ಮಕ್ಕಳನ್ನು ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿಸಲು ನೂತನ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಮುಂದಾದ ಗುಜರಾತ್
ಅಹಮದಾಬಾದ್: ಸಾಮಾಜಿಕ ಮಾಧ್ಯಮಗಳು ಹಾಗೂ ಸ್ಮಾರ್ಟ್ ಫೋನ್ ಗಳ ನಕಾರಾತ್ಮಕ ಪರಿಣಾಮಗಳಿಂದ ದೂರ ಉಳಿಯುವಂತೆ ಮಾಡಲು ಶಿಕ್ಷಕರು, ಪೋಷಕರು ಹಾಗೂ ಮಕ್ಕಳಿಗೆ ನೂತನ ನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ಗುರುವಾರ ಗುಜರಾತ್ ಸರಕಾರ ಪ್ರಕಟಿಸಿದೆ.
ಮಕ್ಕಳ ಮೇಲೆ ಸಾಮಾಜಿಕ ಮಾಧ್ಯಮಗಳು ಹಾಗೂ ಸ್ಮಾರ್ಟ್ ಫೋನ್ ಗಳು ಬೀರುತ್ತಿರುವ ನಕಾರಾತ್ಮಕ ಪರಿಣಾಮದ ಬಗ್ಗೆ ನಾನು ಕಳವಳಗೊಂಡಿರುವುದಾಗಿ ಗುಜರಾತ್ ಸರಕಾರ ಹೇಳಿದೆ.
ಇಡೀ ದೇಶದಲ್ಲೇ ಇಂತಹ ನಿಯಮಗಳನ್ನು ಜಾರಿಗೊಳಿಸುತ್ತಿರುವ ಪ್ರಥಮ ರಾಜ್ಯ ಗುಜರಾತ್ ಆಗಿದೆ ಎಂದು ಹೇಳಿರುವ ಗುಜರಾತ್ ರಾಜ್ಯ ಶಿಕ್ಷಣ ಸಚಿವ ಪ್ರಫುಲ್ ಪನ್ಷೇರಿಯ, “ಮಕ್ಕಳು ಅಧಿಕ ಪ್ರಮಾಣದಲ್ಲಿ ಸಾಮಾಜಿಕ ಮಾಧ್ಯಮ ಹಾಗೂ ಸ್ಮಾರ್ಟ್ ಫೋನ್ ಗಳನ್ನು ಬಳಸುತ್ತಿರುವುದರಿಂದ, ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮವುಂಟಾಗುತ್ತಿದೆ. ಮೊಬೈಲ್ ಫೋನ್ ಬಳಕೆಯನ್ನು ತಗ್ಗಿಸಿ, ಆಟಗಳತ್ತ ಗಮನ ಕೇಂದ್ರೀಕರಿಸುವಂತೆ ಮಾಡಲು ಶಿಕ್ಷಕರು ಹಾಗೂ ಪೋಷಕರಿಗೆ ನೂತನ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ” ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮಕ್ಕಳ ವಿಶ್ವವಿದ್ಯಾಲಯ ಹಾಗೂ ಶಿಕ್ಷಕರ ವಿಶ್ವವಿದ್ಯಾಲಯದೊಂದಿಗೆ ಮನಶಾಸ್ತ್ರಜ್ಞರೊಂದಿಗೆ ಸಮಾಲೋಚನೆ ನಡೆಸಿದ ನಂತರ, ಮಕ್ಕಳು, ಪೋಷಕರು ಹಾಗೂ ಶಿಕ್ಷಕರಿಗೆ ಈ ಸುತ್ತೋಲೆಯನ್ನು ಹೊರಡಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.