ಅಮಿತ್ ಶಾಗೆ ಅಧಿಕಾರದಲ್ಲಿ ಮುಂದುವರಿಯುವ ಹಕ್ಕಿಲ್ಲ: ಸಿಪಿಎಂ
ಹೊಸದಿಲ್ಲಿ: ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಮಾನಕರ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಗುರುವಾರ ತರಾಟೆಗೆ ತೆಗೆದುಕೊಂಡಿರುವ ಸಿಪಿಐ (ಎಂ), ಅವರು ತಮ್ಮ ಹುದ್ದೆಯಲ್ಲಿ ಮುಂದುವರಿಯುವ ಯಾವುದೇ ಹಕ್ಕಿಲ್ಲ ಎಂದಿದೆ.
ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸಿಪಿಐ (ಎಂ)ಪಾಲಿಟ್ ಬ್ಯೂರೊ, ಅಂಬೇಡ್ಕರ್ ಬಗ್ಗೆ ಶಾ ಅವರು ನೀಡಿದ ಹೇಳಿಕೆಯನ್ನು ಅವಹೇಳನಾಕಾರಿ ಎಂದು ಕರೆದಿದೆ. ಅಲ್ಲದೆ, ಇದು ಅವರ ಮನುವಾದಿ ದೃಷ್ಟಿಕೋನವನ್ನು ಬಿಂಬಿಸಿದೆ ಎಂದು ಪ್ರತಿಪಾದಿಸಿದೆ.
‘‘ರಾಜ್ಯಸಭೆಯಲ್ಲಿ ಸಂವಿಧಾನದ 75ನೇ ವರ್ಷಾಚರಣೆಯ ದಿನ ನಡೆದ ಚರ್ಚೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ನೀಡಿರುವ ಹೇಳಿಕೆ ದೇಶಾದ್ಯಂತದ ಜನರ ಭಾವನೆಗೆ ಧಕ್ಕೆ ಉಂಟು ಮಾಡಿದೆೆ’’ ಎಂದು ಸಿಪಿಐ (ಎಂ)ನ ಹೇಳಿಕೆ ತಿಳಿಸಿದೆ.
‘‘ಭಾರತದ ಸಂವಿಧಾನದ ಕುರಿತು ಮಾತನಾಡುವಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಹೇಳಿಕೆ ನೀಡಿದ್ದಾರೆ. ಇದು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಕುರಿತು ಅಮಿತ್ ಶಾ ಅವರ ಮನುವಾದಿ ದೃಷ್ಟಿಕೋನವನ್ನು ಬಿಂಬಿಸಿದೆ. ಅಮಿತ್ ಶಾ ಅವರು ಗೃಹ ಸಚಿವರ ಹುದ್ದೆಯಲ್ಲಿ ಮುಂದುವರಿಯುವ ಯಾವುದೇ ಹಕ್ಕಿಲ್ಲ’’ ಎಂದು ಸಿಪಿಐ (ಎಂ) ತಿಳಿಸಿದೆ.