ಉತ್ತರಪ್ರದೇಶ | ಸಂಭಾಲ್ ನ ಜಾಮಾ ಮಸೀದಿ ಆವರಣದಲ್ಲಿ ಸಮೀಕ್ಷೆಗೆ ವಿರೋಧ : ಘರ್ಷಣೆಗೆ ತಿರುಗಿದ ಸ್ಥಳೀಯರ ಪ್ರತಿಭಟನೆ
ಲಕ್ನೋ: ಉತ್ತರಪ್ರದೇಶದ ಸಂಭಾಲ್ ನ ʼಜಾಮಾ ಮಸೀದಿʼ ಆವರಣದಲ್ಲಿ ಸಮೀಕ್ಷೆ ವಿರೋಧಿಸಿ ಸ್ಥಳೀಯರು ನಡೆಸಿದ ಪ್ರತಿಭಟನೆ ಘರ್ಷಣೆಗೆ ತಿರುಗಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದ್ದಾರೆ.
ರವಿವಾರ ಸಮೀಕ್ಷಾ ತಂಡ ಆಗಮಿಸುತ್ತಿದ್ದಂತೆ ಜಾಮಾ ಮಸೀದಿ ಬಳಿ ನೂರಾರು ಸ್ಥಳೀಯರು ಜಮಾಯಿಸಿ ಪ್ರತಿಭಟನೆ ನಡಸಿದ್ದಾರೆ. ಪೊಲೀಸ್ ಭದ್ರತೆಯೊಂದಿಗೆ ಬಂದಿದ್ದ ಸಮೀಕ್ಷಾ ತಂಡದ ಮೇಲೆ ಗುಂಪು ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದೆ ಎಂದು ಆರೋಪಿಸಲಾಗಿದೆ.
ಮೊಘಲ್ ಚಕ್ರವರ್ತಿ ಬಾಬರ್ 1529ರಲ್ಲಿ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಿದ್ದಾರೆಂದು ವಕೀಲ ವಿಷ್ಣು ಶಂಕರ್ ಜೈನ್, ಸಂಭಾಲ್ ನ ಕೇಲಾ ದೇವಿ ದೇವಸ್ಥಾನದ ರಿಷಿರಾಜ್ ಗಿರಿ ಸೇರಿದಂತೆ ಐವರು ಫಿರ್ಯಾದಿಗಳು ಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯಲ್ಲಿ ಜಾಮಾ ಮಸೀದಿಯನ್ನು ಹರಿ ಹರ್ ಮಂದಿರ ಎಂದು ವಾದಿಸಿದ್ದರು. ಇದರಿಂದಾಗಿ ಮಸೀದಿಯ ಆವರಣದಲ್ಲಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ನ್ಯಾಯಾಲಯ ಸೂಚಿಸಿತ್ತು.
ಜಾಮಾ ಮಸೀದಿಯ ಆವರಣದಲ್ಲಿ ನವೆಂಬರ್ 19ರಂದು ಕೂಡ ಸಮೀಕ್ಷೆ ನಡೆಸಲಾಗಿತ್ತು, ಸ್ಥಳೀಯ ಪೊಲೀಸರು ಮತ್ತು ಮಸೀದಿಯ ಆಡಳಿತ ಸಮಿತಿಯ ಸದಸ್ಯರು ಈ ವೇಳೆ ಉಪಸ್ಥಿತರಿದ್ದರು. ಈ ವೇಳೆ ಸಮೀಕ್ಷೆಯನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಸ್ಥಳೀಯ ಸಂಸದ ಜಿಯಾ ಉರ್ ರೆಹಮಾನ್ ಮಧ್ಯಸ್ಥಿಕೆ ಬಳಿಕ ಪ್ರತಿಭಟನಾಕಾರರು ವಾಪಾಸ್ಸಾಗಿದ್ದರು.