ಭ್ರಷ್ಟಾಚಾರದ ದೂರುಗಳು: ಮುಂಚೂಣಿಯಲ್ಲಿ ಕೇಂದ್ರ ಗೃಹ ಸಚಿವಾಲಯ

Update: 2023-08-21 18:26 GMT

Union Home Ministry | Photo: PTI 

ಹೊಸದಿಲ್ಲಿ: 2022ರಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ತಾನು ಗರಿಷ್ಠ ಪ್ರಮಾಣದ ಭ್ರಷ್ಟಾಚಾರದ ದೂರುಗಳನ್ನು ಸ್ವೀಕರಿಸಿದ್ದೇನೆ ಎಂದು ಕೇಂದ್ರ ವಿಚಕ್ಷಣ ಆಯೋಗವು ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ ಎಂದು thewire.in ವರದಿ ಮಾಡಿದೆ.

ಡಿಸೆಂಬರ್ 31, 2022ರವರೆಗೆ ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳ ವಿರುದ್ಧ ಒಟ್ಟು 1,15,203 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಆ ವರದಿಯಲ್ಲಿ ಹೇಳಲಾಗಿದೆ.

ಈ ದೂರುಗಳ ಪೈಕಿ 85,437 ದೂರುಗಳನ್ನು ವಿಲೇವಾರಿ ಮಾಡಲಾಗಿದ್ದು, 29,766 ದೂರುಗಳು ಬಾಕಿ ಇವೆ. ಉಳಿದ 22,034 ದೂರುಗಳು ಮೂರು ತಿಂಗಳಿಗಿಂತ ಹೆಚ್ಚು ಅವಧಿಯಿಂದ ಬಾಕಿ ಉಳಿದಿವೆ.

ಈ ದೂರುಗಳ ಪೈಕಿ ಅತಿ ಹೆಚ್ಚು ದೂರುಗಳು ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಸೇರಿದ್ದು (46,643), ಇದರ ಬೆನ್ನಿಗೆ ರೈಲ್ವೆ ಸಚಿವಾಲಯ (10,580) ಹಾಗೂ ಬ್ಯಾಂಕ್‍ಗಳು (8,129) ವಿರುದ್ಧ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಕೇಂದ್ರ ವಿಚಕ್ಷಣ ಆಯೋಗವು ಕೇಂದ್ರ ಸರ್ಕಾರ ಮಾಲಕತ್ವದ ಅಥವಾ ನಿಯಂತ್ರಣದ ಸಂಸ್ಥೆಗಳಲ್ಲಿನ ವಿಚಕ್ಷಣಾ ಆಡಳಿತದ ಮೇಲ್ವಿಚಾರಣೆ ಮತ್ತು ಮೇಲುಸ್ತುವಾರಿ ಹೊಂದಿರುವ ಸರ್ವೋಚ್ಚ ಸಂಸ್ಥೆಯಾಗಿದ್ದು, ಆಯೋಗದ ಸಲಹಾ ವ್ಯಾಪ್ತಿಗೆ ಒಳಪಟ್ಟಿದೆ.

ಈ ಸಂಸ್ಥೆಯು ಭ್ರಷ್ಟಾಚಾರ ಪ್ರಕರಣಗಳ ಕುರಿತು ವಿಚಾರಣೆ ನಡೆಸುವ ಅಧಿಕಾರ ಹೊಂದಿದ್ದು, ಆಡಳಿತಾತ್ಮಕ ವ್ಯವಸ್ಥೆಯನ್ನು ಪಾರದರ್ಶಕ ಹಾಗೂ ವಿಷಯಾತ್ಮಕಗೊಳಿಸುವ ಹೊಣೆಗಾರಿಕೆ ಹೊಂದಿದೆ.

