ಹೈದರಾಬಾದ್ | ಅಸದುದ್ದೀನ್ ಉವೈಸಿಯವರ AIMIM ಭದ್ರಕೋಟೆಯಲ್ಲಿ ಮಹಿಳಾ ಮಣಿಗಳ ಸವಾಲು

Update: 2024-03-26 16:09 GMT

ಅಸಾದುದ್ದೀನ್ ಉವೈಸಿ | Photo: PTI

ಹೈದರಾಬಾದ್ : 2004 ರಿಂದ ಸತತವಾಗಿ ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಗೆಲ್ಲುತ್ತಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಅವರನ್ನು ಎದುರಿಸಲು ಈ ಬಾರಿ ಪ್ರತಿಸ್ಪರ್ಧಿ ಪಕ್ಷಗಳು ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿವೆ. ಮೊದಲು ಬಿಜೆಪಿಯು ತನ್ನ ಅಭ್ಯರ್ಥಿಯಾಗಿ ಮಾಧವಿ ಲತಾ ಅವರನ್ನು ಆರಿಸಿದ್ದರೆ, ಈಗ ಕಾಂಗ್ರೆಸ್‌ ಪಕ್ಷವೂ ಶಹನಾಜ್ ತಬಸ್ಸುಮ್ ಅವರನ್ನು ಆಯ್ಕೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ ಎಂದು indianexpress.com ವರದಿ ಮಾಡಿದೆ.

ತೆಲಂಗಾಣ ವಕ್ಫ್ ಬೋರ್ಡ್ ಸಿಇಒ ಸೈಯದ್ ಖಾಜಾ ಮೊಯಿನುದ್ದೀನ್ ಅವರ ಪತ್ನಿ, ಸುಪ್ರೀಂ ಕೋರ್ಟ್ ವಕೀಲೆ ಶಹನಾಜ್ ತಬಸ್ಸುಮ್ ಅವರ ಹೆಸರನ್ನು ಪಕ್ಷವು ಅಂತಿಮಗೊಳಿಸಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ನಗರದ ವಿರಿಂಚಿ ಆಸ್ಪತ್ರೆಯ ಅಧ್ಯಕ್ಷೆ ಕೆ ಮಾಧವಿ ಲತಾ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಈ ಹಿಂದೆ ಘೋಷಿಸಿತ್ತು.

ಹೈದರಾಬಾದ್‌ ಲೋಕಸಭಾ ಕ್ಷೇತ್ರದಲ್ಲಿ ಉವೈಸಿ ಪ್ರಭಾವವನ್ನು ಗಮನಿಸಿದರೆ, ಈ ಲೋಕಸಭೆ ಚುನಾವಣೆಯಲ್ಲಿ ಸೋಲಿಸಲು ಕಠಿಣವಾಗಿರುವ ಸ್ಪರ್ಧಿಗಳಲ್ಲಿ ಅವರೂ ಒಬ್ಬರು. 2019ರ ಚುನಾವಣೆಯಲ್ಲಿ ಉವೈಸಿ ಬಿಜೆಪಿಯ ಭಗವಂತರಾವ್ ಪವಾರ್ ಅವರನ್ನು 2.82 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು.

ತೆಲಂಗಾಣ ಕಾಂಗ್ರೆಸ್ ನಾಯಕರು ತಬಸ್ಸುಮ್ ಅವರು ಬದಲಾವಣೆಗಾಗಿ ನೋಡುತ್ತಿರುವ ಮತದಾರರನ್ನು ತಲುಪಬಹುದು ಎಂದು ಹೇಳುತ್ತಾರೆ. ತಬಸ್ಸುಮ್ ಅವರು ಅಖಿಲ ಭಾರತ ಆಝಾದ್ ಕಾಂಗ್ರೆಸ್ ಪಕ್ಷದ ಸ್ಥಾಪಕಿ ಮತ್ತು ರಾಷ್ಟ್ರೀಯ ಅಧ್ಯಕ್ಷೆಯೂ ಆಗಿದ್ದಾರೆ. ಈ ಪಕ್ಷವು ಇದುವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದ, ನೋಂದಾಯಿಸದ ರಾಜಕೀಯ ಪಕ್ಷವೂ ಹೌದು.

