ್ಪಷ್ಟಪಡಿಸಿದೆ.
"ಇಂದು ಮುಂಜಾನೆ ಮಾಜಿ ಪ್ರಧಾನಿ ದಿವಂಗತ ಡಾ.ಮನಮೋಹನ ಸಿಂಗ್ ಅವರ ಸ್ಮಾರಕಕ್ಕೆ ಜಾಗ ಹಂಚಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಅಧ್ಯಕ್ಷರಿಂದ ಮನವಿ ಬಂದಿದೆ. ಸಂಪುಟ ಸಭೆಯ ಬಳಿಕ ಈ ಸಂಬಂಧ ಅಮಿತ್ ಶಾ ಅವರು ಮಲ್ಲಿಕಾರ್ಜುನ ಖರ್ಗೆಯವರಿಗೆ ಮತ್ತು ಡಾ.ಮನಮೋಹನ ಸಿಂಗ್ ಅವರ ಕುಟುಂಬಕ್ಕೆ ಮಾಹಿತಿ ನೀಡಿ, ಸ್ಮಾರಕಕ್ಕೆ ಜಾಗ ಹಂಚಿಕೆ ಮಾಡುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ ಟ್ರಸ್ಟ್ ರಚನೆ ಮತ್ತು ಜಾಗ ಹಂಚಿಕೆಯಾಗಬೇಕಿರುವುದರಿಂದ ಅಂತ್ಯಸಂಸ್ಕಾರ ಮತ್ತು ಇತರ ವಿಧಿವಿಧಾನಗಳನ್ನು ನಡೆಸಬಹುದು" ಎಂದು ಪ್ರಕಟಣೆ ಹೇಳಿದೆ.
ಇದಕ್ಕೂ ಮುನ್ನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ನಿಗಮ್ ಬೋಧ್ ನಲ್ಲಿ ಡಾ.ಸಿಂಗ್ ಅವರ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಿರುವ ಕೇಂದ್ರದ ಕ್ರಮ, ಮೊದಲ ಸಿಕ್ಖ್ ಪ್ರಧಾನಿಗೆ ಮಾಡಿದ ಉದ್ದೇಶಪೂರ್ವಕ ಅವಮಾನ ಎಂದು ಹೇಳಿದ್ದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿಗೆ ಪತ್ರ ಬರೆದು, ಡಾ.ಸಿಂಗ್ ಗೌರವಾರ್ಥ ಸ್ಮಾರಕ ನಿರ್ಮಿಸುವ ಸ್ಥಳದಲ್ಲಿ ಅಂತ್ಯಸಂಸ್ಕಾರ ನಡೆಯಬೇಕು ಎಂದು ಕೋರಿದ್ದಾಗಿ ರಮೇಶ್ ಎಕ್ಸ್ ಪೋಸ್ಟ್ ನಲ್ಲಿ ವಿವರಿಸಿದ್ದರು.