5 ವರ್ಷಗಳಲ್ಲಿ ಒಳಚರಂಡಿಗಳ ಸ್ವಚ್ಛತೆ ವೇಳೆ 377 ಮಂದಿ ಮೃತಪಟ್ಟಿದ್ದರೂ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್‌ನ ಯಾವುದೇ ಘಟನೆ ವರದಿಯಾಗಿಲ್ಲ: ಕೇಂದ್ರ ಸರಕಾರ

Update: 2024-08-01 10:45 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: 2019 ಮತ್ತು 2023ರ ನಡುವೆ ಒಳಚರಂಡಿಗಳು ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಸಂದರ್ಭಗಳಲ್ಲಿ 377 ಜನರು ಮೃತಪಟ್ಟಿದ್ದರೆ, ಈ ಐದು ವರ್ಷಗಳ ಅವಧಿಯಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಅಥವಾ ದೈಹಿಕವಾಗಿ ಮಲ ಹೊರುವ ಪದ್ಧತಿಯ ಒಂದೇ ಒಂದು ಘಟನೆ ವರದಿಯಾಗಿಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಸಚಿವ ರಾಮದಾಸ್ ಅಠಾವಳೆ ಬುಧವಾರ ರಾಜ್ಯಸಭೆಯಲ್ಲಿ ಪ್ರತಿಪಾದಿಸಿದ್ದಾರೆ.

ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಪದ್ಧತಿಯನ್ನು 2013ರಲ್ಲಿ ನಿಷೇಧಿಸಲಾಗಿತ್ತು.

2014 ಮತ್ತು 2018ರಲ್ಲಿ ನಡೆಸಲಾದ ಎರಡು ಸಮೀಕ್ಷೆಗಳಲ್ಲಿ ದೈಹಿಕವಾಗಿ ಮಲ ಹೊರುವ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ 58,098 ಜನರನ್ನು ಗುರುತಿಸಲಾಗಿತ್ತು ಎಂದು ಅಠಾವಳೆ ತಿಳಿಸಿದರು.

ಸರಕಾರವು ಹಂಚಿಕೊಂಡ ಮಾಹಿತಿಯ ಪ್ರಕಾರ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು,‌ 32,473 ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳಿದ್ದರೆ ಮಹಾರಾಷ್ಟ್ರ(6,325) ಮತ್ತು ಉತ್ತರಾಖಂಡ(4,988) ನಂತರದ ಸ್ಥಾನಗಳಲ್ಲಿದ್ದವು.

ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್‌ನಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳ ಒಟ್ಟು ಸಂಖ್ಯೆ ಕುರಿತು ಕೇಳಲಾಗಿದ್ದ ಪ್ರಶ್ನೆಗೆ ಉತ್ತರದಲ್ಲಿ ಅಠಾವಳೆ ಈ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. 2013ರ ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳಾಗಿ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆಯ ಅನುಷ್ಠಾನಕ್ಕೆ ಸರಕಾರವು ಯಾವುದೇ ಕ್ರಮವನ್ನು ತೆಗೆದುಕೊಂಡಿದೆಯೇ ಎಂದೂ ಇಬ್ಬರು ವಿಪಕ್ಷ ಸಂಸದರು ಪ್ರಶ್ನಿಸಿದ್ದರು.

ಕಾಯ್ದೆಯ ನಿಬಂಧನೆಗಳನ್ನು ಜಾರಿಗೊಳಿಸುವಂತೆ ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೋರಿಕೊಂಡಿತ್ತು ಹಾಗೂ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಒಳಚರಂಡಿಗಳು ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲು ಪ್ರಮಾಣಿತ ಕಾರ್ಯಾಚರಣೆ ಮಾರ್ಗಸೂಚಿಗಳನ್ನು ಹೊರಡಿಸಿತ್ತು ಎಂದು ಅಠಾವಳೆ ತಿಳಿಸಿದರು.

ನೈರ್ಮಲ್ಯ ಕಾರ್ಯಗಳಿಂದ ಯಾವುದೇ ಸಾವುನೋವುಗಳು ಸಂಭವಿಸದಂತೆ ಮತ್ತು ಕಾರ್ಮಿಕರು ಮಾನವ ಮಲದಿಂದಿಗೆ ನೇರ ಸಂಪರ್ಕಕ್ಕೆ ಬರದಂತೆ ನೋಡಿಕೊಳ್ಳಲು ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಯಾಂತ್ರೀಕೃತ ನೈರ್ಮಲ್ಯ ಪರಿಸರ ವ್ಯವಸ್ಥೆಗಾಗಿ ರಾಷ್ಟ್ರೀಯ ಕ್ರಮವನ್ನು ಅನುಷ್ಠಾನಿಸಲಾಗುತ್ತಿದೆ ಎಂದೂ ಸಚಿವರ ಹೇಳಿದರು.

ಜುಲೈ 2023ರಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯದ ಕೇಂದ್ರೀಯ ಮೇಲ್ವಿಚಾರಣಾ ಸಮಿತಿಯು ದೈಹಿಕವಾಗಿ ಮಲ ಹೊರುವ ಪದ್ಧತಿಯನ್ನು ನಿರ್ಮೂಲನಗೊಳಿಸಲಾಗಿದೆ ಎಂದು ಹೇಳಿಕೊಂಡಿತ್ತು. ದೇಶದ 766 ಜಿಲ್ಲೆಗಳ ಪೈಕಿ ಕೇವಲ 520 ಜಿಲ್ಲೆಗಳಲ್ಲಿ ಈ ಪದ್ಧತಿಯು ನಿರ್ಮೂಲನಗೊಂಡಿದೆ ಎಂಬ ವಾಸ್ತವದ ಹೊರತಾಗಿಯೂ ಅದು ಈ ಹೇಳಿಕೆಯನ್ನು ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News