ಕಾಶ್ಮೀರದಾದ್ಯಂತ ಶೀತಲ ವಾತಾವರಣ; ಶೂನ್ಯಕ್ಕಿಂತ ಕೆಳಗಿಳಿದ ಉಷ್ಣತೆ
Update: 2024-12-26 17:32 GMT
ಶ್ರೀನಗರ: ಕಾಶ್ಮೀರದಾದ್ಯಂತ ತೀವ್ರ ಚಳಿಯ ವಾತಾವರಣ ನೆಲೆಸಿದ್ದು, ಕನಿಷ್ಠ ಉಷ್ಣತೆಯು ಶೂನ್ಯಕ್ಕಿಂತ ಹಲವು ಡಿಗ್ರಿಗಳಷ್ಟು ಕುಸಿದಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಈ ವಲಯಕ್ಕೆ ಪಶ್ಚಿಮದಿಂದ ಶೀತಮಾರುತ ಬೀಸುವ ನಿರೀಕ್ಷೆಯಿದ್ದು, ಶುಕ್ರವಾರ ಮತ್ತು ಶನಿವಾರ ಎತ್ತರದ ಪ್ರದೇಶಗಳಲ್ಲಿ ಲಘು ಹಿಮಪಾತವಾಗುವ ಸಾಧ್ಯತೆಯಿದೆ.
ಕಾಶ್ಮೀರದ ಹೆಚ್ಚಿನ ಪ್ರದೇಶಗಳಲ್ಲಿ ರಾತ್ರಿಯ ಉಷ್ಣತೆಯು ಕುಸಿದಿದೆ. ಕಣಿವೆಯಲ್ಲಿ ಶೀತಲ ಪರಿಸ್ಥಿತಿ ಮುಂದುವರಿದಿದೆ.
ಶೀತಲ ಉಷ್ಣತೆಯಿಂದಾಗಿ ನೀರು ಪೂರೈಕೆ ವ್ಯವಸ್ಥೆ ಸ್ಥಗಿತಗೊಂಡಿದೆ. ದಾಲ್ ಸರೋವರ ಸೇರಿದಂತೆ ಹಲವು ಜಲಮೂಲಗಳ ಮೇಲ್ಭಾಗವನ್ನು ಮಂಜಿನ ತೆಳು ಪದರವು ಆವರಿಸಿದೆ.
ಬುಧವಾರ ರಾತ್ರಿ ಶ್ರೀನಗರದಲ್ಲಿ ಮೈನಸ್ 7 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿತ್ತು. ಸ್ಕೀಯಿಂಗ್ ಚಟುವಟಿಕೆಗಳಿಗೆ ಹೆಸರಾಗಿರುವ, ಉತ್ತರ ಕಾಶ್ಮೀರದ ಪಟ್ಟಣ ಗುಲ್ಮಾರ್ಗ್‌ನಲ್ಲಿ ಮೈನಸ್ 6 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇತ್ತು.