"ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆಯ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಿ": ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಗೆ ಕೇಜ್ರಿವಾಲ್ ಪತ್ರ
ಹೊಸದಿಲ್ಲಿ: ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಎನ್‌ಡಿಎ ಮಿತ್ರಪಕ್ಷ ಜೆಡಿಯು ಮತ್ತು ಟಿಡಿಪಿಯ ನಾಯಕರಾದ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರಿಗೆ ಗುರುವಾರ ಪತ್ರ ಬರೆದಿದ್ದು, ಬಿ.ಆರ್. ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಜ್ರಿವಾಲ್, ಅಂಬೇಡ್ಕರ್ ಅವರನ್ನು ಪ್ರೀತಿಸುವವರು ಭಾರತದ ಸಂವಿಧಾನದ ಶಿಲ್ಪಿಯನ್ನು "ಅವಮಾನಿಸಿದ" ಬಿಜೆಪಿಯನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಜನರು ಭಾವಿಸುತ್ತಾರೆ. ಈ ಬಗ್ಗೆ ಯೋಚಿಸಿ ಎಂದು ನಿತೀಶ್ ಕುಮಾರ್ ಮತ್ತು ನಾಯ್ಡು ಅವರನ್ನು ಕೇಳಿಕೊಂಡಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ ಅಮಿತ್ ಷಾ ಅವರ ಹೇಳಿಕೆಯು "ಅಗೌರವ" ಮಾತ್ರವಲ್ಲದೆ ಅವರ ಮತ್ತು ಸಂವಿಧಾನದ ಬಗ್ಗೆ ಬಿಜೆಪಿಯ ದೃಷ್ಟಿಕೋನವನ್ನು ಬಹಿರಂಗಪಡಿಸಿದೆ ಎಂದು ಕೇಜ್ರಿವಾಲ್ ಇಬ್ಬರು ಮುಖ್ಯಮಂತ್ರಿಗಳಿಗೆ ಬರೆದ ಪತ್ರಗಳಲ್ಲಿ ತಿಳಿಸಿದ್ದಾರೆ.
"ಬಾಬಾಸಾಹೇಬ್ ಬಗ್ಗೆ ಸಂಸತ್ತಿನಲ್ಲಿ ಶಾ ನೀಡಿದ ಹೇಳಿಕೆ ಇಡೀ ದೇಶವನ್ನು ದಂಗುಬಡಿಸುವಂತೆ ಮಾಡಿದೆ. 'ಅಂಬೇಡ್ಕರ್-ಅಂಬೇಡ್ಕರ್ ಜಪ ಮಾಡುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿದೆ' ಎಂಬ ಅವರ ಹೇಳಿಕೆ ಅಗೌರವ ಮಾತ್ರವಲ್ಲ, ಬಾಬಾಸಾಹೇಬ್ ಮತ್ತು ನಮ್ಮ ಸಂವಿಧಾನದ ಬಗ್ಗೆ ಬಿಜೆಪಿಯ ದೃಷ್ಟಿಕೋನವನ್ನು ಬಹಿರಂಗಪಡಿಸುತ್ತದೆ" ಎಂದು ಕೇಜ್ರಿವಾಲ್ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಆಂಧ್ರಪ್ರದೇಶದ ಚಂದ್ರ ಬಾಬು ನಾಯ್ಡು ಅವರ ಟಿಡಿಪಿ ಬಿಜೆಪಿ ನೇತೃತ್ವದ ಕೇಂದ್ರದಲ್ಲಿ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಎನ್‌ಡಿಎ) ಮಿತ್ರ ಪಕ್ಷಗಳಾಗಿವೆ.
"ಸಂವಿಧಾನದ ಶಿಲ್ಪಿ ಮತ್ತು ಅಂಚಿನಲ್ಲಿರುವವರ ಹಕ್ಕುಗಳ ಹೋರಾಟಗಾರ ಬಾಬಾಸಾಹೇಬ್ ವಿರುದ್ಧ ಇಂತಹ ಹೇಳಿಕೆ ನೀಡಲು ಬಿಜೆಪಿಗೆ ಹೇಗೆ ಧೈರ್ಯವಿದೆ? ಇದು ದೇಶಾದ್ಯಂತ ಲಕ್ಷಾಂತರ ಜನರ ಭಾವನೆಗಳನ್ನು ಘಾಸಿಗೊಳಿಸಿದೆ" ಎಂದು ಕೇಜ್ರಿವಾಲ್ ಹೇಳಿದ್ದಾರೆ.
"ಬಾಬಾಸಾಹೇಬ್ ಕೇವಲ ನಾಯಕರಲ್ಲ, ಅವರು ನಮ್ಮ ರಾಷ್ಟ್ರದ ಆತ್ಮ. ಬಿಜೆಪಿಯ ಈ ಹೇಳಿಕೆಯ ನಂತರ, ನೀವು ಈ ವಿಷಯದ ಬಗ್ಗೆಯೂ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತೀರಿ ಎಂದು ಜನರು ನಿರೀಕ್ಷಿಸುತ್ತಾರೆ" ಎಂದು ದಿಲ್ಲಿ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರನ್ನು ಆಗ್ರಹಿಸಿದ್ದಾರೆ.