ಉತ್ತರ ಪ್ರದೇಶ | ಮಾಂಸಾಹಾರ ತಂದಿದ್ದಕ್ಕೆ ಉಚ್ಛಾಟನೆಗೊಂಡ ಮೂವರು ಬಾಲಕರನ್ನು ಬೇರೆ ಶಾಲೆಗೆ ಸೇರಿಸಿ: ಜಿಲ್ಲಾಧಿಕಾರಿಗೆ ಹೈಕೋರ್ಟ್ ನಿರ್ದೇಶ
ಪ್ರಯಾಗ್‌ರಾಜ್: ಮಾಂಸಾಹಾರ ತಂದ ಆರೋಪದಲ್ಲಿ ಶಾಲೆಯಿಂದ ಉಚ್ಛಾಟನೆಗೊಂಡಿರುವ ಮೂವರು ಬಾಲಕರಿಗೆ ಅಲಹಾಬಾದ್ ಉಚ್ಚ ನ್ಯಾಯಾಲಯ ನೆರವು ನೀಡಲು ಮುಂದೆ ಬಂದಿದೆ.
ಅಮ್ರೋಹದ ಸಬ್ರಾ ಹಾಗೂ ಇತರ ಮೂವರು ಸಲ್ಲಿಸಿದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸಿದ್ಧಾರ್ಥ ಹಾಗೂ ಎಸ್.ಸಿ. ಶರ್ಮಾ ಅವರನ್ನು ಒಳಗೊಂಡ ಪೀಠ ಮಂಗಳವಾರ ವಿಚಾರಣೆ ನಡೆಸಿತು.
ಈ ಮೂವರು ಮಕ್ಕಳನ್ನು ಎರಡು ವಾರಗಳ ಒಳಗೆ ಸಿಬಿಎಸ್‌ಇ ಮಾನ್ಯತೆ ಹೊಂದಿರುವ ಬೇರೆ ಶಾಲೆಗೆ ಸೇರಿಸಬೇಕು. ಅಲ್ಲದೆ, ಅನುಸರಣೆ ಕುರಿತು ಅಫಿಡಾವಿಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಪೀಠ ಅಮ್ರೋಹದ ಜಿಲ್ಲಾಧಿಕಾರಿ ಅವರಿಗೆ ನಿರ್ದೇಶಿಸಿತು.
ಮಕ್ಕಳು ಶಾಲೆಗೆ ಮಾಂಸಾಹಾರ ತಂದಿರುವುದಕ್ಕೆ ಪ್ರಾಂಶುಪಾಲರು ಆಕ್ಷೇಪಿಸಿದ್ದರು ಹಾಗೂ ಅವರನ್ನು ಶಾಲೆಯಿಂದ ಉಚ್ಛಾಟಿಸಿದ್ದರು ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
In Amroha, a Muslim nursery student was expelled from Hilton Public School due to allegations of bringing non-veg food.
— أمينة Amina (@AminaaKausar) September 6, 2024
The principal reportedly justified the expulsion by claiming they cannot teach students who allegedly harm Hindus, destroy temples, or advocate for religious… pic.twitter.com/3LWy51nQJv
ಶಾಲೆಯ ಕ್ರಮದಿಂದಾಗಿ ಮಕ್ಕಳ ವಿದ್ಯಾಭ್ಯಾಸದ ಹಕ್ಕಿಗೆ ಧಕ್ಕೆ ಉಂಟಾಗಿದೆ ಎಂದು ದೂರುದಾರರ ಪರ ವಕೀಲರು ಪ್ರತಿಪಾದಿಸಿದರು. ಡಿಸೆಂಬರ್ 17ರಂದು ನೀಡಿರುವ ಆದೇಶದಲ್ಲಿ ಈ ನಿರ್ದೇಶನಗಳನ್ನು ನೀಡಿರುವ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು 2025 ಜನವರಿ 6ಕ್ಕೆ ಮುಂದೂಡಿದೆ.
ಅಮ್ರೋಹದ ಜಿಲ್ಲಾಧಿಕಾರಿ ಅಫಿಡಾವಿಟ್ ಸಲ್ಲಿಸಲು ವಿಫಲವಾದರೆ, ಅವರು ಮುಂದಿನ ವಿಚಾರಣೆಯ ದಿನಾಂಕದಂದು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಪೀಠ ಹೇಳಿದೆ.