ಭವಿಷ್ಯವು ‘ಯುದ್ಧ’ದಲ್ಲಿ ಇಲ್ಲ, ‘ಬುದ್ಧ’ನಲ್ಲಿ ಇದೆ : ಪ್ರಧಾನಿ ಮೋದಿ
ಭುವನೇಶ್ವರ: ಭಾರತದ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ಮೌಲ್ಯಗಳಿಗಾಗಿ ಜಗತ್ತು ಇಂದು ಅದರ ಮಾತುಗಳನ್ನು ಆಲಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ ಹಾಗೂ ‘‘ಭವಿಷ್ಯವು ‘ಯುದ್ಧ’ದಲ್ಲಿ ಇಲ್ಲ, ಬದಲಿಗೆ ‘ಬುದ್ಧ’ನಲ್ಲಿ ಇದೆ’’ ಎಂದಿದ್ದಾರೆ.
ಭುವನೇಶ್ವರದಲ್ಲಿ ನಡೆದ 18ನೇ ಪ್ರವಾಸಿ ಭಾರತೀಯ ದಿವಸ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವು ಪ್ರಜಾಪ್ರಭುತ್ವದ ತಾಯಿ ಮಾತ್ರವಲ್ಲ, ಪ್ರಜಾಪ್ರಭುತ್ವವು ಇಲ್ಲಿನ ಜನರ ಬದುಕಿನ ಭಾಗವಾಗಿದೆ ಎಂದು ಹೇಳಿದರು. ‘‘ಜಗತ್ತು ಇಂದು ಭಾರತದ ಮಾತುಗಳನ್ನು ಕೇಳುತ್ತಿದೆ. ಭಾರತವು ತನ್ನ ನಿಲುವುಗಳನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿರುವುದು ಮಾತ್ರವಲ್ಲ, ಬಡ ಮತ್ತು ಹಿಂದುಳಿದ ದೇಶಗಳ (ಗ್ಲೋಬಲ್ ಸೌತ್) ನಿಲುವುಗಳನ್ನೂ ಮುಂದಿಡುತ್ತಿದೆ’’ ಎಂದರು.
‘‘ಭಾರತಕ್ಕೆ ತನ್ನ ಪರಂಪರೆಯ ಶಕ್ತಿಯಿಂದಾಗಿ, ‘ಭವಿಷ್ಯವು ಯುದ್ಧದಲ್ಲಿ ಇಲ್ಲ, ಬದಲಿಗೆ ಬುದ್ಧ (ಶಾಂತಿ)ನಲ್ಲಿ ಇದೆ’ ಎಂಬುದಾಗಿ ಜಗತ್ತಿಗೆ ಹೇಳಲು ಸಾಧ್ಯವಾಗಿದೆ’’ ಎಂದು ಮೋದಿ ಅಭಿಪ್ರಾಯಪಟ್ಟರು.
‘‘ಜಗತ್ತು ಖಡ್ಗದ ಬಲದಿಂದ ಸಾಮ್ರಾಜ್ಯಗಳನ್ನು ವಿಸ್ತರಿಸುತ್ತಿದ್ದಾಗ, ಇಲ್ಲಿ ಸಾಮ್ರಾಟ ಅಶೋಕ ಶಾಂತಿಯ ಮಾರ್ಗವನ್ನು ಅನುಸರಿಸಿದನು. ಭಾರತದ ಈ ಪರಂಪರೆಯು, ಭವಿಷ್ಯವು ಯುದ್ಧದಲ್ಲಿ ಇಲ್ಲ, ಬುದ್ಧನಲ್ಲಿ ಇದೆ ಎಂಬುದಾಗಿ ಪ್ರತಿಪಾದಿಸಲು ಭಾರತಕ್ಕೆ ಶಕ್ತಿ ನೀಡಿದೆ’’ ಎಂದು ಪ್ರಧಾನಿ ನುಡಿದರು.
ಭಾರತೀಯ ಸಮುದಾಯಗಳು ತಾವು ವಾಸಿಸುವ ದೇಶಗಳಲ್ಲಿ ಭಾರತದ ರಾಯಭಾರಿಗಳಾಗಿವೆ ಎಂಬುದಾಗಿ ನಾನು ಭಾವಿಸಿದ್ದೇನೆ ಎಂದು ಅವರು ಹೇಳಿದರು.
ವಿದೇಶ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.