‘ಜೈ ಭೀಮ್’ ಘೋಷಣೆ ಕೂಗುವಂತೆ ಬಿಜೆಪಿ ಸಂಸದರಿಗೆ ಪ್ರಿಯಾಂಕಾ ಗಾಂಧಿ ಸವಾಲು

Update: 2024-12-19 15:58 GMT

 ಪ್ರಿಯಾಂಕಾ ಗಾಂಧಿ | PTI 

ಹೊಸದಿಲ್ಲಿ: ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸಿದೆ ಎಂದು ಆರೋಪಿಸಿ ತನ್ನ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಸಂಸದರ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಸಂಸತ್ತಿನ ಆವರಣದಲ್ಲಿ ‘ಜೈ ಭೀಮ್’ ಘೋಷಣೆಯನ್ನು ಕೂಗುವಂತೆ ಅವರಿಗೆ ಸವಾಲು ಹಾಕಿದರು.

ಕೇಂದ್ರ ಗೃಹಸಚಿವ ಅಮಿತ್ ಶಾ ಬಳಸಿದ ಭಾಷೆಯು ಬಿಜೆಪಿಯ ನಿಜವಾದ ಬಣ್ಣವನ್ನು ಪ್ರತಿಬಿಂಬಿಸಿದೆ,ಹೀಗಾಗಿ ಜನರು ಅದು ಸಂವಿಧಾನವನ್ನು ರಕ್ಷಿಸುತ್ತಿದೆ ಎಂಬ ತಪ್ಪು ಗ್ರಹಿಕೆಗೆ ಒಳಗಾಗಬಾರದು ಎಂದು ಹೇಳಿದ ಪ್ರಿಯಾಂಕಾ, ‘‘ಪ್ರತಿ ದಿನ ಬೆಳಿಗ್ಗೆ 10ರಿಂದ 11ರವರೆಗೆ ನಾವು ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ. ಈವರೆಗೆ ಏನೂ ಆಗಿರಲಿಲ್ಲ. ನಮ್ಮನ್ನು ತಡೆಯುತ್ತಿದ್ದವರಿಗೆ ‘ಜೈ ಭೀಮ್’ ಘೋಷಣೆ ಕೂಗುವಂತೆ ನಾವು ಕೇಳಿಕೊಂಡಿದ್ದೆವು, ನಾವೂ ಬೇರೆ ಏನನ್ನೂ ಹೇಳಿರಲಿಲ್ಲ. ನಾವು ನಮ್ಮ ಸಂವಿಧಾನಕ್ಕಾಗಿ ಘೋಷಣೆಗಳನು ಕೂಗುತ್ತಲೇ ಇದ್ದೆವು. ಅವರಿಗೆ ‘ಜೈ ಭೀಮ್’ ಎಂದು ಹೇಳಲೂ ಸಾಧ್ಯವಿಲ್ಲ. ಇಲ್ಲಿ ‘ಜೈ ಭೀಮ್’ಘೋಷಣೆ ಕೂಗುವಂತೆ ನಾನು ಅವರಿಗೆ ಸವಾಲು ಹಾಕುತ್ತೇನೆ’’ ಎಂದು ಹೇಳಿದರು.

‘ದೈಹಿಕ ಹಲ್ಲೆ’ ಆರೋಪಗಳ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಸಮರ್ಥಿಸಿಕೊಂಡ ಪ್ರಿಯಾಂಕಾ, ‘‘ರಾಹುಲ್ ಅಂಬೇಡ್ಕರ್ ಚಿತ್ರವನ್ನು ಹಿಡಿದುಕೊಂಡು ‘ಜೈ ಭೀಮ್’ ಘೋಷಣೆ ಕೂಗುತ್ತ ಶಾಂತಿಯುತವಾಗಿ ಸಂಸತ್ ಪ್ರವೇಶಿಸುತ್ತಿದ್ದರು. ಅವರನ್ನು ಒಳಗೆ ಹೋಗದಂತೆ ತಡೆದವರು ಯಾರು? ನಾವು ಹಲವು ದಿನಗಳಿಂದ ಮಕರದ್ವಾರದ ಮೆಟ್ಟಿಲುಗಳ ಮುಂದೆ ಪ್ರತಿಭಟನೆ ನಡೆಸುತ್ತಿದ್ದೇವೆ ಮತ್ತು ಒಳಗೆ ಪ್ರವೇಶಿಸುವವರಿಗೆ ಮತ್ತು ಹೊರಗೆ ಬರುವವರಿಗೆ ಸದಾ ಸ್ಥಳವನ್ನು ಬಿಟ್ಟಿರುತ್ತೇವೆ’’ಎಂದರು.

