ಕಾಂಗ್ರೆಸ್ ಪಕ್ಷ ಬಲಗೊಳ್ಳುತ್ತಿದೆ, ಅದರೊಂದಿಗೆ ಎನ್‌ಸಿಪಿ ವಿಲೀನಗೊಳ್ಳಲೂಬಹುದು: ಶರದ್ ಪವಾರ್

Update: 2024-05-11 15:09 GMT

ಶರದ್ ಪವಾರ್ | PC: PTI 

ಮುಂಬೈ: ಈ ಬಾರಿ ಇಂಡಿಯಾ ಮೈತ್ರಿಕೂಟವು ಮುಂದಿನ ಸರಕಾರವನ್ನು ಸ್ಥಾಪಿಸಲಿ, ಬಿಡಲಿ ಕಾಂಗ್ರೆಸ್ ಪಕ್ಷವು ಬಲಗೊಳ್ಳುತ್ತಿದೆ ಎಂದು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) (ಶರದ್ ಪವಾರ್ ಬಣ)ದ ಮುಖ್ಯಸ್ಥ ಶರದ್ ಪವಾರ್ ಅಭಿಪ್ರಾಯಪಟ್ಟಿದ್ದಾರೆ.

ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ, ಹೆಚ್ಚೆಚ್ಚು ಪ್ರಾದೇಶಿಕ ಪಕ್ಷಗಳು ಮುಂದಿನ ತಿಂಗಳುಗಳಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗುತ್ತವೆ ಹಾಗೂ ಕೆಲವು ಪಕ್ಷಗಳು ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳಲೂ ಬಯಸಬಹುದು ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಶರದ್ ಪವಾರ್ ಹೇಳಿದ್ದಾರೆ. ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳಲು ಬಯಸುವ ಪಕ್ಷಗಳಲ್ಲಿ ತನ್ನ ಪಕ್ಷವೂ ಒಂದಾಗಿರಬಹುದು ಎಂದು ಅವರು ಹೇಳಿದರು.

ಶರದ್ ಪವಾರ್ ಒಂದು ಕಾಲದಲ್ಲಿ ಕಾಂಗ್ರೆಸ್‌ನಲ್ಲೇ ಇದ್ದವರು. ಕಾಂಗ್ರೆಸ್ ತೊರೆದ ಬಳಿಕವೂ ಹಲವು ಸಂದರ್ಭಗಳಲ್ಲಿ ಅದರೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ.

ಚುನಾವಣಾ ನಂತರದ ಸಾಧ್ಯತೆಗಳ ಬಗ್ಗೆ ಮಾತನಾಡಿದ ಪವಾರ್, ‘‘ನರೇಂದ್ರ ಮೋದಿಯೊಂದಿಗೆ ಹೊಂದಿಕೊಳ್ಳುವುದು ಮತ್ತು ಅವರನ್ನು ಅರ್ಥಮಾಡಿಕೊಳ್ಳುವುದು ಕಷ್ಟ’’ ಎಂದು ಹೇಳಿದರು.

ಶರದ್ ಪವಾರ್‌ರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವು 2023ರಲ್ಲಿ ವಿಭಜನೆಗೊಂಡಿದೆ. ಪಕ್ಷವನ್ನು ವಿಭಜಿಸಿದ ಅವರ ಸಹೋದರನ ಮಗ ಅಜಿತ್ ಪವಾರ್ ತನ್ನೊಂದಿಗೆ ಹೆಚ್ಚಿನ ಶಾಸಕರು ಮತ್ತು ಸಂಸದರನ್ನು ಕರೆದುಕೊಂಡು ಹೋಗಿದ್ದಾರೆ. ಅದೂ ಅಲ್ಲದೆ, ಪಕ್ಷದ ಚುನಾವಣಾ ಚಿಹ್ನೆಯನ್ನೂ ಚುನಾವಣಾ ಆಯೋಗವು ಅಜಿತ್ ಪವಾರ್ ನೇತೃತ್ವದ ಬಣಕ್ಕೆ ನೀಡಿದೆ. ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಳಿ ಕೆಲವೇ ನಾಯಕರು ಉಳಿದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಅವರು ಮಹಾ ವಿಕಾಸ ಅಘಾಡಿ (ಎಮ್‌ವಿಎ) ಮೈತ್ರಿಕೂಟದ ಹೊಣೆಯನ್ನು ಹೊತ್ತಿರುವಂತೆಯೇ, ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಅವರು ಹೆಚ್ಚಿನ ಮಹತ್ವವನ್ನು ನೀಡಿರುವುದು ಸ್ಪಷ್ಟವಾಗಿದೆ.

ಕಾಂಗ್ರೆಸ್‌ನೊಂದಿಗೆ ಎನ್‌ಸಿಪಿಯ ವಿಲೀನವು ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರ ವಿಕಾಸ ಅಘಾಡಿಯ ಯಶಸ್ಸನ್ನು ಹೆಚ್ಚಿಸಬಹುದು ಎನ್ನಲಾಗಿದೆ. ಅದೇ ವೇಳೆ, ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ಶರದ್ ಪವಾರ್‌ರ ಮಗಳು ಸುಪ್ರಿಯಾ ಸುಳೆ ಗೆದ್ದರೆ, ಅಜಿತ್ ಪವಾರ್ ಜೊತೆ ಹೋಗಿರುವ ಹಲವರು ʼಸಾಹೇಬರ ಪಕ್ಷ’ಕ್ಕೆ ಮರಳಬಹುದು ಎಂದು ನಿರೀಕ್ಷಿಸಲಾಗಿದೆ. ಪವಾರ್‌ರ ಕರ್ಮಭೂಮಿಯಾಗಿರುವ ಬಾರಾಮತಿ ಕ್ಷೇತ್ರದಲ್ಲಿ ಸುಪ್ರಿಯಾ ಸುಳೆ ಮತ್ತು ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ನಡುವೆ ಬಿರುಸಿನ ಸ್ಪರ್ಧೆಯಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News