ಮುಹಮ್ಮದ್ ಝುಬೇರ್ ಎಫ್‌ಐಆರ್ ದಾಖಲಿಸುವ ಬದಲು ನರಸಿಂಹಾನಂದ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದೇಕೆ?: ಅಲಹಾಬಾದ್ ಹೈಕೋರ್ಟ್ ಪ್ರಶ್ನೆ

Update: 2024-12-19 12:28 GMT

ಮುಹಮ್ಮದ್ ಝುಬೇರ್ | PC: @zoo_bear/X

ಅಲಹಾಬಾದ್: ಆಲ್ಟ್ ನ್ಯೂಸ್ ಸಹಸ್ಥಾಪಕ ಮುಹಮ್ಮದ್ ಝುಬೇರ್ ಎಫ್‌ಐಆರ್ ದಾಖಲಿಸುವ ಬದಲು ಹಿಂದುತ್ವವಾದಿ ಯತಿ ನರಸಿಂಹಾನಂದರ ದ್ವೇಷ ಭಾಷಣ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದೇಕೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಬುಧವಾರ ಪ್ರಶ್ನಿಸಿದೆ.

ನರಸಿಂಹಾನಂದ ಕುರಿತು ಪೋಸ್ಟ್‌ಗಾಗಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಬಂಧನದಿಂದ ರಕ್ಷಣೆ ಕೋರಿ ಝುಬೇರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ ಮತ್ತು ರಾಮಮನೋಹರ ನಾರಾಯಣ ಮಿಶ್ರಾ ಅವರ ಪೀಠವು, ಝುಬೇರ್ ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದನ್ನು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ತೋರಿಸಿವೆ ಎಂದು ಮೌಖಿಕವಾಗಿ ಅಭಿಪ್ರಾಯಿಸಿತು.

‘ಈ ವ್ಯಕ್ತಿ(ನರಸಿಂಹಾನಂದ) ಹಾಸ್ಯಾಸ್ಪದವಾಗಿ ವರ್ತಿಸುತ್ತಿದ್ದರೆ ಪೋಲಿಸರ ಬಳಿ ಹೋಗುವ ಬದಲು ನೀವು ಇನ್ನೂ ಹೆಚ್ಚು ಹಾಸ್ಯಾಸ್ಪದವಾಗಿ ವರ್ತಿಸುತ್ತೀರಾ?’ ಎಂದು ಝುಬೇರ್ ರನ್ನು ಪ್ರಶ್ನಿಸಿದ ನ್ಯಾಯಾಲಯವು,‘ಅವರ ಭಾಷಣ,ಮುಖ ನಿಮಗೆ ಇಷ್ಟವಾಗದಿದ್ದರೆ ನೀವು ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು’ ಎಂದು ಹೇಳಿತು.

ತನ್ನ ಕಕ್ಷಿದಾರರು ಭಾಷಣದ ಕುರಿತು ಪೋಸ್ಟ್ ಮಾಡುವ ಮೂಲಕ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಲಾಯಿಸಿದ್ದರು, ಅಷ್ಟೇ ಎಂದು ವಾದಿಸಿದ ಝುಬೇರ್ ಪರ ವಕೀಲರು, ನರಸಿಂಹಾನಂದ ಭಾಷಣದ ಕುರಿತು ಹಲವಾರು ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳೂ ಇವೆ ಎಂದು ನಿವೇದಿಸಿದರು.

ನರಸಿಂಹಾನಂದ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತಿರುವ ಆರೋಪದಲ್ಲಿ ಅ.7ರಂದು ಉತ್ತರ ಪ್ರದೇಶ ಪೋಲಿಸರು ಝುಬೇರ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ಉತ್ತರ ಪ್ರದೇಶದ ಘಾಝಿಯಾಬಾದ್‌ನ ದಾಸ್ನಾ ದೇವಿ ದೇವಸ್ಥಾನದ ಅರ್ಚಕರಾಗಿರುವ ನರಸಿಂಹಾನಂದ ಸೆ.29ರಂದು ತನ್ನ ಪ್ರವಚನದಲ್ಲಿ ಪ್ರವಾದಿ ಮುಹಮ್ಮದ್‌ರ ಕುರಿತು ಮಾನಹಾನಿಕರ ಹೇಳಿಕೆಯನ್ನು ನೀಡಿದ್ದರು ಎಂದು ವರದಿಯಾಗಿದ್ದು,ಇದರ ವಿರುದ್ಧ ಹಲವಾರು ನಗರಗಳಲ್ಲಿ ಮುಸ್ಲಿಮ್ ಗುಂಪುಗಳು ಪ್ರತಿಭಟನೆಗಳನ್ನು ನಡೆಸಿದ್ದವು.

ಅ.3ರಂದು ನರಸಿಂಹಾನಂದರ ಭಾಷಣದ ವೀಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದ ಝುಬೇರ್,ಅವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು.

ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ನರಸಿಂಹಾನಂದ ವಿರುದ್ಧ ಹಲವಾರು ಎಫ್‌ಐಆರ್‌ಗಳೂ ದಾಖಲಾಗಿವೆ.

ಬುಧವಾರ ಅಲಹಾಬಾದ್ ನ್ಯಾಯಾಲಯವು ಭಾರತೀಯ ನ್ಯಾಯ ಸಂಹಿತಾದ ಕಲಂ 152ರಡಿ ಭಾರತದ ಸಾರ್ವಭೌಮತೆ,ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನೊಡ್ಡಿದ್ದ ಆರೋಪಗಳಲ್ಲಿ ಝುಬೇರ್ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಕಾರಣವನ್ನು ಕೇಳಿ ಉತ್ತರ ಪ್ರದೇಶ ಸರಕಾರಕ್ಕೆ ನೋಟಿಸ್‌ನ್ನೂ ಹೊರಡಿಸಿದೆ.

ಅಕ್ಟೋಬರ್‌ನಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಈ ಅಪರಾಧಗಳನ್ನು ಸೇರಿಸಲಾಗಿದೆ ಎಂದು ಪೋಲಿಸರು ನ.27ರಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಎಫ್‌ಐಆರ್‌ನಲ್ಲಿ ಕಲಂ 152ನ್ನು ಸೇರಿಸಿದ್ದನ್ನು ಟೀಕಿಸಿದ್ದ ಹಲವಾರು ಮಾನವ ಹಕ್ಕು ಸಂಘಟನೆಗಳು ಮತ್ತು ಮಾಧ್ಯಮ ಸಂಸ್ಥೆಗಳು,ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಗ್ರಹಿಸಲು ಈ ಕಲಮ್‌ನ ದುರುಪಯೋಗವಾಗಿದೆ ಎಂದು ಬಣ್ಣಿಸಿದ್ದವು.

ಪ್ರಕರಣದ ಮುಂದಿನ ವಿಚಾರಣೆಯು ಡಿ.20ರಂದು ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News