ಎಷ್ಟೂ ಅಂತ ನಿಮ್ಮ ಪತ್ನಿಯ ಮುಖವನ್ನೇ ದಿಟ್ಟಿಸುತ್ತಾ ಕೂರುತ್ತೀರಿ?: ವಾರಕ್ಕೆ 90 ಗಂಟೆಯ ಕೆಲಸದ ಪರ ವಕಾಲತ್ತು ವಹಿಸಿದ ಎಲ್ ಆ್ಯಂಡ್ ಟಿ ಮುಖ್ಯಸ್ಥ!

Update: 2025-01-09 17:30 GMT

ಹೊಸದಿಲ್ಲಿ: ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅವರು ಕಿಡಿ ಹಚ್ಚಿದ ವಾರಕ್ಕೆ 70 ಗಂಟೆಗಳ ಕೆಲಸ ಅವಧಿಯ ಚರ್ಚೆಯ ಕಾವು ಆರುವ ಮುನ್ನವೇ, ವಾರಕ್ಕೆ 90 ಗಂಟೆಗಳ ಕೆಲಸ ಮಾಡಬೇಕು ಎಂದು ಕರೆ ನೀಡುವ ಮೂಲಕ ಲಾರ್ಸೆನ್ ಆ್ಯಂಡ್ ಟೂಬ್ರೊ ಮುಖ್ಯಸ್ಥ ಎಸ್.ಎನ್.ಸುಬ್ರಮಣ್ಯ ಮತ್ತೊಂದು ಸುತ್ತಿನ ಚರ್ಚೆಗೆ ನಾಂದಿ ಹಾಡಿದ್ದಾರೆ.

ಅವರು ರವಿವಾರ ಕೂಡಾ ಕೆಲಸ ಮಾಡಬೇಕು ಎಂದು ತಮ್ಮ ಉದ್ಯೋಗಿಗಳಿಗೆ ಸಲಹೆ ನೀಡುತ್ತಿರುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆ ವೀಡಿಯೊದಲ್ಲಿ, “ಎಷ್ಟು ಕಾಲ ನೀವು ನಿಮ್ಮ ಪತ್ನಿಯ ಮುಖವನ್ನೇ ದಿಟ್ಟಿಸುತ್ತಾ ಕೂರುತ್ತೀರಿ?” ಎಂದು ಸುಬ್ರಮಣ್ಯ ತಮ್ಮ ಉದ್ಯೋಗಿಗಳನ್ನು ಪ್ರಶ್ನಿಸುತ್ತಿರುವುದು ಸೆರೆಯಾಗಿದೆ. ನೀವು ಮನೆಯಲ್ಲಿ ಕಡಿಮೆ ಸಮಯ ಕಳೆದು, ಕಚೇರಿಯಲ್ಲಿ ಹೆಚ್ಚು ಸಮಯ ವ್ಯಯಿಸಿ ಎಂದು ಅವರು ಕರೆ ನೀಡುತ್ತಿರುವುದೂ ಆ ವೀಡಿಯೊದಲ್ಲಿ ಸೆರೆಯಾಗಿದೆ.

ಇದಕ್ಕೂ ಮುನ್ನ, ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಸಲಹೆ ನೀಡಿ, ಉದ್ಯೋಗ ಮತ್ತು ಜೀವನ ಸಮತೋಲನದ ಕುರಿತ ಚರ್ಚೆಗೆ ನಾಂದಿ ಹಾಡಿದ್ದರು. ಇದರ ಬೆನ್ನಿಗೇ ಲಾರ್ಸೆನ್ ಆ್ಯಂಡ್ ಟೂಬ್ರೊ ಮುಖ್ಯಸ್ಥ ಸುಬ್ರಮಣ್ಯ ಅವರು, “ನಾನು ನಿಮಗೆ ರವಿವಾರ ಕೆಲಸ ಮಾಡಿಸಲಾಗದ್ದಕ್ಕೆ ವಿಷಾದಿಸುತ್ತೇನೆ. ನೀವು ನಿಮ್ಮ ಕೆಲಸಗಳನ್ನು ರವಿವಾರ ಮಾಡುವುದು ಸಾಧ್ಯವಾದರೆ, ನಾನು ಬಹಳ ಸಂತೋಷ ಪಡುತ್ತೇನೆ. ಯಾಕೆಂದರೆ, ನಾನು ರವಿವಾರ ಕೂಡಾ ಕೆಲಸ ಮಾಡುತ್ತೇನೆ” ಎಂದು ಅವರು ಹೇಳಿತ್ತಿರುವುದು ವೀಡಿಯೊದಲ್ಲಿ ಕಂಡು ಬಂದಿದೆ.

ಈ ವೀಡಿಯೊಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದ್ದು, “ಎಷ್ಟು ಕಾಲ ಉದ್ಯೋಗಿಗಳು ಕಂಪ್ಯೂಟರ್ ಗಳತ್ತ ಹಾಗೂ ಕೊಬ್ಬಿದ ಮ್ಯಾನೇಜರ್ ಗಳತ್ತ ದಿಟ್ಟಿಸಿ ನೋಡುತ್ತಾ ಕೂರಲು ಸಾಧ್ಯ?” ಎಂದು ಬಳಕೆದಾರರೊಬ್ಬರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಇದರ ಬೆನ್ನಿಗೇ, ತನ್ನ ಅಧ್ಯಕ್ಷರ ಹೇಳಿಕೆ ಕುರಿತು ಸ್ಪಷ್ಟೀಕರಣ ನೀಡಿರುವ ಲಾರ್ಸೆನ್ ಆ್ಯಂಡ್ ಟೂಬ್ರೊ, ದೇಶಕ್ಕಾಗಿ ಅಸಾಧಾರಣ ಸಾಧನೆ ಮಾಡಲು ಅಸಾಧಾರಣ ಪ್ರಯತ್ನಗಳ ಅಗತ್ಯವಿದೆ ಎಂಬ ಹಿನ್ನೆಲೆಯಲ್ಲಿ ಅವರು ಇಂತಹ ಹೇಳಿಕೆ ನೀಡಿದ್ದಾರೆ ಎಂದು ಸಮಜಾಯಿಷಿ ನೀಡಿದೆ.