ಭಾರತದ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ ಬಿಜೆಪಿಗೆ ಒಂದಿನಿತೂ ಗೌರವವಿಲ್ಲ ಎಂದು ಪ್ರಿಯಾಂಕಾ ಆರೋಪಿಸಿದರು.

ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ಅವರು ಪ್ರತಿಪಕ್ಷಗಳ ಪ್ರತಿಭಟನೆ ಕುರಿತು ಬಿಜೆಪಿ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಚಿತ್ರವನ್ನು ಬೆಟ್ಟು ಮಾಡಿ, ಅಮಿತ್ ಶಾ ಅಂಬೇಡ್ಕರ್‌ರನ್ನು ಅವಮಾನಿಸಿದ ರೀತಿ ಮತ್ತು ನಂತರ ಇಂದು ಬೆಳಿಗ್ಗೆ ಎಕ್ಸ್‌ನಲ್ಲಿ ಅಂಬೇಡ್ಕರ್ ಚಿತ್ರವನ್ನು ತಿರುಚಿದ್ದು,ಬಾಬಾ ಸಾಹೇಬರ ಪ್ರತಿಮೆಯನ್ನು ಧ್ವಂಸಗೊಳಿಸುವ ಮನಃಸ್ಥಿತಿಯನ್ನು ತೋರಿಸಿದೆ. ಅವರನ್ನು ಯಾರು ನಂಬುತ್ತಾರೆ? ಮೀಸಲಾತಿಯನ್ನು ಅಂತ್ಯಗೊಳಿಸುವುದಿಲ್ಲ,ಸಂವಿಧಾನವನ್ನು ಬದಲಿಸಲು ತಾವು ಬಯಸಿಲ್ಲ ಎಂದು ಅವರು ಹೇಳುತ್ತಾರೆ. ಅಂಬೇಡ್ಕರ್ ಬಗ್ಗೆ ಚೂರೂ ಗೌರವವಿಲ್ಲದ ಬಿಜೆಪಿ ಅವರ ಬಗ್ಗೆ ಇಂತಹ ಮಾತುಗಳನ್ನಾಡುತ್ತಿದೆ ಎಂದರು.

ಇಂಡಿಯಾ ಮೈತ್ರಿಕೂಟದ ಸಂಸದರು ಸಂಸತ್ತಿನಲ್ಲಿ ತಮ್ಮ ಪ್ರತಿಭಟನೆ ಸಂದರ್ಭ ಅಮೆರಿಕದ ಬಿಲಿಯಾಧಿಪತಿ ಜಾಜ್ ಸೊರೊಸ್ ಪೋಟೊ ಹಿಡಿದುಕೊಂಡಿದ್ದಂತೆ ತೋರಿಸುವ ಚಿತ್ರವನ್ನು ಬಿಜೆಪಿ ಗುರುವಾರ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿತ್ತು.

ಮೋದಿ,ಶಾ ರಾಜೀನಾಮೆಗೆ ಆಗ್ರಹ:

ಈ ನಡುವೆ ಪ್ರತಿಪಕ್ಷದ ಮೇಲೆ ದಾಳಿ ನಡೆಸಿದ್ದಕ್ಕಾಗಿ ಅಮಿತ್ ಶಾ,ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ಸದಸ್ಯರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದರೆ,ಶಾ ಅವರು ಸುದ್ದಿಗೋಷ್ಠಿಯನ್ನು ನಡೆಸಿ,ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ ಮತ್ತು ಸಂವಿಧಾನ ವಿರೋಧಿಯಾಗಿದೆ ಎಂದು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News