ಗೃಹ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ 46,643 ದೂರುಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ 23,919 ದೂರುಗಳನ್ನು ವಿಲೇವಾರಿ ಮಾಡಲಾಗಿದೆ. ಇನ್ನುಳಿದಂತೆ 22,724 ದೂರುಗಳು ಬಾಕಿ ಉಳಿದಿದ್ದು, 19,198 ದೂರುಗಳು ಮೂರು ತಿಂಗಳ ಅವಧಿಗಿಂತ ಹೆಚ್ಚು ಕಾಲದಿಂದ ಬಾಕಿ ಉಳಿದಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ರೈಲ್ವೆಗೆ ಸಂಬಂಧಿಸಿದಂತೆ 10,580 ದೂರುಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ 9,663 ದೂರುಗಳನ್ನು ವಿಲೇವಾರಿ ಮಾಡಲಾಗಿದೆ. 917 ದೂರುಗಳು ಬಾಕಿ ಉಳಿದಿದ್ದು, 9 ದೂರುಗಳು ಮೂರು ತಿಂಗಳಿಗಿಂತ ಹೆಚ್ಚು ಅವಧಿಯಿಂದ ಬಾಕಿ ಉಳಿದಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಬ್ಯಾಂಕ್‍ಗಳ ಅಧಿಕಾರಿಗಳು ಹಾಗೂ ನೌಕರರ ವಿರುದ್ಧದ 8,129 ದೂರುಗಳ ಪೈಕಿ 7,762 ದೂರುಗಳನ್ನು ವಿಲೇವಾರಿ ಮಾಡಲಾಗಿದೆ. 367 ದೂರುಗಳು ಬಾಕಿ ಉಳಿದಿದ್ದು, 78 ದೂರುಗಳು ಮೂರು ತಿಂಗಳಿಗಿಂತ ಹೆಚ್ಚು ಅವಧಿಯಿಂದ ಬಾಕಿ ಉಳಿದಿವೆ.

ರಾಷ್ಟ್ರ ರಾಜಧಾನಿ ದಿಲ್ಲಿ ಸರ್ಕಾರದ ನೌಕರರ ವಿರುದ್ಧ 7,370 ದೂರುಗಳು ದಾಖಲಾಗಿವೆ ಎಂದೂ ವರದಿಯಲ್ಲಿ ಹೇಳಲಾಗಿದೆ. ಈ ದೂರುಗಳ ಪೈಕಿ 6,804 ದೂರುಗಳನ್ನು ವಿಲೇವಾರಿ ಮಾಡಲಾಗಿದ್ದು, ಮೂರು ತಿಂಗಳ ಅವಧಿಗಿಂತ ಹೆಚ್ಚು ಕಾಲದಿಂದ ಬಾಕಿ ಉಳಿದಿರುವ 18 ದೂರುಗಳೂ ಸೇರಿದಂತೆ ಒಟ್ಟು 566 ದೂರುಗಳು ಬಾಕಿ ಉಳಿದಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

2022ನೇ ಸಾಲಿನಲ್ಲಿ ಆಯೋಗದ ಸಲಹೆಯಂತೆ 16 ಇಲಾಖೆಗಳಲ್ಲಿನ 27 ಪ್ರಕರಣಗಳನ್ನು ವರ್ಗಾಯಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹೀಗೆ ವರ್ಗಾವಣೆಗೊಂಡಿರುವ ದೂರುಗಳ ಪೈಕಿ ರೈಲ್ವೆ ಸಚಿವಾಲಯ (7), ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (1), ವಿ.ಒ.ಚಿದಂಬರನರ್ ಬಂದರು ಪ್ರಾಧಿಕಾರ (1), ಭಾರತೀಯ ಸ್ಟೇಟ್ ಬ್ಯಾಂಕ್ (2), ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ (1), ಇಂಡಸ್ಟ್ರಿಯಲ್ ಡೆವೆಲಪ್ ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (1), ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (1), ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ (1), ಕಲ್ಲಿದ್ದಲು ಸಚಿವಾಲಯ (2), ಭಾರತೀಯ ಅಣು ಶಕ್ತಿ ನಿಗಮ ನಿಯಮಿತ (2), ಬರ್ಡ್ ಗ್ರೂಪ್ ಆಫ್ ಕಂಪನೀಸ್ (1), ಜವಳಿ ಸಚಿವಾಲಯ (1), ಎನ್‍ಬಿಸಿಸಿ (ಇಂಡಿಯಾ) ಲಿಮಿಟೆಡ್ (3), ದಿಲ್ಲಿ ರಾಜ್ಯ ಕೈಗಾರಿಕಾ ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮ (1), ದಿಲ್ಲಿ ಜಲ ಮಂಡಳಿ (1) ಹಾಗೂ ದಿಲ್ಲಿ ಟ್ರಾನ್ಸ್ಕೊ ಲಿಮಿಟೆಡ್ (1) ಸೇರಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News