“ಈ ದಶಕ ಭಾರತದ ದಶಕ ಎಂದು ನಾವು ನಂಬಿದ್ದೇವೆ. ಈ ಸಮಯ ಒಗ್ಗಟ್ಟಾದ ಸಮರ್ಪಣಾ ಮನೋಭಾವವನ್ನು ಬಯಸುತ್ತಿದ್ದು, ಪ್ರಗತಿಯತ್ತ ಪ್ರಯತ್ನವನ್ನು ಬೇಡುತ್ತಿದೆ. ನಮ್ಮ ದೇಶದ ಪ್ರಗತಿಶೀಲ ದೇಶವಾಗಲು ನಮ್ಮಲ್ಲಿ ದೃಷ್ಟಿಕೋನಗಳ ವಿನಿಮಯ ಅಗತ್ಯ ಎಂಬುದನ್ನು ಮನವರಿಕೆ ಮಾಡಿಸುತ್ತಿದೆ” ಎಂದು ಲಾರ್ಸೆನ್ ಆ್ಯಂಡ್ ಟೂಬ್ರೊ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ.

ಸುಬ್ರಮಣ್ಯ ಪ್ರಕಾರ, “ಚೀನಾ ಜನರು ವಾರಕ್ಕೆ 90 ಗಂಟೆ ದುಡಿಯುತ್ತಾರೆ ಹಾಗೂ ಅಮೆರಿಕನ್ನರು ವಾರಕ್ಕೆ 50 ಗಂಟೆಗಳ ಕಾಲ ದುಡಿಯುತ್ತಾರೆ” ಎಂದು ಚೀನಾ ವ್ಯಕ್ತಿಯೊಬ್ಬರು ಅವರಿಗೆ ತಿಳಿಸಿದ್ದರಂತೆ. ಹೀಗಾಗಿ ಈ ಹೋಲಿಕೆಯನ್ನು ನೀಡಿರುವ ಸುಬ್ರಮಣ್ಯ, ಇದೇ ಬಗೆಯ ಕೆಲಸ ಸಂಸ್ಕೃತಿಯನ್ನು ಪಾಲಿಸುವಂತೆ ಲಾರ್ಸೆನ್ ಆ್ಯಂಡ್ ಟೂಬ್ರೊ ಉದ್ಯೋಗಿಗಳಿಗೆ ಹುರಿದುಂಬಿಸಿದ್ದಾರೆ.

ಕೆಲಸ ಮತ್ತು ಬದುಕಿನ ನಡುವಿನ ಸಮತೋಲನ ಅವರವರ ವೈಯಕ್ತಿಕ ಆಯ್ಕೆ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ. “ನಿಮ್ಮ ಕೆಲಸ ಮತ್ತು ಬದುಕಿನ ನಡುವಿನ ಸಮತೋಲದ ದೃಷ್ಟಿಕೋನವನ್ನು ನನ್ನ ಮೇಲೆ ಹೇರಬಾರದು ಹಾಗೂ ನನ್ನ ದೃಷ್ಟಿಕೋನವನ್ನು ನಿಮ್ಮ ಮೇಲೆ ಹೇರಬಾರದು. ಒಂದು ವೇಳೆ ಯಾರಾದರೂ ತಮ್ಮ ಕುಟುಂಬದೊಂದಿಗೆ 8 ಗಂಟೆ ಕಾಲ ಕಳೆಯುವುದರೊಂದಿಗೆ ಸಂತಸ ಅನುಭವಿಸಿದರೆ, ಅಥವಾ ಮತ್ತೊಬ್ಬರು ತಮ್ಮ ಕುಟುಂಬದೊಂದಿಗೆ 4 ಗಂಟೆಗಳ ಕಾಲ ಕಳೆಯುವುದರೊಂದಿಗೆ ಸಂತಸ ಅನುಭವಿಸಿದರೆ, ಅದು ಅವರವರ ಕೆಲಸ ಮತ್ತು ಬದುಕಿನ ನಡುವಿನ ಸಮತೋಲನ” ಎಂದೂ ಅವರು ವ್ಯಾಖ್ಯಾನಿಸಿದ್ದಾರೆ.

ಇದಕ್ಕೂ ಮುನ್ನ, ವಾರಕ್ಕೆ 70 ಗಂಟೆಗಳ ಕೆಲಸ ಮಾಡಿದರೆ, ಪತಿಯನ್ನು ಪತ್ನಿ ತೊರೆದು ಓಡಿ ಹೋಗುತ್ತಾಳೆ ಎಂದು ಅದಾನಿ ಸಮೂಹ ಸಂಸ್ಥೆಯ ಮುಖ್ಯಸ್ಥ ಗೌತಮ್ ಅದಾನಿ, ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿಯವರ ವಾರಕ್ಕೆ 70 ಗಂಟೆಗಳ ಪ್ರಸ್ತಾವವನ್ನು ಆಕ್ಷೇಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News