ಚಂದ್ರಯಾನ- 4 ಸೇರಿದಂತೆ 5 ಬಾಹ್ಯಾಕಾಶ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
ಹೊಸದಿಲ್ಲಿ : ಚಂದ್ರಯಾನ-4 ಸೇರಿದಂತೆ 31,772 ಕೋಟಿ ರೂಪಾಯಿ ವೆಚ್ಚದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದ ಐದು ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟವು ಬುಧವಾರ ಅನುಮೋದನೆ ನೀಡಿದೆ. ಇದರೊಂದಿಗೆ ಇಸ್ರೋದ ಬಹುತೇಕ 2040ರವರೆಗಿನ ಮಾರ್ಗನಕ್ಷೆಗೆ ಚಾಲನೆ ದೊರೆತಿದೆ.
ಚಂದ್ರಯಾನ- 4 ಯೋಜನೆ, ಶುಕ್ರ ಯೋಜನೆ, ಸುಧಾರಿತ ಗಗನಯಾನ ಯೋಜನೆ, ಭಾರತೀಯ ಅಂತರಿಕ್ಷ ನಿಲ್ದಾಣ ಯೋಜನೆ ಮತ್ತು ‘ಸೂರ್ಯ’ ಹೆಸರಿನ ನೂತನ ರಾಕೆಟ್ ಅಭಿವೃದ್ಧಿ - ಈ ಐದು ಯೋಜನೆಗಳಿಗೆ ಪ್ರಧನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿತು.
ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಬಳಿಕ ಭೂಮಿಗೆ ಮರಳುವ ಮತ್ತು ಚಂದ್ರನ ಮಾದರಿಗಳನ್ನು ಸಂಗ್ರಹಿಸಿ ಭೂಮಿಯಲ್ಲಿ ವಿಶ್ಲೇಷಿಸುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಚಂದ್ರಯಾನ-4 ಯೋಜನೆಯಾಗಿದೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತೀಯನೊಬ್ಬ 2040ರ ವೇಳೆಗೆ ಚಂದ್ರನ ಮೇಲೆ ಇಳಿದು ಭೂಮಿಗೆ ಸುರಕ್ಷಿತವಾಗಿ ಮರಳುವ ಯೋಜನೆಯನ್ನು ರೂಪಿಸಲಾಗಿದೆ. ಇದಕ್ಕಾಗಿ 2,104 ಕೋಟಿ ರೂ. ಹಣವನ್ನು ಒದಗಿಸಲಾಗಿದೆ.
2013ರಲ್ಲಿ ನಡೆದ ಯಶಸ್ವಿ ಮಂಗಳ ಗ್ರಹ ಯಾನದ ಬಳಿಕ, ಇನ್ನೊಂದು ನೆರೆಯ ಗ್ರಹ ಶುಕ್ರನ ಬಗ್ಗೆ ಅಧ್ಯಯನ ನಡೆಸಲು ಗಗನನೌಕೆಯನ್ನು ಕಳುಹಿಸುವುದು ಶುಕ್ರ ಯೋಜನೆಯಾಗಿದೆ. ಇದಕ್ಕಾಗಿ ಇಸ್ರೋ ವೀನಸ್ ಆರ್ಬಿಟರ್ ಮಿಶನ್ ಯೋಜನೆಯನ್ನು ಅಭಿವೃದ್ಧಿಪಡಿಸಲಿದೆ.
► ಆ್ಯನಿಮೇಶನ್ ಗಾಗಿ ನೂತನ ರಾಷ್ಟ್ರಿಯ ಕೇಂದ್ರ ಸ್ಥಾಪನೆ
ಆ್ಯನಿಮೇಶನ್, ವಿಶುವಲ್ ಇಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್‌ಟೆಂಡಡ್ ರಿಯಲಿಟಿ (ಎವಿಜಿಸಿ-ಎಕ್ಸ್‌ಆರ್)ಗಾಗಿ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರ (ಎನ್‌ಸಿಒಇ)ವೊಂದನ್ನು ಸ್ಥಾಪಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟವು ಬುಧವಾರ ಅನುಮೋದನೆ ನೀಡಿದೆ. ಇದನ್ನು ಮುಂಬೈಯಲ್ಲಿ ಲಾಭದ ಉದ್ದೇಶವಿಲ್ಲದ ಸಂಸ್ಥೆಯಾಗಿ ಸ್ಥಾಪಿಸಲಾಗುವುದು.
‘‘ನೂತನ ಅವಕಾಶಗಳನ್ನು ಸೃಷ್ಟಿಸುವುದಕ್ಕಾಗಿ ಆರ್ಥಿಕತೆಯಲ್ಲಿನ ನೂತನ ಬೆಳವಣಿಗೆಗಳನ್ನು ಬಳಸಿಕೊಳ್ಳುವುದು ಎನ್‌ಸಿಒಇ ಸ್ಥಾಪನೆಯ ಉದ್ದೇಶವಾಗಿದೆ’’ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.