ಲತಾ ಅವರು ಸ್ಥಳೀಯರಾಗಿದ್ದು, ಹೈದರಾಬಾದ್‌ನ ಯಾಕುತ್‌ಪುರ ಪ್ರದೇಶದಲ್ಲಿ ಬೆಳೆದು ಮುಸ್ಲಿಂ ಸಮುದಾಯ ಸೇರಿದಂತೆ ಅಲ್ಲಿನ ಜನರ ನಡುವೆ ಕೆಲಸ ಮಾಡುತ್ತಿರುವುದರಿಂದ ಅಲ್ಲಿನ ಜನರ ಬೆಂಬಲ ಪಡೆಯಬಹುದು ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ. ಆರೆಸ್ಸೆಸ್‌ ಸಂಪರ್ಕ ಹೊಂದಿದ್ದ ಲತಾ ಅವರು ತ್ರಿವಳಿ ತಲಾಖ್ ವಿರುದ್ಧ ವ್ಯಾಪಕವಾಗಿ ಪ್ರಚಾರ ಮಾಡಿದ್ದಾರೆ. ʼಮದರಸಾಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯʼ ಮತ್ತು ʼದೇವಾಲಯಗಳ ಅತಿಕ್ರಮಣʼ ಕುರಿತ ಅವರ ಭಾಷಣಗಳು ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯವಾಗಿವೆ.

ʼಕಟ್ಟಾ ಹಿಂದೂ ಮಹಿಳೆʼ ಎಂಬ ಕೆ. ಮಾಧವಿ ಲತಾ ಅವರ ಚಿತ್ರಣ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರದ ಹಿಂದೂ ಮತದಾರರನ್ನು ಸೆಳೆಯಲು ಬಿಜೆಪಿಗೆ ಸಹಾಯ ಮಾಡಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಎಐಎಂಐಎಂಗೆ ಪರ್ಯಾಯವನ್ನು ಹುಡುಕುತ್ತಿರುವ ಮಹಿಳೆಯರಿಂದ ಬೆಂಬಲವನ್ನು ಪಡೆಯಲು ಸಾಧ್ಯವಾಗಲಿದೆ ಎಂಬ ಯೋಜನೆಯೂ ಪಕ್ಷಕ್ಕಿದ್ದಂತಿದೆ. 2014 ಮತ್ತು 2019 ರಲ್ಲಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಪಕ್ಷದ ಹಿರಿಯ ನಾಯಕ ಭಗವಂತ್ ರಾವ್ ಅವರ ಸ್ಪರ್ಧೆಯಿಂದ ಬದಲಾವಣೆ ಬಯಸಿರುವ ಮತದಾರರಿಗೆ ಹೊಸ ಮುಖ ನೀಡಿದಂತಾಗುತ್ತದೆ ಎನ್ನುವ ಚಿಂತನೆ ಬಿಜೆಪಿ ಪಕ್ಷದ್ದು ಎನ್ನಲಾಗಿದೆ.

ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಮುಖ್ಯಸ್ಥ, ಹಿರಿಯ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಅವರ ಬೆಂಬಲವು ಮಾಧವಿ ಲತಾ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಪ್ರಮುಖ ಪಾತ್ರ ವಹಿಸಿದೆ ಎಂದು ಮೂಲಗಳು ತಿಳಿಸಿವೆ.

ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಲತಾ, “ಹಿಂದೂ-ಮುಸ್ಲಿಂ ಚುನಾವಣಾ ವಿಷಯವಾಗಿದ್ದರೆ ಬಿಜೆಪಿ ನನ್ನನ್ನು ಆಯ್ಕೆ ಮಾಡುತ್ತಿರಲಿಲ್ಲ. ನಾನು ಬಹಳಷ್ಟು ಮುಸ್ಲಿಮರೊಂದಿಗೆ ಕೆಲಸ ಮಾಡುತ್ತಿದ್ದೇನೆ. ಅವರೆಡೆಗೆ ನಾನು ಸಹಾನುಭೂತಿ ಹೊಂದಿದ್ದೇನೆ ಎಂದು ಪಕ್ಷಕ್ಕೆ ತಿಳಿದಿದೆ. ನಾನು ತ್ರಿವಳಿ ತಲಾಖ್‌ನ ಕಟು ಟೀಕಾಕಾರಳಾಗಿದ್ದೆ. ದೇವಸ್ಥಾನಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡುವ ನಾನು, ಮುಸ್ಲಿಂ ಮಹಿಳೆಯ ವಿಚಾರ ಬಂದಾಗಲೂ ಅದೇ ರೀತಿ ನ್ಯಾಯ ಒದಗಿಸುತ್ತೇನೆ”, ಎಂದು ಅವರು ಹೇಳಿದರು.

AIMIM ಭದ್ರ ಕೋಟೆ

ಹೈದರಾಬಾದ್ ಲೋಕಸಭಾ ಕ್ಷೇತ್ರವನ್ನು AIMIM ಸಂಸ್ಥಾಪಕ ಮತ್ತು ಉವೈಸಿಯವರ ತಂದೆ ಸಲಾವುದ್ದೀನ್ ಅವರು 1984 ರಿಂದ 2004 ರವರೆಗೆ ಪ್ರತಿನಿಧಿಸುತ್ತಿದ್ದರು. ಅವರ ಬಳಿಕ ಉವೈಸಿ ಹೈದರಾಬಾದ್ ಸಂಸದರಾಗಿದ್ದಾರೆ.

