ಅಪರಾಧದ ವೇಳೆ ʼಅಪ್ರಾಪ್ತʼ ಆಗಿದ್ದ ಎಂದು 25 ವರ್ಷಗಳ ಬಳಿಕ ಕೈದಿಯ ಬಿಡುಗಡೆಗೆ ಆದೇಶಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: 1994ರಲ್ಲಿ ಅಪರಾಧದ ಸಮಯದಲ್ಲಿ ʼಅಪ್ರಾಪ್ತನಾಗಿದ್ದʼ (ಬಾಲಾಪರಾಧಿ) ಎಂದು ಕಂಡು ಹಿಡಿದ ಬಳಿಕ ಸುಮಾರು 25 ವರ್ಷಗಳಿಂದ ಸೆರೆವಾಸದಲ್ಲಿದ್ದ ಕೈದಿಯನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ.
ನ್ಯಾಯಮೂರ್ತಿ ಎಂಎಂ ಸುಂದ್ರೇಶ್ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರನ್ನೊಳಗೊಂಡ ಪೀಠವು ಅಪರಾಧದ ವೇಳೆ ಆರೋಪಿಯು ಅಪ್ರಾಪ್ತನಾಗಿದ್ದು, ಆತನಿಗೆ 14 ವರ್ಷ ವಯಸ್ಸಾಗಿತ್ತು ಎಂದು ಕಂಡು ಹಿಡಿದಿದೆ.
1994ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಓಂ ಪ್ರಕಾಶ್ ಎಂಬಾತನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಪ್ರಕರಣದ ವಿಚಾರಣೆಯ ಸಮಯದಲ್ಲಿ ಆತ ಬಾಲಾಪರಾಧಿ ಎಂದು ಕೋರ್ಟ್ ಗಮನಕ್ಕೆ ತಂದರೂ ಆತನನ್ನು ಇತರ ಆರೋಪಿಗಳಂತೆ ಪರಿಗಣಿಸಲಾಗಿತ್ತು.
ವಿಚಾರಣಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಮರಣದಂಡನೆಯನ್ನು ಎತ್ತಿ ಹಿಡಿದು ಸುಪ್ರೀಂ ಕೋರ್ಟ್ ಕೂಡ ಅವರ ಮನವಿಯನ್ನು ವಜಾಗೊಳಿಸಿತ್ತು. ಅದರೆ, ಆ ಬಳಿಕ ಅವರು ಸುಪ್ರೀಂ ಕೋರ್ಟ್ ನಲ್ಲಿ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ವೇಳೆ ಶಾಲೆಯ ಪ್ರಮಾಣಪತ್ರವನ್ನು ಕೂಡ ಸಲ್ಲಿಸಿದ್ದರು. ಕ್ಯುರೇಟಿವ್ ಅರ್ಜಿಯಲ್ಲಿ, ಉತ್ತರಾಖಂಡ ಸರಕಾರ ಅಪರಾಧದ ಸಮಯದಲ್ಲಿ ಮೇಲ್ಮನವಿದಾರನಿಗೆ ಕೇವಲ 14 ವರ್ಷ ವಯಸ್ಸಾಗಿತ್ತು ಎಂಬುವುದನ್ನು ದೃಢಪಡಿಸಿತ್ತು. ಆದರೆ ಕ್ಯುರೇಟಿವ್ ಅರ್ಜಿ ವಜಾಗೊಂಡಿತ್ತು.
ಆ ಬಳಿಕ ಅರ್ಜಿದಾರ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾರೆ. 2012ರಲ್ಲಿ ರಾಷ್ಟ್ರಪತಿಗಳು ಅಪರಾಧಿಗೆ 60 ವರ್ಷ ವಯಸ್ಸು ತಲುಪುವವರೆಗೆ ಬಿಡುಗಡೆ ಮಾಡಬಾರದೆಂಬ ಷರತ್ತಿನೊಂದಿಗೆ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದೆ.
ಆದರೆ, ಆ ಬಳಿಕ ಅಪರಾಧಿಗೆ ವಯಸ್ಸನ್ನು ನಿರ್ಧರಿಸುವ ಆಸಿಫಿಕೇಶನ್(ossification test) ಪರೀಕ್ಷೆಯನ್ನು ನಡೆಸಲಾಗಿದೆ. ಅಪರಾಧದ ವೇಳೆ ಆತನಿಗೆ 14 ವರ್ಷ ವಯಸ್ಸಾಗಿತ್ತು ಎಂದು ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸಲಾಗಿದೆ.
2019ರಲ್ಲಿ ಅವರು ರಾಷ್ಟ್ರಪತಿಯ ಆದೇಶದ ವಿರುದ್ಧ ಉತ್ತರಾಖಂಡದ ಹೈಕೋರ್ಟ್ ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ರಾಷ್ಟ್ರಪತಿಗಳ ಆದೇಶದ ಮೇಲೆ ನ್ಯಾಯಾಂಗ ಪರಿಶೀಲನೆಯ ಸೀಮಿತ ವ್ಯಾಪ್ತಿಯನ್ನು ಉಲ್ಲೇಖಿಸಿ ಹೈಕೋರ್ಟ್ ರಿಟ್ ಅರ್ಜಿಯನ್ನು ವಜಾಗೊಳಿಸಿತ್ತು. ಹೈಕೋರ್ಟ್ನ ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಬಾಲಾಪರಾಧಿ ಕಾಯ್ದೆ 2015ರ ಸೆಕ್ಷನ್ 9(2) ಅನ್ನು ಗಮನಿಸದೆ ಇರುವುದಕ್ಕೆ ಹೈಕೋರ್ಟ್ ಅನ್ನು ದೂಷಿಸಿದೆ. ಅಪರಾಧಿಯನ್ನು ತಕ್ಷಣ ಬಿಡುಗಡೆಗೆ ಸೂಚಿಸಿದೆ.