ಯುಪಿಐ ವಹಿವಾಟಿಗೆ ಶುಲ್ಕ ವಿಧಿಸಿದರೆ, ಶೇ. 75ರಷ್ಟು ಬಳಕೆದಾರರು ತೊರೆಯುತ್ತಾರೆ : ಸಮೀಕ್ಷಾ ವರದಿ

Update: 2024-09-22 16:42 GMT

ಹೊಸದಿಲ್ಲಿ: ಒಂದು ವೇಳೆ ಯುಪಿಐ ವಹಿವಾಟಿಗೆ ಶುಲ್ಕ ವಿಧಿಸಿದರೆ, ಅಂದಾಜು ಶೇ. 75ರಷ್ಟು ಬಳಕೆದಾರರು ಯುಪಿಐ ಪಾವತಿಯನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂದು ಇತ್ತೀಚಿನ ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.

ದೇಶದ 308 ಜಿಲ್ಲೆಗಳಲ್ಲಿ 42,000 ಬಳಕೆದಾರರಿಂದ ಸಂಗ್ರಹಿಸಿರುವ ಮಾಹಿತಿಯ ಪ್ರಕಾರ, ಶೇ. 38ರಷ್ಟು ಬಳಕೆದಾರರು ಶೇ. 50ಕ್ಕೂ ಹೆಚ್ಚು ಮೊತ್ತದ ವಹಿವಾಟನ್ನು ಯುಪಿಐ ಮೂಲಕ ಮಾಡುತ್ತಿದ್ದಾರೆ ಎಂಬುದು ಲೋಕಲ್ ಸರ್ಕಲ್ಸ್ ಸಮೀಕ್ಷೆಯಿಂದ ತಿಳಿದು ಬಂದಿದೆ.

ಶೇ. 22ರಷ್ಟು ಮಂದಿ ಮಾತ್ರ ಯುಪಿಐ ವಹಿವಾಟು ಶುಲ್ಕವನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದರೆ, ಗಮನಾರ್ಹ ಸಂಖ್ಯೆಯ ಬಳಕೆದಾರರು ಯುಪಿಐ ವಹಿವಾಟಿಗೆ ಶುಲ್ಕ ವಿಧಿಸಿದರೆ, ಯುಪಿಐ ಪಾವತಿ ಸ್ಥಗಿತಗೊಳಿಸುವುದಾಗಿ ಹೇಳಿದ್ದಾರೆ.

2023-24ನೇ ಆರ್ಥಿಕ ವರ್ಷದಲ್ಲಿ ಯುಪಿಐ ವಹಿವಾಟು ರೂ. 131 ಬಿಲಿಯನ್‌ಗೆ ಏರಿಕೆಯಾಗಿದ್ದು, ಗಾತ್ರದಲ್ಲಿ ಶೇ. 57ರಷ್ಟು ಏರಿಕೆಯಾಗಿದ್ದರೆ, ಮೌಲ್ಯದಲ್ಲಿ ಶೇ. 44ರಷ್ಟು ಏರಿಕೆಯಾಗಿದೆ. ಒಟ್ಟಾರೆ ಯುಪಿಐ ವಹಿವಾಟಿನ ಮೌಲ್ಯವು 199.89 ಟ್ರಿಲಿಯನ್‌ಗೆ ತಲುಪಿದೆ ಎಂಬುದರತ್ತ ಸಮೀಕ್ಷೆ ಬೊಟ್ಟು ಮಾಡಿದೆ.

ಯುಪಿಐ ವಹಿವಾಟಿಗೆ ಶುಲ್ಕ ವಿಧಿಸುವುದರ ವಿರುದ್ಧ ವಕಲಾತ್ತು ವಹಿಸಲು ಲೋಕಲ್ ಸರ್ಕಲ್ಸ್ ಈ ಶೋಧನೆಗಳನ್ನು ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಎದುರು ಮಂಡಿಸಲು ಯೋಜಿಸಿದೆ.

ಜುಲೈ 15ರಿಂದ ಸೆಪ್ಟೆಂಬರ್ 20ರ ನಡುವೆ ಈ ಆನ್‌ಲೈನ್ ಸಮೀಕ್ಷೆಯನ್ನು ನಡೆಸಲಾಗಿದ್ದು, 15,598 ಬಳಕೆದಾರರು ನಿರ್ದಿಷ್ಟವಾಗಿ ಯುಪಿಐ ವಹಿವಾಟು ಶುಲ್ಕದ ಕುರಿತೇ ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News