ಉವೈಸಿ ಅವರು ಈ ಕ್ಷೇತ್ರದಲ್ಲಿ ತಮ್ಮ ದೊಡ್ಡ ಗೆಲುವಿನ ಅಂತರವನ್ನು ಭದ್ರವಾಗಿ ಉಳಿಸಿಕೊಂಡಿದ್ದಾರೆ. 2004 ರಲ್ಲಿ ಅವರ ಮೊದಲ ಲೋಕಸಭಾ ಚುನಾವಣೆಯಲ್ಲಿ 2.02 ಲಕ್ಷ ಮತಗಳ ಅಂತರದಿಂದ ಗೆದ್ದರು. 2009 ರಲ್ಲಿ ಅವರ ಪ್ರತಿಸ್ಪರ್ಧಿಯಾಗಿದ್ದ ಉರ್ದು ದಿನಪತ್ರಿಕೆ ಸಿಯಾಸತ್‌ನ ಸಂಪಾದಕ ಜಾಹಿದ್ ಅಲಿ ಖಾನ್ ತೆಲುಗು ದೇಶಂ ಪಕ್ಷದಿಂದ (ಟಿಡಿಪಿ) ಕಣಕ್ಕಿಳಿದಾಗಲೂ 1.13 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದರು. 2014 ರಲ್ಲಿ ಉವೈಸಿ ಅವರು ಬಿಜೆಪಿಯ ಪವಾರ್ ಅವರನ್ನು 2.02 ಲಕ್ಷ ಮತಗಳಿಂದ ಸೋಲಿಸಿದರು. 2019 ರಲ್ಲಿ ಅವರ ವಿರುದ್ಧ ತಮ್ಮ ಗೆಲುವಿನ ಅಂತರವನ್ನು ಹೆಚ್ಚಿಸಿದರು.

ಕಳೆದ ವರ್ಷ ನಡೆದ ವಿಧಾನಸಾಭಾ ಚುನಾವಣೆಯಲ್ಲಿ ಹೈದರಾಬಾದ್ ಲೋಕಸಭಾ ಕ್ಷೇತ್ರದ ಅಧೀನದಲ್ಲಿರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಏಳನ್ನು ಎಐಎಂಐಎಂ ಗೆದ್ದುಕೊಂಡಿತು. ಏಕೈಕ ವಿಧಾನ ಸಭಾ ಕ್ಷೇತ್ರ ಗೋಶಾಮಹಲ್ ಕ್ಷೇತ್ರವನ್ನು ಬಿಜೆಪಿ ಗೆದ್ದಿದೆ. 2014ರಿಂದ ಗೋಶಾಮಹಲ್ ನಲ್ಲಿ ಬಿಜೆಪಿಯ ಟಿ.ರಾಜಾಸಿಂಗ್‌ ಪ್ರಾಬಲ್ಯವಿದೆ. AIMIM ಗೆದ್ದ ಏಳು ಅಸೆಂಬ್ಲಿ ಕ್ಷೇತ್ರಗಳಲ್ಲಿ, ಅತಿ ಹೆಚ್ಚು ಗೆಲುವಿನ ಅಂತರವಿರುವ ಕ್ಷೇತ್ರ ಚಂದ್ರಾಯನಗುಟ್ಟ. ಅಲ್ಲಿ ಪಕ್ಷವು 81,660 ಮತಗಳು ಮತಗಳ ಅಂತರದಿಂದ ಗೆದ್ದಿದೆ. ಈ ಕ್ಷೇತ್ರವನ್ನು 1999 ರಿಂದ ಉವೈಸಿ ಅವರ ಸಹೋದರ ಅಕ್ಬರುದ್ದೀನ್ ಉವೈಸಿ ಪ್ರತಿನಿಧಿಸುತ್ತಿದ್ದಾರೆ.

ʼಚಾರ್‌ ಮಿನಾರ್ʼ ನಗರದಲ್ಲಿ AIMIM ಹಿಡಿತವು 1967ರ ವಿಧಾನಸಭಾ ಚುನಾವಣೆಯಿಂದಲೇ ಕಂಡು ಬರುತ್ತದೆ. 1994 ರಲ್ಲಿ, ಅಸದುದ್ದೀನ್ ಉವೈಸಿ ಚಾರ್ಮಿನಾರ್ ವಿಧಾನಸಭಾ ಕ್ಷೇತ್ರವನ್ನು ಗೆಲ್ಲುವ ಮೂಲಕ ಚುನಾವಣಾ ಚೊಚ್ಚಲ ಪ್ರವೇಶ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News